Government Employee: ತುಟ್ಟಿಭತ್ಯೆ ಏರಿಕೆ, ದೀಪಾವಳಿ ಹಬ್ಬದ ದಿನ ಸರ್ಕಾರಿ ನೌಕರರಿಗೆ ಸಿಹಿಸುದ್ದಿ
ಬೆಂಗಳೂರು, ನವೆಂಬರ್ 02: ದೀಪಾವಳಿ ಹಬ್ಬದ ದಿನವೇ ಕರ್ನಾಟಕದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರಿ ಸಿಹಿಸುದ್ದಿಯನ್ನು ನೀಡಿದೆ. ಕೇಂದ್ರದ ಎನ್‌ಡಿಎ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಏರಿಕೆ ಮಾಡಿದ ಬಳಿಕ ರಾಜ್ಯ ಸರ್ಕಾರಿ ನೌಕರರು ಡಿಎ ಹೆಚ್ಚಳ ಯಾವಾಗ? ಎಂದು ಕಾದು ಕುಳಿತಿದ್ದರು. ಅಲ್ಲದೇ ಡಿಎ ಹೆಚ್ಚಳದ ಕುರಿತು ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಸಹ ಬರೆಯಲಾಗಿತ್ತು.
ಈಗ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಿದೆ. ಕೇಂದ್ರದಲ್ಲಿ ಡಿಎ ಹೆಚ್ಚಳದ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ಡಿಎ ಏರಿಕೆ ಕುರಿತು ಆದೇಶವನ್ನು ಹೊರಡಿಸುತ್ತದೆ. 7ನೇ ವೇತನ ಆಯೋಗದ ವರದಿ ಶಿಫಾರಸಿನ ಅನ್ವಯ ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಳ ಮಾಡಲಿದೆ. ಸೋಮವಾರ ಅಥವ ಮಂಗಳವಾರ ಈ ಕುರಿತು ಸರ್ಕಾರ ಆದೇಶ ಪ್ರಕಟವಾಗಲಿದೆ.

ಈ ಕುರಿತು ಕರ್ನಾಟಕದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ವಾರದ ಸಿ. ಎಸ್. ಷಡಾಕ್ಷರಿ ಅವರು, ಡಿಎ ಹೆಚ್ಚಳದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಇವರಿಗೆ ಪತ್ರವನ್ನು ಬರೆದಿದ್ದರು. ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡುವ ಕುರಿತು ಎಂದು ಮನವಿ ಮಾಡಿದ್ದರು.
ಸಿ. ಎಸ್. ಷಡಾಕ್ಷರಿ ಹೇಳಿಕೆ: ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಅವರು, 'ಆತ್ಮೀಯ ರಾಜ್ಯದ ಸರ್ಕಾರಿ ನೌಕರ ಬಾಂಧವರೇ, ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಬಾಕಿ ಇರುವ ತುಟ್ಟಿ ಭತ್ಯೆ ಆದೇಶದ ಕಡತ ಸರ್ಕಾರದಲ್ಲಿ ಅನುಮೋದನೆಗೆ ಬಾಕಿ ಇದ್ದು, ಸೋಮವಾರ ಅಥವಾ ಮಂಗಳವಾರ ಸರ್ಕಾರಿ ಆದೇಶವಾಗಲಿದೆ' ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರ ಅಕ್ಟೋಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡಿತ್ತು. ತುಟ್ಟಿಭತ್ಯೆ (ಡಿಎ) ಹೆಚ್ಚಳದ ಕುರಿತು ತೀರ್ಮಾನವನ್ನು ಕೈಗೊಂಡಿತ್ತು. ಕೇಂದ್ರ ಸರ್ಕಾರಿ ನೌಕರರಿಗೆ ಶೇ. 3ರಷ್ಟು ಹೆಚ್ಚುವರಿ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರಕ್ಕೆ ಸಂಪುಟದ ಅನುಮೋದನೆ ನೀಡಲಾಗಿತ್ತು.
ಈ ಹಿನ್ನಲೆಯಲ್ಲಿ ಕರ್ನಾಟಕದ ಸರ್ಕಾರಿ ನೌಕರರು ತುಟ್ಟಿಭತ್ಯೆ ಏರಿಕೆ ಯಾವಾಗ? ಎಂದು ಕಾದು ಕುಳಿತಿದ್ದರು. ಸಿ. ಎಸ್. ಷಡಾಕ್ಷರಿ ಅವರು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದರು. ಪತ್ರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01-07-2024ರಿಂದ ಅನ್ವಯವಾಗುವಂತೆ ಬಾಕಿ ಇರುವ ತುಟ್ಟಿಭತ್ಯೆಯನ್ನು ನಗದು ರೂಪದಲ್ಲಿ ಬಿಡುಗಡೆ ಮಾಡುವ ಬಗ್ಗೆ ಎಂಬ ವಿಷಯ ಒಳಗೊಂಡಿತ್ತು. ಕೇಂದ್ರ ಸರ್ಕಾರದ ಆದೇಶ ಸಂ:l/5/2024-E.II(B) ದಿನಾಂಕ 21-10-2024 ಉಲ್ಲೇಖಿಸಿದ್ದರು.
ಪತ್ರದಲ್ಲಿಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡಿದ ದಿನಾಂಕದಿಂದಲೇ ಕರ್ನಾಟಕ ರಾಜ್ಯ ಸರ್ಕಾರವು ಸಹ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಮಂಜೂರು ಮಾಡುವುದು ಸಂಪ್ರದಾಯವಾಗಿರುತ್ತದೆ ಎಂದು ವಿವರಣೆ ನೀಡಿದ್ದರು.
ಪ್ರಸ್ತುತ ಕೇಂದ್ರ ಸರ್ಕಾರವು ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನಾಧರಿಸಿ ಉಲ್ಲೇಖಿತ ಆದೇಶದಲ್ಲಿ ದಿನಾಂಕ 01-07-2024ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 3ರಷ್ಟು ತುಟ್ಟಿಭತ್ಯೆಯನ್ನು ಮಂಜೂರು ಮಾಡಿ ಆದೇಶಿಸಿದೆ. ಆದ್ದರಿಂದ, ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ದಿನಾಂಕ 01-07-2024 ರಿಂದ ಅನ್ವಯವಾಗುವಂತೆ ಶೇ. 3ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣ ನಗದು ರೂಪದಲ್ಲಿ ನೀಡಿ ಆದೇಶ ಹೊರಡಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಲು ತಮ್ಮಲ್ಲಿ ಕೋರಿದೆ ಎದು ಪತ್ರದಲ್ಲಿ ಹೇಳಿದ್ದರು.
ಕೇಂದ್ರ ಸರ್ಕಾರದ ತುಟ್ಟಿಭತ್ಯೆ ಏರಿಕೆಯು 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿದೆ. ಕರ್ನಾಟಕ ಸರ್ಕಾರವು ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಏರಿಕೆ ಮಾಡಿದ ಬಳಿಕ ರಾಜ್ಯದಲ್ಲಿ ಏರಿಕೆ ಮಾಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.












Click it and Unblock the Notifications