ಪ್ರತ್ಯೇಕ ತುಳುನಾಡು ಬೇಡಿಕೆ ಇಟ್ಟವರಿಗೆ ನನ್ನ ಹತ್ತು ಪ್ರಶ್ನೆಗಳು
ಪ್ರತ್ಯೇಕ ತುಳುನಾಡು ರಾಜ್ಯ ಬೇಕೆಂದು ಹೋರಾಟ ನಡೆಸುತ್ತಿರುವವರಿಗೆ ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ ಹತ್ತು ಪ್ರಶ್ನೆಯಿರುವ ಲೇಖನವನ್ನು ಒನ್ ಇಂಡಿಯಾಗೆ ಬರೆದಿದ್ದಾರೆ (ಸಂ)
ನನ್ನ ಮಾತೃ ಭಾಷೆ ತುಳು, ಕನ್ನಡ ನಾನು ಕಲಿತದ್ದು ಒಂದನೇ ತರಗತಿಯಿಂದ. ನನ್ನ ನಾಡಿನ ಬಗ್ಗೆ ನನಗೆ ಅಭಿಮಾನವಿದೆ ಆದರೆ ಅಂಧಾಭಿಮಾನವಿಲ್ಲ.
ಯಾಕೆಂದರೆ ನಮಗೆ ರಾಜ್ಯಗಳಿಗಿಂತ ಮುಖ್ಯವಾಗಿ ಬೇಕಾದ್ದು ದೇಶ. ಭಾರತದ ಪ್ರತೀ ಇಂಚು ಜಾಗವೂ ನನ್ನದು, ಭಾರತೀಯರು ನನ್ನವರು ಅನ್ನುವ ಭಾವನೆ ನನ್ನಲ್ಲಿದೆ. ಈ ತುಳುನಾಡು ಬೇಕೆನ್ನುವವರಿಗೂ ಪ್ರತ್ಯೇಕ ದೇಶ ಬೇಕೆನ್ನುವವರಿಗೂ ಯಾವುದೇ ವ್ಯತ್ಯಾಸವಿಲ್ಲ!
ಯಾಕೆಂದರೆ ಪ್ರತ್ಯೇಕತಾವಾದ ಯಾವತ್ತಿಗೂ ಅಭಿವೃದ್ಧಿಗೆ ಪೂರಕವಲ್ಲ. ಆದರೂ ಈ ತುಳುನಾಡಿನ ಬಗ್ಗೆ ಚರ್ಚೆಗೆ ಬಂದಾಗ ಹಲವು ವಿಚಾರಗಳು ನನ್ನ ಮನಸ್ಸಿಗೆ ಬಂತು. ಕನ್ನಡ ರಾಜ್ಯೋತ್ಸವದ ದಿನದಂದು ಮತ್ತೆ ಪ್ರತ್ಯೇಕ ತುಳುನಾಡು ರಾಜ್ಯದ ಬಗ್ಗೆ ಕೂಗು ಪ್ರತಿಧ್ವನಿಸಿತು. (ಎತ್ತಿನಹೊಳೆ ಯೋಜನೆ ವಿಚಾರದಲ್ಲಿ ಆತುರ ಬೇಡ)
ಅಂಡರ್ ವರ್ಲ್ಡಿಂದ ಹಿಡಿದು ಮಿಸ್ ವರ್ಲ್ಡ್ ವರೆಗೆ ಕುಖ್ಯಾತಿ ಹಾಗೂ ಖ್ಯಾತಿ ಪಡೆದವರು ತುಳುವರು, ಮಸಾಲೆ ದೋಸೆಯಂತಹ ಅನೇಕ ತಿಂಡಿಗಳನ್ನು ಜಗತ್ತಿಗೆ ಪರಿಚಯಿಸಿದವರು, ಮೀನಿನ ಹಾಗೂ ಕೋಳಿಯ ಬಗೆಬಗೆಯ ಪದಾರ್ಥಗಳನ್ನು ಪರಿಚಯಿಸಿದವರು ನಾವು.
ತುಳುವರು ಸಿನಿಮಾ ಕ್ಷೇತ್ರದಲ್ಲಿಯೂ ಮಿಂಚುತ್ತಿದ್ದಾರೆ, ಇಲ್ಲಿಯ ಸಂಸ್ಕೃತಿ ಬಲು ವಿಶಿಷ್ಟ, ಕೋಮುಗಲಭೆಗೆ ನಮ್ಮ ತುಳುನಾಡು ಕುಖ್ಯಾತಿ ಪಡೆದಿದ್ದರೂ ಅದಕ್ಕೂ ಮೂರು ಪಟ್ಟು ಹೆಚ್ಚು ಸಾಮರಸ್ಯತೆಯಿಂದ ಬದುಕುತ್ತಿರುವವರು.
ಇಂತಹ ತುಳುವರು ಸಂಕುಚಿತವಾಗಿ ಯೋಚಿಸಬೇಕೇ?ಜನರಿಗೆ ತೊಂದರೆ ಮಾಡಬಹುದಾದ ತುಳುನಾಡು ಬೇಕೇ? ಪ್ರತ್ಯೇಕ ತುಳುನಾಡು ಬೇಡಿಕೆ ಇಟ್ಟವರಿಗೆ ನನ್ನ ಹತ್ತು ಪ್ರಶ್ನೆಗಳು, ಸ್ಲೈಡಿನಲ್ಲಿ..

