ಶ್ರೀರಾಮ-ಸೀತೆ ನೆಲೆಸಿದ್ದ ರಾಮದೇವರ ಬೆಟ್ಟದ ಅಭಿವೃದ್ಧಿಗೆ ಆಗ್ರಹಿಸಿ ಸಿಎಂಗೆ ಅಶ್ವಥ್ ನಾರಾಯಣ ಪತ್ರ
ಬೆಳಗಾವಿ, ಡಿಸೆಂಬರ್ 21: ರಾಮನಗರ ಜಿಲ್ಲೆಯ ಐತಿಹಾಸಿಕ ರಾಮದೇವರ ಬೆಟ್ಟವನ್ನು ಅಯೋಧ್ಯೆಯ ರಾಮ ಮಂದಿರದಂತೆಯೇ ಅಭಿವೃದ್ಧಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಮದೇವರ ಬೆಟ್ಟದ ಸಮಗ್ರ ಅಭಿವೃದ್ಧಿ ಕೋರಿ ಸಚಿವರು ಬುಧವಾರ ಪತ್ರ ಬರೆದಿದ್ದಾರೆ. ಅದರಲ್ಲಿ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ರಾಮದೇವರ ಬೆಟ್ಟದಲ್ಲಿ 19 ಎಕರೆ ಪ್ರದೇಶದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದಂತೆಯೇ ಒಂದು ದೇವಸ್ಥಾನವನ್ನು ನಿರ್ಮಿಸಲು ತ್ವರಿತವಾಗಿ ಒಂದು ಅಭಿವೃದ್ಧಿ ಸಮಿತಿಯನ್ನು ರಚಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಮದೇವರ ಬೆಟ್ಟವು ವಾನರ ಸಂತತಿಯ ಸುಗ್ರೀವನಿಂದ ಪ್ರತಿಷ್ಠಾಪಿತವಾಗಿದ್ದೆಂಬ ಐತಿಹ್ಯ ಹೊಂದಿದೆ. ಹೀಗಾಗಿ ಈ ಸ್ಥಳವನ್ನು ದಕ್ಷಿಣದ ಅಯೋಧ್ಯೆಯಂತೆ ಬೆಳೆಸಬೇಕೆನ್ನುವುದು ರಾಮನಗರ ಜಿಲ್ಲೆಯ ಸಾರ್ವಜನಿಕರು ಮತ್ತು ಭಕ್ತಾದಿಗಳ ಒತ್ತಾಯವಾಗಿದೆ. ಬೆಂಗಳೂರಿಗೆ ಸನಿಹದಲ್ಲಿರುವ ಈ ಬೆಟ್ಟವನ್ನು ಭಕ್ತರ ಅಪೇಕ್ಷೆಯಂತೆ ಅಭಿವೃದ್ಧಿಪಡಿಸುವುದರಿಂದ ಸಂಸ್ಕೃತಿ ರಕ್ಷಣೆ ಮತ್ತು ಪ್ರವಾಸೋದ್ಯಮ ಬೆಳವಣಿಗೆ ಎರಡನ್ನೂ ಸಾಧಿಸಲು ಅವಕಾಶವಾಗುತ್ತದೆ ಎಂದು ತಿಳಿಸಿದ್ದಾರೆ.

ಶ್ರೀರಾಮನು ವನವಾಸದ ದಿನಗಳಲ್ಲಿ ಸೀತೆ ಮತ್ತು ಲಕ್ಷ್ಮಣರೊಂದಿಗೆ ರಾಮದೇವರ ಬೆಟ್ಟದಲ್ಲಿ ಒಂದು ವರ್ಷದ ಮಟ್ಟಿಗೆ ಇದ್ದನೆಂಬ ನಂಬಿಕೆ ಇದೆ. ಇಲ್ಲಿರುವ ಪಾತಾಳಗಂಗೆಯ ಉದ್ಭವಕ್ಕೆ ರಾಮನೇ ಕಾರಣ ಎನ್ನುವ ಶ್ರದ್ಧೆ ಇದೆ. ಅಲ್ಲದೆ ಸಪ್ತರ್ಷಿಗಳು ಕೂಡ ಇಲ್ಲಿ ತಪಸ್ಸನ್ನು ಆಚರಿಸಿರುವ ಕುರುಹುಗಳಿವೆ. ಹಾಗೆಯೇ, ಈ ಬೆಟ್ಟವು ದೇಶದ ಏಕೈಕ ರಣಹದ್ದುಗಳ ಸಂರಕ್ಷಿತ ಪ್ರದೇಶವಾಗಿದೆ. ಈ ಪಕ್ಷಿಗಳಿಗೂ ರಾಮಾಯಣಕ್ಕೂ ಸಂಬಂಧವಿರುವುದು ಕೂಡ ಗಮನಾರ್ಹವಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಐತಿಹಾಸಿಕ ತಾಣವಾಗಿರುವ ರಾಮದೇವರ ಬೆಟ್ಟವು ತ್ರೇತಾಯುಗದಷ್ಟು ಹಿಂದಿನ ಪರಂಪರೆಯನ್ನು ಹೊಂದಿದೆ. ಇದನ್ನು ಆಕರ್ಷಕವಾಗಿ ಅಭಿವೃದ್ಧಿ ಪಡಿಸಿ, ಮುಂದಿನ ತಲೆಮಾರುಗಳಿಗೂ ದಾಟಿಸಬೇಕು ಎಂದು ಮುಖ್ಯಮಂತ್ರಿಗಳ ಜೊತೆಗೆ ಮುಜರಾಯಿ, ಹಜ್ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೂ ಪತ್ರ ಬರೆದು ಕೋರಿದ್ದಾರೆ.












Click it and Unblock the Notifications