ಬಿಜೆಪಿ ನಾಯಕರು ಮಹಾಭಾರತದ ನಾಟಕ ತೋರಿಸುತ್ತಿದ್ದಾರೆ!
ಬೆಂಗಳೂರು: ನಿನ್ನೆ ಕರ್ನಾಟಕ ವಿಧಾನಸಭೆ ಅಧಿವೇಶನದ ಇತಿಹಾಸದಲ್ಲೇ ಮರೆಯಲಾಗದ ಘಟನೆ ನಡೆದು ಹೋಗಿತ್ತು. ಸರ್ಕಾರದ ಬಿಲ್ ಪ್ರತಿ ಹರಿದು ಹಾಕಿದ್ದ 10 ಬಿಜೆಪಿ ಶಾಸಕರನ್ನ ಸ್ಪೀಕರ್ ಯು.ಟಿ.ಖಾದರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಈ ವಿಚಾರ ಇದೀಗ ದೇಶಾದ್ಯಂತ ಸದ್ದು ಮಾಡುವಾಗಲೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘಟನೆ ಬಗ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನಿನ್ನೆಯ ಘಟನೆ ಬಗ್ಗೆ ಹಾಗೂ ಬಿಜೆಪಿ ನಾಯಕರ ಹೋರಾಟದ ಕುರಿತಾಗಿ ವಿಧಾನಸೌಧದ ಆವರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಶಾಸಕರು ಹತಾಶೆಯಿಂದ ದಲಿತ ಸ್ಪೀಕರ್ ಮೇಲೆ ಗೂಂಡಾ ವರ್ತನೆ ತೋರಿದ್ದಾರೆ. ಅವರು ಪ್ರತಿಭಟನೆ ಮಾಡಲಿ, ನಮ್ಮ ತಪ್ಪು ಕಂಡುಹಿಡಿದು ಪ್ರಶ್ನಿಸಲಿ. ದೆಹಲಿ ನಾಯಕರು ತಮ್ಮ ಫೋಟೋ ನೋಡಲಿ, ಎಂದು ಅವರಲ್ಲೇ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ನಾಯಕರು ಮಹಾಭಾರತದ ನಾಟಕ ತೋರಿಸುತ್ತಿದ್ದು, ತೋರಿಸಲಿ. ಅವರು ಏನು ಬೇಕಾದರೂ ಹೇಳಿಕೊಳ್ಳಲಿ. ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.

ದೇವೇಗೌಡರು ಪಕ್ಷದ ನಿಲುವು ಹೇಳಲಿ
ಬಿಜೆಪಿ ಹೋರಾಟಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಬೆಂಬಲದ ಕುರಿತು ಮಾತನಾಡಿ, ಯಾರಾದರೂ ಬೆಂಬಲ ನೀಡಲಿ. ಅವರಿಗೆ ಬೆಂಬಲ ನೀಡುವ ಅವರ ಜೊತೆಗೆ ಸೇರುವ ಹಕ್ಕಿದೆ. ಅವರ ಆಂತರಿಕ ವಿಚಾರಕ್ಕೆ ನಾವ್ಯಾಕೆ ಹಸ್ತಕ್ಷೇಪ ಮಾಡೋಣ. ಅಸ್ತಿತ್ವದ ವಿಚಾರ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಅವರು ಅವರ ನಿಲುವು ತಿಳಿಸಲಿ. ಎಚ್‌ಡಿಕೆ ಅವರ ನಿಲುವು ಅನೇಕ ಬಾರಿ ಅನೇಕ ರೀತಿಯಲ್ಲಿ ಬದಲಾಗಿದೆ. ಹೀಗಾಗಿ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಆ ಪಕ್ಷದ ನಿಲುವು ಹೇಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಸ್ಪೀಕರ್ ಬದಲಾವಣೆ ಆಗ್ರಹದ ಬಗ್ಗೆ ಪ್ರತಿಕ್ರಿಯೆ
ಇನ್ನೂ ಈ ವೇಳೆ ವಿರೋಧ ಪಕ್ಷಗಳ ಮೈತ್ರಿ ಸರ್ಕಾರಕ್ಕೆ ಸವಾಲಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಈಗ ಆ ಬಗ್ಗೆ ಚರ್ಚೆ ಬೇಡ. ರಾಜ್ಯ ಮಟ್ಟದಲ್ಲಿ ಅವರ ನಿಲುವು ಸ್ವಲ್ಪ ಸ್ವಲ್ಪ ಗೊತ್ತಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಅವರ ನಿರ್ಧಾರ ಅಂತಿಮವಾಗಿಲ್ಲ. ಈ ವಿಚಾರಕ್ಕೆ ಸಿಎಂ ಇಬ್ರಾಹಿಂ ಈವರೆಗೆ ಮಾತನಾಡಿಲ್ಲ. ದೇವೇಗೌಡರು ಮಾತನಾಡಿಲ್ಲ ಕೇವಲ ಶಾಸಕಾಂಗ ಪಕ್ಷದ ನಾಯಕರು ಮಾತ್ರ ನಿಲುವು ವ್ಯಕ್ತಪಡಿಸಿದ್ದು ರಾಜ್ಯಾಧ್ಯಕ್ಷರಾಗಲಿ ಅಥವಾ ರಾಷ್ಟ್ರೀಯ ಅಧ್ಯಕ್ಷರಾಗಲಿ ಈ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಸ್ಪೀಕರ್ ಬದಲಾವಣೆಗೆ ಸಹಿ ಹಾಕಿರುವ ಒಂದೇ ಮಾತಿನಲ್ಲಿ ಉತ್ತರಿಸಿದ ಡಿಸಿಎಂ, 'ಅವರಿಗೆ ಯಶಸ್ಸಾಗಲಿ' ಎಂದರು.