ಕರ್ನಾಟಕದ ಜೊತೆಗೆ ಇರುವುದು ಬೇಡ ಎಂದ ಮೇಲೆ, ಕನ್ನಡ ಯಾಕೆ ಬೇಕು?
ತುಳುನಾಡು ಪ್ರತ್ಯೇಕ ರಾಜ್ಯವಾಗಬೇಕು ಅಂದ ಮೇಲೆ, ನಾವು ಕರ್ನಾಟಕದ ಯಾವ ವಿಚಾರಗಳನ್ನೂ ಪಡೆಯಬಾರದು. ತುಳು ಭಾಷೆಗೆ ಬೇರೆಯೇ ಲಿಪಿ ಇರುವುದರಿಂದ, ಕನ್ನಡ ಲಿಪಿಯನ್ನು ಬಳಸುವುದನ್ನು ಬಿಡಬೇಕು, ಯಾವ ವ್ಯವಹಾರಕ್ಕೂ ಕನ್ನಡ ಬಳಸಬಾರದು. ಕರ್ನಾಟಕದ ಜೊತೆಗೆ ಇರುವುದು ಬೇಡ ಎಂದ ಮೇಲೆ, ಕರ್ನಾಟಕದ ಭಾಷೆ ಯಾಕೆ ಬೇಕು? ಯಾರೆಲ್ಲಾ ತುಳು ಲಿಪಿ ಮಾತ್ರ ಉಪಯೋಗಕ್ಕೆ ಸಂಪೂರ್ಣವಾಗಿ ಸಿದ್ದರಿದ್ದೀರಿ ಅವರು ಮಾತ್ರ ಈ ತುಳು ರಾಜ್ಯದ ಬೇಡಿಕೆ ಇಡಬಹುದು. ಯಾಕೆಂದರೆ ನಾವು ಪಕ್ಕದ ರಾಜ್ಯದ ಯಾವ ಭಾಷೆಯನ್ನೂ ಸರಕಾರೀ ವ್ಯವಹಾರಗಳಲ್ಲಿ ಉಪಯೋಗಿಸುವ ಕ್ರಮವಿಲ್ಲ.ಇದೆಲ್ಲಾ ವಾಸ್ತವವಾಗಿ ಸಾಧ್ಯವಾಗುವುದೆಂದಾದರೆ ಮುಂದುವರಿಯಿರಿ.

