Vande Bharat; ಕರ್ನಾಟಕದಲ್ಲಿ 9 ಹೊಸ ರೈಲುಗಳಿಗೆ ಬೇಡಿಕೆ
ಬೆಂಗಳೂರು, ಅಕ್ಟೋಬರ್ 04; ಸೆಪ್ಟೆಂಬರ್ ತಿಂಗಳಿನಲ್ಲಿ ಕರ್ನಾಟಕಕ್ಕೆ 3ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಿಕ್ಕಿದೆ. ರಾಜ್ಯದಲ್ಲಿ ಮೈಸೂರು-ಚೆನ್ನೈ, ಬೆಂಗಳೂರು-ಧಾರವಾಡ ರೈಲುಗಳಿಗೆ ಉತ್ತಮ ಸ್ಪಂದನೆಯೂ ದೊರೆತಿದೆ. ರಾಜ್ಯದಲ್ಲಿ ಹೊಸದಾಗಿ 9 ವಂದೇ ಭಾರತ್ ರೈಲುಗಳು ಓಡಿಸಬೇಕು ಎಂದು ಬೇಡಿಕೆ ಬಂದಿದೆ.
ರೈಲ್ವೆ ಸಚಿವಾಲಯದಲ್ಲಿ 19/7/2023ರಂದು ನಡೆದ ಸಭೆಯಲ್ಲಿ ಕರ್ನಾಟಕದಲ್ಲಿ ಯಾವ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲು ಓಡಿಸಬೇಕು ಎಂದು ಚರ್ಚೆ ನಡೆದಿತ್ತು. 10 ಮಾರ್ಗದಲ್ಲಿ ರೈಲು ಓಡಿಸಲು ಬೇಕಾದ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಲು ಸುತ್ತೋಲೆಯನ್ನು ಹೊರಡಿಸಲಾಗಿತ್ತು.

ಈ ಸುತ್ತೋಲೆಯಲ್ಲಿ ಇದ್ದ ಮಾರ್ಗಗಳಲ್ಲಿ ಬೆಂಗಳೂರು ನಗರದ ಯಶವಂತಪುರ ಮತ್ತು ಹೈದರಾಬಾದ್ ಸಮೀಪದ ಕಾಚಿಗುಡ ನಡುವೆ ವಂದೇ ಭಾರತ್ ರೈಲು ಸಂಚಾರ ಕಳೆದ ತಿಂಗಳು ಆರಂಭವಾಗಿದೆ. ಉಳಿದ 9 ಮಾರ್ಗಗಳ ಬೇಡಿಕೆ ಈಗ ಕೇಳಿ ಬಂದಿದೆ.
9 ಮಾರ್ಗಗಳು ಯಾವುವು?; ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರೀ ಬೇಡಿಕೆ ಇದೆ. ಈ ಮಾದರಿಯ ಸ್ಲೀಪರ್ ಕೋಚ್ ರೈಲುಗಳನ್ನು ಸಹ ಪರಿಚಯಿಸಲು ಸಿದ್ಧತೆ ನಡೆಯುತ್ತಿದೆ.
