'ರಾಜ್ಯ ಯುವ ಕಾಂಗ್ರೆಸ್‌ಗೆ ಚುನಾವಣೆ ನಡೆಸಲು ತೀರ್ಮಾನ'
ಬೆಂಗಳೂರು, ಜುಲೈ27: ಹೊಸ ನಾಯಕರನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಯುವ ಕಾಂಗ್ರೆಸ್ ನಲ್ಲಿ ಆಗಸ್ಟ್ 16ರಿಂದ ಸೆಪ್ಟೆಂಬರ್ 16ರವರೆಗೆ ಸದಸ್ಯತ್ವ ನೋಂದಣಿ ಹಾಗೂ ಪಕ್ಷದ ಆಂತರಿಕ ಚುನಾವಣೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ತಿಳಿಸಿದರು.
ಜುಲೈ 24ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ಕಾರಣ ಈ ವಿಚಾರದ ಬಗ್ಗೆ ಮಾಧ್ಯಮಗೋಷ್ಠಿ ಮಾಡಿರಲಿಲ್ಲ. ಆಗಸ್ಟ್ 2ರವರೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ, ಆಗಸ್ಟ್ 3ರಿಂದ 8ರವರೆಗೆ ನಾಮಪತ್ರ ಪರಿಶೀಲನೆ ಮಾಡಲಾಗುವುದು. ಆಗಸ್ಟ್ 9ರಂದು ನಾಮಪತ್ರ ಅಂತಿಮ ಮಾಡಲಾಗುವುದು. ಅತಿ ಹೆಚ್ಚು ಮತ ಪಡೆಯುವವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಮತಗಳ ಆಧಾರದ ಮೇಲೆ ನಂತರದ ಸ್ಥಾನ ಪಡೆಯುವರಿಗೆ ಇತರೆ ಸ್ಥಾನ ನೀಡಲಾಗುವುದು. ಈ ವೇಳೆ ಪಕ್ಷವು ಅಗ್ರ ಮೂರು ಸ್ಥಾನ ಪಡೆದವರ ಸಂದರ್ಶನವನ್ನು ಮಾಡಲಿದೆ ಎಂದು ಮಾಹಿತಿ ನೀಡಿದರು.

ಸದಸ್ಯತ್ವ ನೋಂದಣಿಯನ್ನು ಆಗಸ್ಟ್ 16ರಿಂದ ಸೆಪ್ಟೆಂಬರ್ 16ರ ವರೆಗೂ ಮಾಡಲಾಗುವುದು. ಯುವ ಕಾಂಗ್ರೆಸ್ ಸದಸ್ಯರಾಗಲು ಬಯಸುವವರು ಆನ್ ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು. ಆನ್ ಲೈನ್ ಸದಸ್ಯತ್ವ ಪಡೆದವರಿಗೆ ಸದಸ್ಯತ್ವ ಪಡೆದ ದಿನದಿಂದಲೇ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆ ಮಾಡಲು ಮತದಾನ ಮಾಡುವ ಅಧಿಕಾರ ಸಿಗಲಿದೆ. ಓರ್ವ ಸದಸ್ಯ ಆರು ಮಂದಿ ಪದಾಧಿಕಾರಿಗಳಿಗೆ ಮತ ಹಾಕುವ ಅಧಿಕಾರವಿರುತ್ತದೆ. ರಾಜ್ಯಾಧ್ಯಕ್ಷ, ರಾಜ್ಯ ಮಟ್ಟದ ಪದಾಧಿಕಾರಿ, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಆಯ್ಕೆಗೆ ಮತ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಐವೈಸಿ ಆಪ್ ನಲ್ಲಿ ವೀಕ್ಷಿಸಬಹುದು" ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಸದಸ್ಯತ್ವ ಪಡೆಯುವವರು 35 ವರ್ಷದೊಳಗಿನವರಾಗಿರಬೇಕು. ಸದಸ್ಯತ್ವ ನೋಂದಣಿ ಶುಲ್ಕ ರೂ 50 ರೂಪಾಯಿ ಕಟ್ಟಬೇಕು. ಅವರಿಗೆ ಗುರುತಿನ ಚೀಟಿ ನೀಡಲಾಗುವುದು. ಮತದಾನ ಮಾಡುವಾಗ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಚುನಾವಣೆಯನ್ನು ಬಹಳ ಪಾರದರ್ಶಕವಾಗಿ ನಡೆಸಲಾಗುವುದು. ಸದಸ್ಯತ್ವ ನೋಂದಣಿ ಸಮಯದಲ್ಲಿ ಸದಸ್ಯತ್ವ ಪಡೆಯುವವರ ಮುಖಚರ್ಯೆಯನ್ನು ಸ್ಕ್ಯಾನ್ ಮಾಡಲಾಗುವುದು. ಇಡೀ ದೇಶದಲ್ಲಿ ಹೊಸ ನಾಯಕರ ಸೃಷ್ಟಿ ಮಾಡಲು ಪ್ರಕ್ರಿಯೆ ಆರಂಭವಾಗಿದ್ದು, ಯುವ ನಾಯಕರನ್ನು ಬೆಳೆಸಲು ರಾಹುಲ್ ಗಾಂಧಿ ಅವರು ತೀರ್ಮಾನಿಸಿದ್ದಾರೆ ಎಂದು ಹೇಳಿದರು.