ತುಳುನಾಡು ಜಾಗದಲ್ಲಿರುವ ಆದಾಯದ ಮುಖ್ಯ ಮೂಲವೇನು?
ತುಳುನಾಡು ಅಂತಾ ಕರೆಯಲ್ಪಡುವ ಜಾಗದಲ್ಲಿರುವ ಆದಾಯದ ಮುಖ್ಯ ಮೂಲವೇನು? ಅದರ ಪ್ರಮಾಣವೇನು ಎಂದು ಯೋಚಿಸಿದ್ದೀರಾ? ಆ ಆದಾಯ ಮಾತ್ರ ನಮ್ಮ ತುಳುನಾಡಿನ ಅಭಿವೃದ್ಧಿಗೆ ಸಾಕು ಅಂತಾ ಅನ್ನಿಸುತ್ತಾ? ಯಾಕೆಂದರೆ ಕರ್ನಾಟಕದ ಮುಖ್ಯ ಆದಾಯದ ಮೂಲ ಬೆಂಗಳೂರು, ಇಲ್ಲಿನ ಆದಾಯ ರಾಜ್ಯದ ಇತರ ಭಾಗಗಳಿಗೂ ಅನುದಾನವಾಗಿ ಹಂಚಿಹೋಗುತ್ತಿರುವುದು ವಾಸ್ತವದ ಪರಿಸ್ಥಿತಿ. ಆದಾಯದ ಮೂಲವೇ ಸರಿಯಾಗಿರದ ಜಾಗದಲ್ಲಿ ಯಾವ ರೀತಿಯ ಅಭಿವೃದ್ಧಿ ನಿರೀಕ್ಷಿಸಬಹುದು? ಬೇರೆಯವರಿಂದ ಪಡೆದ ಸಾಲದಲ್ಲಿ ರಾಜ್ಯವನ್ನು ಅಭಿವೃದ್ಧಿ ಮಾಡಲು ಸಾಧ್ಯವೇ? ಕೇಂದ್ರದ ಅನುದಾನಕ್ಕೆ ಎಷ್ಟರವರೆಗೆ ಎದುರು ನೋಡಬಹುದು?

ಮನೆಮಠ ಬಿಟ್ಟುಕೊಡಲು ಎಷ್ಟು ಮಂದಿ ತುಳುವರು ಸಿದ್ದರಿದ್ದೀರಿ?
ಈಗಾಗಲೇ ನಾವು ಕೇಂದ್ರ ಸರಕಾರದ ಯೋಜನೆಗಳಾದ MRPL ಹಾಗೂ ಪಡುಬಿದ್ರಿಯ ಹಾರು ಬೂದಿ ವಿದ್ಯುತ್ ಸ್ಥಾವರಕ್ಕೆ ಜಾಗ ಕೊಟ್ಟು ಅನೇಕ ಸಮಸ್ಯೆಗಳನ್ನು ಎದುರಿಸಿದವರು ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದೆ ತುಳು ರಾಜ್ಯವಾಗಿ, ಅಲ್ಲಿ ರಚಿಸಲ್ಪಡುವ ಸರಕಾರಗಳು ಅಭಿವೃದ್ಧಿಯ ದೃಷ್ಟಿಯಿಂದ ಹಲವು ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗುತ್ತವೆ ಯಾಕೆಂದರೆ ಪ್ರಜೆಗಳಿಗೆ ಉದ್ಯೋಗ ಕೊಡುವುದು ಸರಕಾರದ ಕರ್ತವ್ಯ. ಆಗ ತಮ್ಮ ಮನೆಮಠ ಬಿಟ್ಟುಕೊಡಲು ಎಷ್ಟು ಮಂದಿ ತುಳುವರು ಸಿದ್ದರಿದ್ದೀರಿ? ಇಷ್ಟು ಸಣ್ಣ ವಿಸ್ತೀರ್ಣದ ಜಾಗದಲ್ಲಿ ಎಲ್ಲ ತುಳುವರಿಗೆ ಉದ್ಯೋಗ ಕಲ್ಪಿಸುವುದು ಸಾಧ್ಯನಾ?

ಮಂಗಳೂರಿನಲ್ಲಿ ಉಳಿದೆಲ್ಲಾ ಪ್ರದೇಶಗಳಿಗಿಂತ ವಸ್ತುಗಳು ದುಬಾರಿ
ವ್ಯಾಪಾರಿಗಳ ವಿಚಾರಕ್ಕೆ ಬಂದಾಗ ಅಲ್ಲೂ ಸಮಸ್ಯೆಯೇ ಹೊರತು ಲಾಭವೇನಿಲ್ಲ. ಈಗಾಗಲೇ ಮಂಗಳೂರಿನಲ್ಲಿ ಉಳಿದೆಲ್ಲ ಪ್ರದೇಶಗಳಿಗಿಂತ ವಸ್ತುಗಳು ದುಬಾರಿ. ಬಟ್ಟೆ, ಪೀಠೋಪಕರಣಗಳು, ಚಪ್ಪಲಿ ಎಲ್ಲವೂ ಇಲ್ಲಿ ದುಬಾರಿ. ಇನ್ನು ರಾಜ್ಯ ಬೇರೆಯದಾದರೆ, ಸೂರತ್, ಉತ್ತರಪ್ರದೇಶ ದೆಹಲಿ ಮುಂತಾದ ಜಾಗಗಳನ್ನು ನೆಚ್ಚಿಕೊಂಡ ವ್ಯಾಪಾರಿಗಳಿಗೆ ತೊಂದರೆ ಆಗದಿದ್ದರೂ ಬೆಂಗಳೂರನ್ನು ನೆಚ್ಚಿರುವ ವ್ಯಾಪಾರಿಗಳು ತುಂಬಾ ಸಂಕಷ್ಟಕ್ಕೆ ಈಡಾಗುತ್ತಾರೆ .ಇದರ ಹೊರೆ ಬೀಳೋದು ಗ್ರಾಹಕರ ಮೇಲೆ. ಕರಾವಳಿಯ ಮುಖ್ಯ ಕಸುಬು ಮೀನುಗಾರಿಕೆ, ಮಲ್ಲಿಗೆ ಮುಂತಾದ ವಸ್ತುಗಳ ವ್ಯಾಪಾರದ ಮೇಲೆ ಇದು ಗಂಭೀರ ಪರಿಣಾಮ ಬೀರುತ್ತೆ.