ಅಧಿವೇಶನದಲ್ಲಿ ನಿನ್ನೆ ಆಗಿದ್ದಾದರೂ ಏನು?
ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಮೇಲೆ ವಿಧೇಯಕದ ಪ್ರತಿಯನ್ನು ಹರಿದು ಬಿಜೆಪಿ ಶಾಸಕರು ಎಸೆದಿದ್ದರು. ಹೀಗಾಗಿ ಸದನದಲ್ಲಿ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಸ್ವೀಕರ್ ಅಸಮಾಧಾನ ಹೊರಹಾಕಿದ್ರು. ಬಿಜೆಪಿ ಶಾಸಕರಾದ ಆರ್.ಅಶೋಕ್, ಡಾ. ಅಶ್ವಥ್ ನಾರಾಯಣ, ವಿ. ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ವೇದವ್ಯಾಸ್ ಕಾಮತ್ ಮತ್ತು ಯಶಪಾಲ್ ಸುವರ್ಣ, ಧೀರಜ್ ಮುನಿರಾಜ್, ಆರಗ ಜ್ಞಾನೇಂದ್ರ, ಭರತ್ ವೈ ಶೆಟ್ಟಿ ಸೇರಿ ಉಮಾನಾಥ್ ಕೋಟ್ಯಾನ್ ಅವರನ್ನ ಅಮಾನತು ಮಾಡಿ ಸ್ಪೀಕರ್ ಆದೇಶ ಹೊರಡಿಸಿದ್ದರು.
ಒಟ್ನಲ್ಲಿ ಶಾಸಕರ ಅಮಾನತು ವಿಚಾರ ಇಟ್ಟುಕೊಂಡು ಬಿಜೆಪಿ ಭಾರಿ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ. ಆದರೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ವಿಪಕ್ಷಗಳ ನಾಯಕರ ವಿರುದ್ಧ ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ. ಹೀಗಾಗಿ ಎರಡೂ ಬಣದ ನಡುವೆ ಫೈಟ್ ಬಲು ಜೋರಾಗಿದ್ದು, ಮುಂದೆ ಈ ತಿಕ್ಕಾಟ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದನ್ನ ಕಾದು ನೋಡಬೇಕಿದೆ. ಈ ಮಧ್ಯೆ ರಾಜ್ಯದಲ್ಲಿ ನಡೆದಿರುವ ಘಟನೆ ದೇಶಾದ್ಯಂತ ಸುದ್ದಿಯಾಗಿದ್ದು ಸಖತ್ ಸದ್ದು ಮಾಡುತ್ತಿದೆ.












Click it and Unblock the Notifications