CM Bommai: ಬಿಜೆಪಿ ನಾಯಕರ ಪಕ್ಷಾಂತರ: ಕಮಲ ಬೇರು ಬಿಟ್ಟ ಹೆಮ್ಮರ, ಅಲುಗಾಡಿಸಲು ಸಾಧ್ಯವಿಲ್ಲ: ಸಿಎಂ ಬೊಮ್ಮಾಯಿ ಟಾಂಗ್
ದೊಡ್ಡಬಳ್ಳಾಪುರ, ಏಪ್ರಿಲ್ 23: ಕಾಂಗ್ರೆಸ್ ನವರು ಹತಾಶರಾಗಿದ್ದಾರೆ. ಅವರು ಬಿಜೆಪಿಯಲ್ಲಿ ಟಿಕೆಟ್ ಸಿಗದ ಕುಂಡದಲ್ಲಿರುವ ಹೂ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅವರಿಗೆ ಗೊತ್ತಿಲ್ಲ. ಬಿಜೆಪಿ ಆಳವಾದ ಬೇರು ಬಿಟ್ಟು ಹೆಮ್ಮರವಾಗಿದೆ, ಅದನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಭಾನುವಾರ ದೊಡ್ಡಬಳ್ಳಾಪುರದಲ್ಲಿ ರೊಡ್ ಶೋ ಮಾಡಿ ಬಿಜೆಪಿ ಅಭ್ಯರ್ಥಿ ಧೀರಜ್ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಿದರು. ಇದೇ ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದ ನಾಯಕರಲ್ಲಿ ಹಲವರು ಕಾಂಗ್ರೆಸ್ ಹಾಕಿ ಗಾಳಕ್ಕೆ ಸಿಲುಕಿಕೊಂಡಿದ್ದಾರೆ. ಈ ಪಕ್ಷಾಂತರ ಬೆಳವಣಿಗೆ ಕುರಿತು ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಅವಧಿಯಲ್ಲಿ ನೇಕಾರರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ನೇಕಾರ ಸಮ್ಮಾನ ಯೋಜನೆಯನ್ನು ನಮ್ಮ ನಾಯಕರಾದ ಯಡಿಯೂರಪ್ಪ ಅರಂಭಿಸಿದರು. 2000 ರೂಪಾಯಿ ನೇಕಾರರಿಗೆ ಧನ ಸಹಾಯ ನೀಡಲಾಗುತ್ತಿತ್ತು. ಅದನ್ನು 5000ಕ್ಕೆ ಹೆಚ್ಚಳ ಮಾಡಿದ್ದೇನೆ. 5 ಲಕ್ಷ ರೂಪಾಯಿವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ. ನೇಕಾರರ ಅಭಿವೃದ್ಧಿ ನಿಗಮ ಮಾಡಿದ್ದೇವೆ. ನೇಕಾರರ ಆರೊಗ್ಯ, ಶಿಕ್ಷಣ ನೀಡಲು ನೇಕಾರರ ಅಭಿವೃದ್ಧಿ ನಿಗಮ ಮಾಡಿದ್ದೇವೆ ಎಂದು ಹೇಳಿದರು.
ಹೂವು ಹಣ್ಣು ವ್ಯಾಪಾರ ಮಾಡುವ ತಿಗಳ ಸಮುದಾಯ ಇದೆ. ಆ ಸಮುದಾಯದ ಅಭಿವೃದ್ಧಿಗೆ ನಿಗಮ, ಗಾಣಿಗ ಸಮುದಾಯದ ಅಭಿವೃದ್ಧಿ ನಿಗಮ, ಕಾಯಕ ಮಾಡುವ ಕುಲಗಳಿಗೆ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಒಕ್ಕಲಿಗರ ಅಭಿವೃದ್ಧಿ ನಿಗಮ, ವೀರಶೈವ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದೇವೆ. ಎಲ್ಲ ಸನುದಾಯಗಳ ಅಭಿವೃದ್ಧಿಯನ್ನು ನಮ್ಮ ಸರ್ಕಾರ ಮಾಡಿದೆ ಎಂದು ಬಿಜೆಪಿ ಕಾರ್ಯಸಾಧನೆ ಬಗ್ಗೆ ತಿಳಿಸಿದರು.
