ನೂತನ ರೈಲ್ವೆ ಸಚಿವ ವಿ. ಸೋಮಣ್ಣ ಮುಂದೆ ಕರ್ನಾಟಕದ ಬೇಡಿಕೆಗಳು
ಬೆಂಗಳೂರು, ಜೂನ್ 12: ಲೋಕಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ದೇಶದಲ್ಲಿ ಸರ್ಕಾರ ರಚನೆ ಮಾಡಿದೆ. ನರೇಂದ್ರ ಮೋದಿ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ನರೇಂದ್ರ ಮೋದಿ 3.0 ಸಂಪುಟದಲ್ಲಿ ಕರ್ನಾಟಕದ ಐವರು ಸಚಿವರಾಗಿದ್ದಾರೆ.
ಮೋದಿ ಸಂಪುಟಕ್ಕೆ ತುಮಕೂರು ಸಂಸದ ವಿ. ಸೋಮಣ್ಣ ಸೇರಿದ್ದಾರೆ. ಜಲ ಶಕ್ತಿ & ರೈಲ್ವೆ ಖಾತೆಯ ರಾಜ್ಯ ಸಚಿವರಾದ ಅವರು ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ದಿ. ಸುರೇಶ್ ಅಂಗಡಿ ಬಳಿಕ ಕರ್ನಾಟಕಕ್ಕೆ ಮತ್ತೆ ರೈಲ್ವೆ ಖಾತೆಯ ಹೊಣೆ ಸಿಕ್ಕಿದೆ.

ನೂತನ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣಗೆ ಕರ್ನಾಟಕದ ವಿವಿಧ ರೈಲ್ವೆ ಹೋರಾಟಗಾರರು, ಪ್ರಯಾಣಿಕರ ವೇದಿಕೆಗಳು ಅಭಿನಂದನೆಯನ್ನು ಸಲ್ಲಿಸಿವೆ. ರಾಜ್ಯದ ರೈಲು ಯೋಜನೆಗಳನ್ನು ಪೂರ್ಣಗೊಳಿಸಲು ಒತ್ತು ನೀಡಿ ಎಂದು ಮನವಿ ಮಾಡಿದ್ದಾರೆ.
ಸೋಮಣ್ಣ ಮುಂದೆ ಬೇಡಿಕೆಗಳು: Belagavi_infra ಟ್ವಿಟರ್ ಖಾತೆಯಲ್ಲಿ ವಿ. ಸೋಮಣ್ಣಗೆ ಅಭಿನಂದನೆ ಸಲ್ಲಿಕೆ ಮಾಡಲಾಗಿದೆ. 'ರೈಲ್ವೆ ಖಾತೆಗಳ ರಾಜ್ಯ ಸಚಿವರಾಗಿರುವ ಶ್ರೀ ವಿ ಸೋಮಣ್ಣ ಅವರಿಗೆ ಅಭಿನಂದನೆಗಳು'
'ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಬೆಳಗಾವಿ-ಬೆಂಗಳೂರು, ಬೆಳಗಾವಿ-ಪುಣೆ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲು ಕ್ರಮ ತೆಗೆದುಕೊಳ್ಳಿ' ಎಂದು ಬೇಡಿಕೆ ಇಡಲಾಗಿದೆ.
ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ರೈಲಿನ ಪ್ರಾಯೋಗಿಕ ಸಂಚಾರ ನಡೆದು ಆರು ತಿಂಗಳು ಕಳೆದಿದೆ. ಆದರೆ ಇನ್ನೂ ರೈಲು ಸೇವೆ ಆರಂಭವಾಗಿಲ್ಲ.
ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸದ್ಯ ಸಂಚಾರ ನಡೆಸುತ್ತಿರುವ ರೈಲು ನಂಬರ್ 20661/ 20662 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಅನುಮೋದನೆ ಸಿಕ್ಕಿದೆ.
ರೈಲು ಓಡಿಸಲು 2023ರ ನವೆಂಬರ್ 21ರಂದು ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದ್ದರೂ ಸಹ ರೈಲು ಸೇವೆ ಇನ್ನೂ ಆರಂಭಗೊಂಡಿಲ್ಲ. ಆದ್ದರಿಂದ ಈ ಕುರಿತು ವಿ. ಸೋಮಣ್ಣ ಗಮನ ಸೆಳೆಯಲಾಗಿದೆ.
ಮತ್ತೊಂದು ಖಾತೆಯಾದ ಸೌತ್ ವೆಸ್ಟರ್ನ್ ರೈಲ್ವೆ, 'ಸೋಮಣ್ಣ ಸರ್ ನಮ್ಮ ಕರ್ನಾಟಕದ ರೈಲ್ವೆ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ' ಎಂದು ಬೇಡಿಕೆ ಇಟ್ಟಿದ್ದಾರೆ. ತುಮಕೂರು-ದಾವಣಗೆರೆ, ಬೆಳಗಾವಿ-ಧಾರವಾಡ, ತುಮಕೂರು-ರಾಯದುರ್ಗ, ಚಿಕ್ಕಮಗಳೂರು-ಹಾಸನ, ಗದಗ-ವಾಡಿ, ಹರಿಹರ-ಹೊಸಪೇಟೆ ಜೋಡಿ ಹಳಿ ಕಾಮಗಾರಿ ಮುಗಿಸುವಂತೆ ಬೇಡಿಕೆ ಇಡಲಾಗಿದೆ.
ನರೇಂದ್ರ ಮೋದಿ 2.0 ಸರ್ಕಾರದಲ್ಲಿ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದ ಬೆಳಗಾವಿ ಸಂಸದ ದಿ. ಸುರೇಶ್ ಅಂಗಡಿ ಸಾಕಷ್ಟು ಕೆಲಸ ಮಾಡಿದ್ದರು. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಇದ್ದ ಕಾರಣ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಸೇರಿ ವಿವಿಧ ಯೋಜನೆಗಳಿಗೆ ಒಪ್ಪಿಗೆ ಕೊಡಿಸುವಲ್ಲಿ ಸಫಲರಾಗಿದ್ದರು.
ಸುರೇಶ್ ಅಂಗಡಿ ಅವರ ಬಳಿಕ ತುಮಕೂರು ಸಂಸದ ವಿ. ಸೋಮಣ್ಣಗೆ ರೈಲ್ವೆ ಖಾತೆ ರಾಜ್ಯ ಸಚಿವ ಸ್ಥಾನ ಸಿಕ್ಕಿದೆ. ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡಲಿದ್ದಾರೆಯೇ? ಕಾದು ನೋಡಬೇಕಿದೆ.
ಜುಲೈನಲ್ಲಿ ನರೇಂದ್ರ ಮೋದಿ 3.0 ಸರ್ಕಾರ 2024-25ನೇ ಸಾಲಿನ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್‌ಗೆ ಹಣ ಮೀಸಲಿಡಲಾಗುತ್ತದೆ. ರಾಜ್ಯ ಯಾವ ರೈಲು ಯೋಜನೆಗಳಿಗೆ ಎಷ್ಟು ಹಣ ನೀಡಲಾಗುತ್ತದೆ? ಎಂದು ನೋಡಬೇಕಿದೆ.












Click it and Unblock the Notifications