ಕರ್ನಾಟಕದಲ್ಲಿ ಹೊಸದಾಗಿ ಬೇಡಿಕೆ ಇರುವ 9 ಮಾರ್ಗಗಳು
| 1 | ಬೆಂಗಳೂರು | ಬೆಳಗಾವಿ |
| 2 | ಬೆಂಗಳೂರು | ಹೊಸಪೇಟೆ |
| 3 | ಬೆಂಗಳೂರು | ಕೊಯಮತ್ತೂರು |
| 4 | ಬೆಂಗಳೂರು | ತಿರುಪತಿ |
| 5 | ಬೆಂಗಳೂರು | ಮಧುರೈ |
| 6 | ಬೆಂಗಳೂರು | ಪುದುಚೇರಿ |
| 7 | ಬೆಂಗಳೂರು | ಕಲಬುರಗಿ |
| 8 | ಬೆಂಗಳೂರು | ಶಿವಮೊಗ್ಗ |
| 9 | ಬೀದರ್ | ಹುಬ್ಬಳ್ಳಿ |
ಕರ್ನಾಟಕದ ವಿವಿಧ ಜಿಲ್ಲೆಗಳ ಜನಪ್ರತಿನಿಧಿಗಳು ಕೇಂದ್ರ ರೈಲ್ವೆ ಸಚಿವ ಅಶ್ವಿವಿ ವೈಷ್ಣವ್ ಭೇಟಿಯಾಗಿ ತಮ್ಮ ಜಿಲ್ಲೆಗಳಿಗೆ ವಂದೇ ಭಾರತ್ ರೈಲು ಆರಂಭಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಬೆಂಗಳೂರು-ಶಿವಮೊಗ್ಗ ನಡುವೆ ಡಿಸೆಂಬರ್‌ನಲ್ಲಿ ಈ ಮಾದರಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ರಾಜ್ಯದಲ್ಲಿ 2022ರ ನವೆಂಬರ್‌ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮೊದಲ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಮೈಸೂರು-ಚೆನ್ನೈ ವಯಾ ಬೆಂಗಳೂರು ರೈಲು ರಾಜ್ಯಕ್ಕೆ ಸಿಕ್ಕ ಮೊದಲ ರೈಲಾಗಿದೆ. ಈ ರೈಲಿಗೆ ಪ್ರಯಾಣಿಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಪ್ರತಿದಿನ ಶೇ 87 ರಿಂದ 93ರಷ್ಟು ಆಸನಗಳು ಭರ್ತಿಯಾಗುತ್ತಿವೆ.
2023ರ ಜೂನ್‌ನಲ್ಲಿ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲು ಸಂಚಾರ ಆರಂಭವಾಯಿತು. ಈ ರೈಲಿನಲ್ಲಿ ಪ್ರತಿದಿನ ಶೇ 90 ರಿಂದ 95ರಷ್ಟು ಆಸನಗಳು ಭರ್ತಿಯಾಗುತ್ತಿವೆ. ಈಗ ರಾಜ್ಯದ ಇತರ ಜಿಲ್ಲೆಗಳನ್ನು ಸಹ ವಂದೇ ಭಾರತ್ ರೈಲು ಸಂಪರ್ಕಿಸಬೇಕು ಎಂಬುದು ಬೇಡಿಕೆಯಾಗಿದೆ.
ಕರ್ನಾಟಕದ ಕರಾವಳಿಗೆ ವಂದೇ ಭಾರತ್ ರೈಲು ಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ನಡೆಸಬೇಕು ಎಂಬ ಕೂಗು ಪ್ರಬಲವಾಗಿ ಕೇಳಿ ಬರುತ್ತಿದೆ. ಕೇರಳದಲ್ಲಿ ಓಡುವ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡಬೇಕು ಎಂಬ ಆಗ್ರಹವನ್ನು ಸಹ ಮಾಡಲಾಗಿದೆ.
ಪ್ರಸ್ತುತ ಭಾರತೀಯ ರೈಲ್ವೆ 16 ಮತ್ತು 8 ಬೋಗಿಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿದೆ. ಇವುಗಳಲ್ಲಿ ಬಿಳಿ ಮತ್ತು ಕೇಸರಿ ಬಣ್ಣದ ರೈಲುಗಳು ಸೇರಿವೆ. ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಬೋಗಿಗಳನ್ನು ತಯಾರು ಮಾಡಲಾಗುತ್ತದೆ.
ಕರ್ನಾಟಕದಲ್ಲಿ ಸದ್ಯ ಚುನಾವಣೆಗಳು ಇಲ್ಲ. ಆದ್ದರಿಂದ ಕೇಂದ್ರ ಸರ್ಕಾರ ವಂದೇ ಭಾರತ್ ರೈಲುಗಳನ್ನು ನೀಡುವುದು ಅನುಮಾನ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಬೇಡಿಕೆ ಇರುವ 9 ಮಾರ್ಗಗಳ ಪೈಕಿ ಯಾವ ಮಾರ್ಗದಲ್ಲಿ ಮೊದಲು ವಂದೇ ಭಾರತ್ ರೈಲು ಓಡಲಿದೆ? ಎಂಬುದು ಈಗಿನ ಪ್ರಶ್ನೆಯಾಗಿದೆ.












Click it and Unblock the Notifications