ಸ್ಯಾಟ್‌ಲೈನ್ ಟೌನ್ ಆಗಲಿದೆ ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರದಲ್ಲಿ ಸ್ಯಾಟ್ಲೈಟ್ ಟೌನ್ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಶಿಕ್ಷಣ ಉದ್ಯೋಗ ದೊರೆಯುತ್ತವೆ. ಬೆಂಗಳೂರಿನ ಎಲ್ಲ ಸೌಕರ್ಯ ದೊಡ್ಡಬಳ್ಳಾಪುರದಲ್ಲಿ ಸಿಗುವಂತೆ ಮಾಡುತ್ತೇವೆ. ಹಾಲಿ ಶಾಸಕರು ಹತ್ತು ವರ್ಷ ಶಾಸಕರಾಗಿದ್ದಾರೆ. ಅವರನ್ನು ಈ ಬಾರಿ ಮನೆಗೆ ಕಳಿಸಬೇಕು.

ದೊಡ್ಡಬಳ್ಳಾಪುರ ಅಭಿವೃದ್ಧಿಗೆ ಧೀರಜ್ ಗೆ ಅವಕಾಶ ಕಲ್ಪಿಸಬೇಕು. ಮತ್ತೆ ನಮ್ಮ ಸರ್ಕಾರ ರಚನೆಯಾಗುತ್ತದೆ. ಈ ಭಾಗದಲ್ಲಿ ಕೆರೆ ಅಭಿವೃದ್ಧಿ ಮಾಡಬೇಕೆಂದು ಜನರ ಬೇಡಿಕೆ ಇದೆ. ಅದನ್ನು ಸಂಪುಟದ ಮೊದಲ ಸಭೆಯಲ್ಲಿಯೇ ತೀರ್ಮಾನ ಮಾಡಲಾಗುವುದು. ಈ ಬಾರಿ ದೊಡ್ಡಬಳ್ಳಾಪುರದ ದೊಡ್ಡ ಜನರು ಧೀಜರ್ ನನ್ನು ಆಯ್ಕೆ ಮಾಡಿ ಕಳುಹಿಸಿ ಎಂದು ನಾಗರಿಕರಲ್ಲಿ ಮನವಿ ಮಾಡಿದರು.
ಸಮಾನತೆಯ ಹರಿಕಾರ ಬಸವಣ್ಣ
ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿಗಳು, ಸಮಾನತೆಯ ಹರಿಕಾರ ಬಸವಣ್ಣ ಸರ್ವರಿಗೂ ಆದರ್ಶ ಸಮಾನಯೆಯ ವಿಚಾರವನ್ನು ಕಾರ್ಯರೂಪಕ್ಕೆ ತಂದಿರುವ ಕ್ರಾಂತಿಕಾರಿ ವ್ಯಕ್ತಿಯಾಗಿದ್ದಾರೆ. ಬಸವ ಚಿಂತನೆ, ತತ್ವ ಆದರ್ಶಗಳ ಮೇಲೆ, ಬಸವ ಪಥದಲ್ಲಿ ಬಿಜೆಪಿ ಆಡಳಿತ ನಡೆಸಿದೆ ಎಂದರು.
ರಾಜ್ಯದಲ್ಲಿ ಮುಂದೆಯೂ ಬಸವ ಪಥ ದಲ್ಲಿ ಕರ್ನಾಟಕದ ತುಳಿತಕ್ಕೊಳಪಟ್ಟ ಸಮುದಾಯಗಳಿಂದ ಹಿಡಿದು ಎಲ್ಲಾ ದುಡಿಯುವ ಸಮುದಾಯಗಳಿಗೆ ಗೌರವ, ಮಾನ, ಸನ್ಮಾನ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಧ್ಯೇಯವಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುತ್ತಿದೆ. ಕರ್ನಾಟಕದ ಮಹಾಜನತೆ ನಮಗೆ ಸಂಪೂರ್ಣ ಬೆಂಬಲ ನೀಡುವ ವಿಶ್ವಾಸವಿದೆ ಎಂದು ಹೇಳಿದರು.












Click it and Unblock the Notifications