ಎತ್ತಿನ ಹೊಳೆ ಯೋಜನೆ ರೂಪಿಸಿದ್ದು, ಪರವಾಗಿ ನಿಂತವರು ಯಾರು?
ಇನ್ನು ಎತ್ತಿನ ಹೊಳೆ ಯೋಜನೆಯ ಉದಾಹರಣೆ ಕೊಟ್ಟು, ಕರ್ನಾಟಕದ ರಾಜಕಾರಣಿಗಳು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಕೆಲವರು ತುಳುನಾಡು ರಾಜ್ಯಕ್ಕೆ ಒತ್ತಾಯಿಸುತ್ತಿದ್ದಾರೆ. ಆದರೆ ಎತ್ತಿನ ಹೊಳೆ ಯೋಜನೆ ಯಾರು ರೂಪಿಸಿದ್ದು ಹಾಗೂ ಅದರ ಪರವಾಗಿ ನಿಂತವರು ಯಾರು? ನಮ್ಮ ತುಳುನಾಡಿನವರಾದ ವೀರಪ್ಪ ಮೊಯ್ಲಿ ಹಾಗೂ ಸದಾನಂದ ಗೌಡ ತಾನೇ? ಇಲ್ಲಿಯವರೇ ರೂಪಿಸಿದ ಯೋಜನೆಗೆ ಕರ್ನಾಟಕದ ಉಳಿದ ಭಾಗದ ರಾಜಕಾರಣಿಗಳನ್ನು ದೂಷಿಸಬೇಕೇ?

ರಾಜ್ಯ ಬೇರೆಯಾದ ಕೂಡಲೇ ಸ್ಥಾನಮಾನ ಸಿಗುತ್ತಾ?
ತುಳು ಭಾಷೆಗೆ ವಿಶೇಷ ಸ್ಥಾನಮಾನ ಕೊಟ್ಟಿಲ್ಲ ಎಂದು ಕೆಲವರ ವಾದ, ಆ ಕಾರಣಕ್ಕೆ ಪ್ರತ್ಯೇಕ ರಾಜ್ಯ ಬೇಕು ಅನ್ನುತ್ತಾರೆ. ಆದರೆ ರಾಜ್ಯ ಬೇರೆಯಾದ ಕೂಡಲೇ ಆ ಸ್ಥಾನಮಾನ ಸಿಗುತ್ತೆ ಅನ್ನುವ ಖಾತರಿ ಇದೆಯೇ? ಅಷ್ಟಕ್ಕೂ ಭಾಷೆಯೊಂದರ ಉಳಿವಿಗೆ, ಮಾತಾಡುವವರು ಬೇಕೇ ವಿನಹ ಸ್ಥಾನಮಾನಗಳಲ್ಲ. ಅಂತಹ ತುಳುವರ ಕೊರತೆ ನಮ್ಮ ತುಳುನಾಡಿಗೆ ಇಲ್ಲ ಅನ್ನುವುದು ನನ್ನ ಅಭಿಪ್ರಾಯ.

