Property: ಹೀಗೆ ಮಾಡಿ ನಿಮ್ಮ ಆಸ್ತಿ ಮೌಲ್ಯ ಡಬಲ್ ಆಗುತ್ತೆ: ಬಿಗ್ ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಅಕ್ಟೋಬರ್ 25: ಬೆಂಗಳೂರಿನ ಆಸ್ತಿಗಳನ್ನು 'ಬಿ' ಖಾತೆಯಿಂದ 'ಎ' ಖಾತೆಗೆ ಪರಿವರ್ತನೆ ಮಾಡಲಾಗುತ್ತಿದೆ. ನೀವು ಕಂದಾಯ ಭೂಮಿ ತೆಗೆದುಕೊಂಡಿದ್ದು, ದಾಖಲೆಗಳು ಸರಿ ಇಲ್ಲವಾದರೆ ಯಾರಿಗೂ ಸಾಲ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ಇದೊಂದು ಐತಿಹಾಸಿಕ ನಿರ್ಧಾರ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು. ನೀವು ನಿಮ್ಮ ಆಸ್ತಿಯ ಗೈಡೆನ್ಸ್ ವ್ಯಾಲ್ಯೂ ಮೇಲಿನ 5%ರಷ್ಟು ಹಣವನ್ನು ಪಾವತಿ ಮಾಡಿ. ಎ ಖಾತಾ ಪಡೆದರೆ ನಿಮ್ಮ ಆಸ್ತಿ ಮೌಲ್ಯ ದ್ವಿಗುಣವಾಗುತ್ತದೆ. ಇನ್ನು ನಿಮ್ಮ ಆಸ್ತಿ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಿಸುತ್ತಿದ್ದು, ಭವಿಷ್ಯದಲ್ಲಿ ಯಾರೂ ನಿಮ್ಮ ಆಸ್ತಿ ದಾಖಲೆಗಳನ್ನು ಅಕ್ರಮವಾಗಿ ತಿದ್ದುವುದಕ್ಕೆ ಆಸ್ಪದವಿಲ್ಲ ಎಂದು ತಿಳಿಸಿದರು.
ಇಲ್ಲಿ ಬಂದಿರುವ ಅನೇಕರು, ಕಸ ಸಮಸ್ಯೆ, ರಸ್ತೆ, ಪಾರ್ಕ್, ಜಿಮ್, ಶೌಚಾಲಯ, ಪೊಲೀಸ್ ವಿಚಾರ, ಎಲ್ ಇಡಿ ದೀಪ, ಬಸ್ ನಿಲ್ದಾಣ, ರಸ್ತೆ ಅಗಲೀಕರಣ, ಮೆಟ್ರೋ, ಕೆರೆ, ಕಲುಷಿತ ನೀರು, ಪಾರ್ಕ್ ಒತ್ತುವರಿ, ನೀರಿನ ಸಂಪರ್ಕ, ಬಿಡಿಎ ಪ್ಲಾಟ್ ಹಸ್ತಾಂತರ. ಬಿಡಿಎ ಅಧಿಸೂಚನೆ, ಸಿಸಿ ಕ್ಯಾಮೆರಾ, ಸ್ಟೇಡಿಯಂ, ಚಿತಾಗಾರ, ಬೀದಿ ವ್ಯಾಪಾರಿಗಳಿಂದ ರಸ್ತೆ ಒತ್ತುವರಿ, ಕ್ಲಬ್, ಕೌಶಲ್ಯಾಭಿವೃದ್ಧಿ ಕೇಂದ್ರ, ಆಸ್ಪತ್ರೆ ಸೇರಿದಂತೆ ಅನೇಕ ವಿಚಾರವಾಗಿ ಪ್ರಸ್ತಾಪ ಮಾಡಿದ್ದೀರಿ. ರಸ್ತೆ ಅಗಲೀಕರಣ ಮಾಡಬೇಕಾದರೆ, ಅದರದೇ ಆದ ಕಾನೂನಿದೆ. ಇದರ ಬಗ್ಗೆ ಗಮನಹರಿಸುತ್ತೇವೆ. ನಿಮ್ಮ ಈ ಎಲ್ಲಾ ವಿಚಾರಗಳ ಬಗ್ಗೆಯೂ ನಾವು ಗಮನಹರಿಸುತ್ತೇವೆ. ನಿಮಗೆ ಉತ್ತಮ ಆಡಳಿತ ನೀಡಿ ನಿಮ್ಮ ಸಮಸ್ಯೆ ಬಗೆಹರಿಸಬೇಕು ಎಂಬ ಉದ್ದೇಶದಿಂದಲೇ ನಾವು ಜಿಬಿಎ ರಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ಜಿಬಿಎ ವ್ಯಾಪ್ತಿಗೆ ಕೆಲವು ಪ್ರದೇಶಗಳನ್ನು ಸೇರಿಸಬೇಕಾಗಿದ್ದು. ತಕ್ಷಣವೇ ಸೇರಿಸುವುದಿಲ್ಲ. ಈಗ ಚುನಾವಣೆ ಮಾಡುತ್ತೇವೆ. ಅದಾದ ನಂತರ ಯಾವ ಪ್ರದೇಶಗಳನ್ನು ಸೇರಿಸಿಕೊಳ್ಳಬೇಕು ಎಂದು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಆನಂತರ ಕಾನೂನಾತ್ಮಕವಾಗಿ ಸೇರಿಸಿಕೊಳ್ಳಲಾಗುವುದು. ಇಲ್ಲಿ ಬಂದಿರುವ ಅನೇಕರು ಶಾಸಕ ಎಸ್.ಟಿ ಸೋಮಶೇಖರ್ ಅವರ ಕಾರ್ಯವನ್ನು ಮೆಚ್ಚಿದ್ದೀರಿ. ನೀವು ಉತ್ತಮ ಶಾಸಕರನ್ನು ಪಡೆದಿದ್ದೀರಿ. ಅವರು ನನ್ನ ಬಳಿ ಬಂದು ನಿಮ್ಮ ಕ್ಷೇತ್ರಕ್ಕೆ ಅನುದಾನ ಪಡೆದಿದ್ದಾರೆ ಎಂದು ಹೇಳಿದರು.
