ದಲಿತರಿಗೆ ಸಿಎಂ ಪಟ್ಟ, ಕಾಂಗ್ರೆಸ್ ನಾಯಕರು ಹೇಳುವುದೇನು?
ಬೆಂಗಳೂರು, ಫೆ. 19 : 'ದಲಿತರು ಮುಖ್ಯಮಂತ್ರಿಯಾಗಬೇಕು' ಎಂಬ ಕೂಗು ಕರ್ನಾಟಕದಲ್ಲಿ ಮತ್ತೆ ಕೇಳಿಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಸಿಎಂ ಮಾಡುವಂತೆ ದಲಿತ ಸಂಘಟನೆಗಳು ಒತ್ತಾಯಿಸಿವೆ. ಪಕ್ಷದ ವಿವಿಧ ನಾಯಕರು ಈ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ್ದ 15ಕ್ಕೂ ಅಧಿಕ ದಲಿತ ಸಂಘಟನೆಗಳ ಮುಖಂಡರು ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಚರ್ಚೆ ಹುಟ್ಟು ಹಾಕಿದ್ದರು. ಸದ್ಯ ಈ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. [ಪರಮೇಶ್ವರ್ ಸಿಎಂ ಮಾಡಲು ದಲಿತ ಸಂಘಟನೆಗಳ ಗಡುವು]
'ದಲಿತರು ಮುಖ್ಯಮಂತ್ರಿಯಾಗಬೇಕು' ಎಂಬ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದ್ದಾರೆ. 'ಸಿಎಂ ಪಟ್ಟಕ್ಕೆ ಬೇಡಿಕೆ ಇಡಲು ಇದು ಸಕಾಲವಲ್ಲ. ಅದಕ್ಕಾಗಿ 2018ರ ಚುನಾವಣೆವರೆಗೂ ಕಾಯಬೇಕು' ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಆಕಾಂಕ್ಷಿಗಳಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ. [ದಲಿತರು ಮುಖ್ಯಮಂತ್ರಿಯಾಗಲು ಇದು ಸಕಾಲವಲ್ಲ]
ಕೆಲವು ದಿನಗಳ ಹಿಂದೆ ಮುಗಿದ ವಿಧಾನಸಭೆ ಜಂಟಿ ಅಧಿವೇಶನದಲ್ಲಿ ಐದು ವರ್ಷ ನಾನೇ ಸಿಎಂ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಜೆಟ್ ತಯಾರಿಯ ಸಭೆಯಲ್ಲಿ ಬ್ಯುಸಿಯಾಗಿದ್ದಾರೆ. ಆದ್ದರಿಂದ ದಲಿತ ಸಿಎಂ ವಿಚಾರದಲ್ಲಿ ಅವರು ಯಾವುದೇ ಹೇಳಿಕೆ ನೀಡಿಲ್ಲ. ಕಾಂಗ್ರೆಸ್ ನಾಯಕರು ಸಿಎಂ ಈ ಬಗ್ಗೆ ಏನು ಹೇಳಿದರು ನೋಡೋಣ ಬನ್ನಿ

2018ರ ಚುನಾವಣೆ ವರೆಗೆ ಕಾಯಬೇಕು
ಸದ್ಯ, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ದಲಿತರು ಸಿಎಂ ಆಗಲು ಇದು ಸಕಾಲವಲ್ಲ. ಮುಖ್ಯಮಂತ್ರಿ ಪಟ್ಟಕ್ಕಾಗಿ ಅವರು 2018ರವರೆಗೆ ಕಾಯಬೇಕು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ. ಪಕ್ಷದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯೇ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. [ದಲಿತರು ಮುಖ್ಯಮಂತ್ರಿಯಾಗಲು ಇದು ಸಕಾಲವಲ್ಲ]

ಸಿದ್ದರಾಮಯ್ಯ ತಮ್ಮ ಅವಧಿ ಪೂರ್ಣಗೊಳಿಸುತ್ತಾರೆ
ಯಲಬುರ್ಗಾ ಶಾಸಕ ಮತ್ತು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಜಾತಿ ಹೆಸರಿನಲ್ಲಿ ಮುಖ್ಯಮಂತ್ರಿ ಆಗುವುದನ್ನು ನಾನು ಒಪ್ಪುವುದಿಲ್ಲ. ದಲಿತರು ಮುಖ್ಯಮಂತ್ರಿ ಆಗುವುದಕ್ಕೆ ತಮ್ಮ ವಿರೋಧವಿಲ್ಲ ಎಂದು ಹೇಳಿದ್ದಾರೆ.

ಸಚಿವ ಸ್ಥಾನವನ್ನು ಪರಮೇಶ್ವರ ಅವರಿಗೆ ನೀಡಲಾಗುತ್ತದೆ
ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ದಲಿತ ಸಿಎಂ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದಲಿತರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಈಗಾಗಲೇ ಒಬ್ಬರ ಬಳಿ ಇರುವ ಮುಖ್ಯಮಂತ್ರಿ ಪದವಿಯನ್ನು ಕಿತ್ತು ಬೇರೊಬ್ಬರಿಗೆ ಕೊಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಪರಮೇಶ್ವರ ಅವರನ್ನು ಸಚಿವರನ್ನಾಗಿ ಮಾಡಲು ಅವರನ್ನು ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಮುಂದೆ ಏನು ಹೇಳೋಲ್ಲ
ಮೈಸೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ದಲಿತ ಸಿಎಂ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಮಾಧ್ಯಮಗಳ ಮುಂದೆ ಈ ವಿಚಾರ ಮಾತನಾಡುವುದಿಲ್ಲ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ
ಕರ್ನಾಟಕದಲ್ಲಿ ಸದ್ಯ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಹೀಗಾಗಿ ದಲಿತರಿಗೆ ಈ ಸ್ಥಾನ ನೀಡಬೇಕು ಎನ್ನುವ ಬಗ್ಗೆ ಚರ್ಚಿಸಲು ಇದು ಸಕಾಲವಲ್ಲ ಎಂದು ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ್ದ ಅವರು, ದಲಿತರು ಸಿಎಂ ಆಗಬೇಕು ಎನ್ನುವ ಭಾವನೆ ಸರಿ. ಆದರೆ ಸಿಎಂ ಹುದ್ದೆ ತೆರವಾದ ಬಳಿಕ ಈ ಕುರಿತು ಸಮಾಲೋಚಿಸುವುದು ಸೂಕ್ತ ಎಂದು ಹೇಳಿದ್ದರು.

ರಾಹುಲ್ ಗಾಂಧಿ ಭೇಟಿ ಮುಂದಕ್ಕೆ
ದಲಿತ ಸಿಎಂ ವಿಚಾರವಾಗಿ ಚರ್ಚೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಬುಧವಾರ ಭೇಟಿ ಮಾಡಬೇಕಿತ್ತು. ಆದರೆ, ರಾಹುಲ್ ಗಾಂಧಿ ಅವರು ನಾಲ್ಕು ದಿನಗಳ ನಂತರ ಆಗಮಿಸುವಂತೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ದೆಹಲಿ ಭೇಟಿಯನ್ನು ಮುಂದೂಡಲಾಗಿದೆ.












Click it and Unblock the Notifications