ಒಡೆದು ಆಳುವ ನೀತಿಯನ್ನೇ ಅನುಸರಿಸಿದವರು
ಈಗಾಗಲೇ ತುಳುನಾಡಿನಲ್ಲಿರುವ ರಾಜಕಾರಣಿಗಳನ್ನು ನೋಡಿದ್ದೇವೆ. ಈಗಿರುವ ಕೆಲ ರಾಜಕಾರಣಿಗಳು ಒಡೆದು ಆಳುವ ನೀತಿಯನ್ನೇ ಅನುಸರಿಸಿದವರು. ಇಷ್ಟು ಕಡಿಮೆಯ ಶಾಸಕರನ್ನು ಹೊಂದಿರುವಾಗಲೇ ಇಷ್ಟೊಂದು ರಾಜಕೀಯ ಪ್ರೇರಿತ ಗಲಭೆಗಳು ಆಗುತ್ತಿರುವಾಗ , ಇನ್ನು ತುಳುನಾಡು ರಾಜ್ಯವಾಗಿ ಶಾಸಕರ ಸಂಖ್ಯೆ ಹೆಚ್ಚಾಗಿ, ಅವರೂ ಸ್ವಾರ್ಥಕ್ಕಾಗಿ ಜನರ ಮಧ್ಯೆ ಗಲಭೆ ನಡೆಸಲು ಪ್ರೇರಣೆ ನೀಡಿದರೆ? ತುಳುನಾಡಿಗೆ ಬೇಕಾದ ಪೋಲಿಸ್ ವ್ಯವಸ್ಥೆಯನ್ನು ರೂಪಿಸಲು ಹಾಗೂ ಅದಕ್ಕೆ ತಗುಲುವ ವೆಚ್ಚಕ್ಕೆ ಅನುದಾನ ಎಲ್ಲಿಂದ ಬರಬೇಕು? ಅಷ್ಟಕ್ಕೂ ರಾಜಕಾರಣಿಗಳಿಗೆ ಕೊಡುವ ಸವಲತ್ತಿಗೆ ದುಂದು ವೆಚ್ಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಅಭಿವೃದ್ಧಿ ಎಲ್ಲಿಂದ ಆಗಬೇಕು ?

ಪ್ರವಾಸೋದ್ಯಮ ನೆಚ್ಚಿ ಬದುಕುವವರ ಜೀವಾನೋಪಯದ ಗತಿ?
ತುಳುನಾಡಿನ ಜನತೆ ಪಕ್ಕದ ಕೇರಳ ರಾಜ್ಯದ ಕಾಸರಗೋಡಿನ ಕೆಲ ದೇವಳಗಳಿಗೆ ಹೋಗಬೇಕಾದರೂ, ರಾಜ್ಯದ ಸಾರಿಗೆ ನಿಯಮಗಳ ಕಾರಣದಿಂದ ಪ್ರಯಾಸ ಪಡುವುದನ್ಬು ನಾವು ನೋಡಿರುತ್ತೆವೆ. ಇನ್ನು ನಮ್ಮ ತುಳುನಾಡು ಏನಾದರೂ ರಾಜ್ಯವಾದರೆ ಧರ್ಮಸ್ಥಳ ,ಸುಬ್ರಹ್ಮಣ್ಯ, ಮಂಗಾಳದೇವಿ, ಉಳ್ಳಾಲ ದರ್ಗಾ,ಉಡುಪಿ ಶ್ರೀ ಕೃಷ್ಣನ ದೇವಳ ,ಮುಂತಾದ ಕಡೆಗೆ ಬರುವ ಭಕ್ತರು ಅದೆಷ್ಟು ಪ್ರಯಾಸ ಪಡಬೇಕು? ಸಮುದ್ರ ತೀರ ನೋಡಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಬಹುದು ,ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿ ಪ್ರವಾಸೋದ್ಯಮ ನೆಚ್ಚಿ ಬದುಕುವ ಅನೇಕರ ಜೀವಾನೋಪಯಕ್ಕೆ ಇದು ತೊಂದರೆ ಆಗಬಹುದಲ್ವೇ ? ತುಳುನಾಡಿನ ವ್ಯಾಪ್ತಿ ಬಹಳ ಕಡಿಮೆ ಇರುವುದರಿಂದ ಎಲ್ಲಾ ವಾಹನಗಳ ಮಾಲೀಕರು ದ್ವಿರಾಜ್ಯ ನೋಂದಣಿ ಮಾಡಬೇಕಾಗಬಹುದು. ಪ್ರತ್ಯೇಕ ತೆರಿಗೆಯ ಹೊರೆ ಬಿದ್ದು ಇದು ಜನರನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡುವುದರಿಂದ ತುಳುನಾಡಿನಿಂದ ಆಗುವ ಅಪಕಾರವೇ ಅಲ್ವೇ?