ನೀವುಗಳು ನಮ್ಮ ಮನೆಗೆ ಬಂದು ನನ್ನನ್ನು ಭೇಟಿ ಮಾಡಲು ಕಷ್ಟವಾಗುತ್ತದೆ. ನನ್ನ ಮನೆಗೆ ಪಕ್ಷದ ಕಾರ್ಯಕರ್ತರು, ನೀರಾವರಿ ಇಲಾಖೆಗೆ ಸಂಬಂಧಿಸಿದಂತೆ ಅನೇಕರು ರಾಜ್ಯದ ಇತರೆ ಭಾಗದ ಜನರು, ಶಾಸಕರು ಬರುತ್ತಿರುತ್ತಾರೆ. ಹೀಗಾಗಿ ನಾನೇ ನಿಮ್ಮ ಬಳಿಗೆ ಬಂದಿದ್ದೇನೆ. ಪ್ರತಿ ಪಾಲಿಕೆ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿಮ್ಮ ಸಮಸ್ಯೆ ಬಗೆಹರಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಇಲ್ಲಿ ಉಪಸ್ಥಿತರಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ನನಗೆ ಅರ್ಜಿ ನೀಡಲು ಯಾರಿಗೆ ಸಾಧ್ಯವಾಗಿಲ್ಲವೋ, ಅವರೆಲ್ಲರೂ ಭಾನುವಾರ (ನಾಳೆ) ಕಬ್ಬನ್ ಪಾರ್ಕ್ ನಡೆಯಲಿರುವ ಕಾರ್ಯಕ್ರಮಕ್ಕೆ ಬಂದು ಅರ್ಜಿ ನೀಡಬಹುದು. ಬೆಳಗ್ಗೆ 7ರಿಂದ 10 ಗಂಟೆವರೆಗೂ ನಾನು ಅರ್ಜಿ ಸ್ವೀಕರಿಸುತ್ತೇನೆ. ಬೆಂಗಳೂರಿನ ಐದೂ ಪಾಲಿಕೆ ವ್ಯಾಪ್ತಿಯ ಜನರು ಬಂದು ಭೇಟಿ ಮಾಡಬಹುದು. ಮುಂದಿನ ದಿನಗಳಲ್ಲಿ ನಿರಂತರವಾಗಿ ಈ ರೀತಿಯ ಜನಸಂಪರ್ಕ ಸಭೆಗಳನ್ನು ಮಾಡಲು ವ್ಯವಸ್ಥೆ ರೂಪಿಸಲಾಗುವುದು ಎಂದು ತಿಳಿಸಿದರು.
ಇನ್ನು ಸಾರ್ವಜನಿಕರು ತಮ್ಮ ಅಹವಾಲುಗಳನ್ನು 1533ಗೆ ಕರೆ ಮಾಡಿಯೂ ದಾಖಲಿಸಬಹುದು. ಸಾರ್ವಜನಿಕರ ಅಹವಾಲು ಬಗೆಹರಿಸಲು ಅಧಿಕಾರಿಗಳ ತಂಡ ನಿಯೋಜಿಲಾಗಿದೆ. ಎಲ್ಲರ ಸಮಸ್ಯೆ ಬಗೆಹರಿಸಲು ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಕಾನೂನು ಚೌಕಟ್ಟಿನಲ್ಲಿ ಸಾಧ್ಯವಾದಷ್ಟು ಪರಿಹಾರ ನೀಡಲಾಗುವುದು ಎಂದರು.
ಬೆಂಗಳೂರು ದೊಡ್ಡ ಗಾತ್ರದಲ್ಲಿ ಬೆಳೆದಿದೆ. ಜನಸಂಖ್ಯೆ 1.40 ಕೋಟಿಗೆ ಏರಿಕೆಯಾಗಿದೆ. 70 ಲಕ್ಷ ಜನ ನಿತ್ಯ ಬಂದು ಹೋಗುತ್ತಾರೆ. 110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸಿರಲಿಲ್ಲ, ನಾನು ಬಂದ ನಂತರ ತೊರೆಕಾಡನಹಳ್ಳಿಯಿಂದ ಕಾವೇರಿ ನೀರನ್ನು ತಂದು ನಿಮಗೆ ನೀರು ಒದಗಿಸಿದ್ದೇವೆ. ಆದರೂ ಅನೇಕರು ಇದರ ಸಂಪರ್ಕ ಪಡೆದಿಲ್ಲ. ಈ ಅವಕಾಶ ಕಳೆದುಕೊಳ್ಳಬೇಡಿ. ನೀರು ಬೇರೆಡೆಗೆ ಹೋಗುತ್ತಿದೆ. ಈ ಭಾಗದ ಜನರು ಸಂಪರ್ಕ ತೆಗೆದುಕೊಳ್ಳಿ. ಸಂಪರ್ಕ ಪಡೆಯಲು ವಿವಿಧ ಕಂತುಗಳಲ್ಲಿ ಹಣ ಪಾವತಿಗೂ ಅವಕಾಶ ಕಲ್ಪಿಸಿದ್ದೇವೆ ಎಂದು ತಿಳಿಸಿದರು.












Click it and Unblock the Notifications