ಇಡೀ ದೇಶದಲ್ಲಿ ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರು ಇರಬೇಕು. ಅವರಿಗೆ ಜವಾಬ್ದಾರಿ ಇರಬೇಕು ಎಂದು ರಾಜೀವ್ ಗಾಂಧಿ ಅವರು ಒಂದು ಹೊಸ ಚಳುವಳಿ ಆರಂಭಿಸಿದರು. ನಾನು ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷನಾಗಿದ್ದಾಗ ಅವರು ನಾಯಕರನ್ನು ಹುಟ್ಟುಹಾಕುವವನೇ ನಿಜವಾದ ನಾಯಕ ಎಂದು ಹೇಳಿದ್ದರು. ರಾಹುಲ್ ಗಾಂಧಿ ಅವರು ಈಗ ಯುವ ಕಾಂಗ್ರೆಸ್ ನಲ್ಲಿ ಯುವ ನಾಯಕರನ್ನು ಸೃಷ್ಟಿ ಮಾಡಲು ಈ ಹೆಜ್ಜೆ ಇಟ್ಟಿದ್ದಾರೆ" ಎಂದು ತಿಳಿಸಿದರು.
ಹೀಗಾಗಿ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಯುವಕರು ನಾಯಕರಾಗಬೇಕಾದರೆ ನಾಯಕತ್ವದ ಗುಣ ಹೊಂದಿಕೊಂಡು ಚುನಾವಣಾ ಕಣದಿಂದ ನಾಯಕರಾಗಬೇಕು. ನೇಮಕ ಮಾಡುವ ಪದ್ಧತಿ ಬೇಡ ಎಂದು ಮನಗೊಂಡು ಎನ್ಎಸ್ ಯುಐ ಹಾಗೂ ಯುವ ಕಾಂಗ್ರೆಸ್ ನಲ್ಲಿ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ಪಕ್ಷದ ಚುನಾವಣಾ ಆಯೋಗದ ಮೂಲಕ ಪಕ್ಷದ ಆಂತರಿಕ ಚುನಾವಣೆ ನಡೆಸಲು ತೀರ್ಮಾನ ಮಾಡಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಹೊಸ ನಾಯಕರನ್ನು ಹುಡುಕಲು ಈ ಆಂತರಿಕ ಚುನಾವಣೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಈ ಚುನಾವಣೆಯಲ್ಲಿ ಮಹಿಳೆಯರು, ಪರಿಶಿಷ್ಟರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರಿಗೆ ಮೀಸಲಾತಿ ನೀಡಲಾಗುವುದು. ಬಳ್ಳಾರಿ, ಮಂಡ್ಯ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಕೇಂದ್ರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದರು.
ನೀವು ಕಾರ್ಯಕರ್ತರ ಪಕ್ಷ ಕಟ್ಟಲು ಪ್ರಯತ್ನಿಸುತ್ತಿದ್ದು, ಇಷ್ಟು ಕೇವಲ 15 ದಿನಗಳ ಅಂತರದಲ್ಲಿ ತರಾತುರಿಯಲ್ಲಿ ಚುನಾವಣೆ ಮಾಡುತ್ತಿರುವುದೇಕೆ ಎಂದು ಕೇಳಿದಾಗ, "ನೀವು ಯಾವ ಕ್ಷಣದಲ್ಲಿ ಬೇಕಾದರೂ ಸದಸ್ಯತ್ವ ಪಡೆಯಬಹುದು. ಇದಕ್ಕಾಗಿ ಒಂದು ತಿಂಗಳ ಅವಕಾಶವಿದೆ. ಬೇರೆ ಯಾವುದೇ ಪಕ್ಷದಲ್ಲಿ ಇಂತಹ ಆಂತರಿಕ ಚುನಾವಣೆ ನಡೆಯುತ್ತಿಲ್ಲ. ಈ ಚುನಾವಣಾ ಪ್ರಕ್ರಿಯೆ ನಡೆಸುತ್ತಿರುವ ಪಕ್ಷದ ಚುನಾವಣಾ ಆಯೋಗಕ್ಕೆ ಧನ್ಯವಾದಗಳು. ಪಕ್ಷದ ಐವೈಸಿ ಆಪ್ ನಲ್ಲಿ ಈ ಸದಸ್ಯತ್ವ ಹಾಗೂ ಮತದಾನದ ಮಾಹಿತಿ ಇರಲಿದೆಎಂದರು.
ಗೆದ್ದ ಮತ್ತು ಸೋತ ಅಭ್ಯರ್ಥಿಗಳ ನಡುವೆ ಗುಂಪುಗಾರಿಕೆ ಹೆಚ್ಚಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ಯಾರು ಹೆಚ್ಚು ಮತ ಪಡೆಯುತ್ತಾರೆ ಅವರು ಅಧ್ಯಕ್ಷರಾಗಿರುತ್ತಾರೆ. ಎರಡನೇ ಸ್ಥಾನ ಪಡೆದವರು ಉಪಾಧ್ಯಕ್ಷರಾಗುತ್ತಾರೆ. ಒಟ್ಟು ಏಳು ಮಂದಿ ಉಪಾಧ್ಯಕ್ಷರಾಗಿರುತ್ತಾರೆ. ಇಲ್ಲಿ ಗುಂಪುಗಾರಿಕೆ ಇರುವುದಿಲ್ಲ. ನೇಮಕಾತಿ ಮೂಲಕ ಆಯ್ಕೆ ಮಾಡಿದರೆ ಆಗ ಗುಂಪುಗಾರಿಕೆಗೆ ಹೆಚ್ಚು ಅವಕಾಶವಿರುತ್ತದೆ. ಶಿಷ್ಯರನ್ನು ಅಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಚುನಾವಣೆ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಸಾಮರ್ಥ್ಯ ಇರುವವರು ತಕ್ಕ ಸ್ಥಾನಮಾನ ಪಡೆಯಲಿದ್ದಾರೆ ಎಂದು ತಿಳಿಸಿದರು.












Click it and Unblock the Notifications