ತುಳು ಲಿಪಿ ಬಲ್ಲವರು ಎಷ್ಟು ಮಂದಿ ಇದ್ದಾರೆ?
ತುಳುನಾಡ ರಾಜ್ಯದ ಮಕ್ಕಳಿಗೆ ಯಾವ ಮಾಧ್ಯಮದ ಶಿಕ್ಷಣ ಕೊಡಲು ಬಯಸುತ್ತೀರಿ? ತುಳುರಾಜ್ಯ ಅಂದ ಮೇಲೆ ತುಳುವಿನಲ್ಲೇ ಕೊಡಬೇಕು ತಾನೇ? ನಮ್ಮಲ್ಲಿ ತುಳು ಲಿಪಿ ಬಲ್ಲ ಶಿಕ್ಷಕರು ಹಾಗೂ ತಜ್ಞರು ಎಷ್ಟು ಮಂದಿ ಇದ್ದಾರೆ? ಕನ್ನಡವನ್ನೇ ಬಳಸಿ ಶಿಕ್ಷಣ ಕೊಡುವುದು ನಿರ್ಧಾರವಾದರೆ ಇದು ಕರ್ನಾಟಕವಾಗಿಯೇ ಇರುವುದು ಉತ್ತಮ ತಾನೇ?

ಯೋಗ್ಯ ರಾಜಕಾರಣಿಗಳನ್ನು ಆರಿಸೋಣ
ಬೆಂಗಳೂರು, ಮೈಸೂರಿನ ನಂತರ ಮಂಗಳೂರು ನಗರ ಕೂಡಾ ಅಭಿವೃದ್ಧಿ ಹೊಂದುತ್ತಿದೆ. ಸ್ಥಳೀಯ ರಾಜಕಾರಣಿಗಳ ಜಡತ್ವಕ್ಕೆ ರಾಜ್ಯ ಸರಕಾರ, ತುಳುನಾಡನ್ನು ನಿರ್ಲಕ್ಷಿಸಿದೆ ಅನ್ನುವ ಆರೋಪ ಮಾಡುವುದು ಬೇಡ ಅದರ ಬದಲಿಗೆ ನಮಗೆ ಸರಿ ಎಂದು ತೋರುವ ಯೋಗ್ಯ ರಾಜಕಾರಣಿಗಳ ಆರಿಸಿ ಅವರಿಂದ ಕೆಲಸ ಮಾಡಿಸಿಕೊಳ್ಳೋಣ . ಕೇವಲ ಒಂದು ಜಿಲ್ಲೆಯ ವಿಸ್ತೀರ್ಣ ಹೊಂದಿರುವ ತುಳುನಾಡು ರಾಜ್ಯ ಆದರೆ ಯಾವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಯೋಚಿಸಿದ್ದೀರಾ? ಸುಮ್ಮನೆ ಇಲ್ಲದ ಸಮಸ್ಯೆಗಳ ಮೈ ಮೇಲೆ ಎಳೆದುಕೊಳ್ಳುವ ಬದಲು, ಕರ್ನಾಟಕದ ಜೊತೆಗಿದ್ದು ಕನ್ನಡಿಗರಾಗಿ ಬಾಳೋಣ. ಅಷ್ಟಕ್ಕೂ ಕರಾವಳಿಯು ಸೌಲಭ್ಯಗಳಿಂದ ವಂಚಿತವಾಗಿದೆ ಎಂದು ಆರೋಪ ಮಾಡುವ ಮಂದಿ ಉತ್ತರ ಕರ್ನಾಟಕ ಭಾಗವನ್ನೊಮ್ಮೆ ನೋಡಿ. ಅಲ್ಲಿಗೂ ಕರಾವಳಿಗೂ ಅಜಗಜಾಂತರ ವ್ಯತ್ಯಾಸವಿದೆ. ತುಳುನಾಡು ಕರ್ನಾಟಕದ ಭಾಗವಾಗಿಯೇ ಇರಲಿ. ಜೈ ತುಳುನಾಡು ಜೈ ಕರ್ನಾಟಕ.












Click it and Unblock the Notifications