ಮುನಿರತ್ನಂ ನಾಯ್ಡು ಆಯ್ಕೆ ಮಾಡಿ ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ: ಡಿಕೆ ಶಿವಕುಮಾರ್ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಅಕ್ಟೋಬರ್ 13: ಮತ್ತೆ ಬಿಜೆಪಿ ಶಾಸಕ ಮುನಿರತ್ನ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜಟಾಪಟಿ ಜೋರಾಗಿದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿ (ಶಾಸಕ ಮುನಿರತ್ನಂ ನಾಯ್ಡು) ವರ್ತನೆ ನೋಡಿದರೆ, ನೀವು ಎಂತಹ ನರಕದಲ್ಲಿ ಬದುಕುತ್ತಿದ್ದೀರಿ ಎನಿಸುತ್ತಿದೆ. ಇಂತಹ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ನನಗೆ ಅರ್ಥವಾಗುತ್ತದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸಾರ್ವಜನಿಕರ ಜತೆ ತಾವು ನಡೆಸುತ್ತಿದ್ದ ಸಂವಾದ ಕಾರ್ಯಕ್ರಮಕ್ಕೆ ಮುನಿರತ್ನಂ ನಾಯ್ಡು ಮತ್ತವರ ಬೆಂಬಲಿಗರು ಅಡ್ಡಿಪಡಿಸಿದ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು. ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ತಾಳ್ಮೆಯಿಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಬೇಕು ಎಂದೇ ಬಂದರೋ ಏನೋ. ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ, ನೀವೂ ತಲೆಕೆಡಿಸಿಕೊಳ್ಳಬೇಡಿ. ಇಂತಹವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಿಮ್ಮ ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ನನಗೆ ಚನ್ನಾಗಿ ಗೊತ್ತಿದೆ. ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಉತ್ತರ ನೀಡಿ ಎಂದು ಹೇಳಿದರು.

ಇಂತಹ ಪ್ರತಿನಿಧಿಯನ್ನು (ಮುನಿರತ್ನಂ ನಾಯ್ಡು) ಇಟ್ಟುಕೊಳ್ಳುವುದೋ, ಬೇಡವೋ ಎಂಬುದನ್ನು ಜನ ತೀರ್ಮಾನ ಮಾಡಬೇಕು. ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ. ಜನಪ್ರತಿನಿಧಿಗಳಿಗೆ ಏನು ಗೌರವ ನೀಡಬೇಕು ಎನ್ನುವ ಅರಿವು ನನಗಿದೆ. ರಾಜಕಾರಣದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ ಯಾವುದೂ ಶಾಶ್ವತವಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕಾರ್ಯಕ್ರಮಕ್ಕೆ ಆರಂಭದಲ್ಲಿಯೇ ಶಾಸಕ ಮುನಿರತ್ನ ಅಡ್ಡಿ ಪಡಿಸಿದ ಕುರಿತು ಮಾತನಾಡಿ, ಅವರಿಗೆ ರಾಜಕೀಯ ಮುಖ್ಯ. ಅವರು ಆರ್ ಎಸ್ ಎಸ್ ಸಂಸ್ಥೆಗೆ ಅಗೌರವ ತೋರುವ ಕೆಲಸ ಮಾಡಿದ್ದಾರೆ. ಆರ್ ಎಸ್ ಎಸ್ ಗೂ ಈ ಕಾರ್ಯಕ್ರಮಕ್ಕೂ ಏನು ಸಂಬಂಧ. ಇಲ್ಲಿಗೆ ಆ ಸಂಸ್ಥೆಯ ಟೋಪಿ, ಸಮವಸ್ತ್ರ ಧರಿಸಿ ಬರುವ ಅವಶ್ಯಕತೆ ಏನಿತ್ತು? ಆ ಸಂಸ್ಥೆ ತನ್ನದೇ ಆದ ಕೆಲಸ ಮಾಡುತ್ತಿದೆ. ಅವರು ಮಾಡಿದ ಕೆಲಸ ನನಗೆ ಮಾಡಿದ ಅವಮಾನವಲ್ಲ. ಆ ಸಂಸ್ಥೆಗೆ ಮಾಡಿದ ಅವಮಾನ. ಅದಕ್ಕೆ ಒಂದು ಇತಿಹಾಸವಿದೆ ಎಂದರು. ಶಾಸಕರನ್ನು ನಾಗರಿಕರೇ ಒಡೆದು ಓಡಿಸುತ್ತಿದ್ದರು. ಅವರ ವರ್ತನೆಯಿಂದ ಜನಕ್ಕೆ ಅಷ್ಟು ರೋಷ ಬಂತು. ಅವರು ಏನಾದರೂ ಮಾಡಿಕೊಳ್ಳಲಿ ಎಂದು ಹೇಳಿದರು.
ಚುನಾವಣೆ ನಂತರ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಇದು ಯಾವುದೇ ಶಿಲಾನ್ಯಾಸ ಕಾರ್ಯಕ್ರಮವಲ್ಲ. ಎಲ್ಲಾ ಸಾರ್ವಜನಿಕರಿಗೂ ಮುಕ್ತ ಆಹ್ವಾನವಿದ್ದ ಕಾರ್ಯಕ್ರಮ. ಜನರ ಸಮಸ್ಯೆಗಳನ್ನು ಅರಿಯುವ ಕಾರ್ಯಕ್ರಮ. ಜನಪ್ರತಿನಿಧಿಗೆ ಏನು ಗೌರವ ನೀಡಬೇಕೊ ಅದನ್ನು ನೀಡುತ್ತೇವೆ. ಲಾಲ್ ಬಾಗ್ ನಡಿಗೆ ವೇಳೆ ರಿಜ್ವಾನ್ ಹರ್ಷದ್ ಭಾಗವಹಿಸಿದ್ದರು. ಅವರು ಮಾತನಾಡದೆ ಜನರು ಮಾತನಾಡಲು ಅವಕಾಶ ನೀಡಿದರು. ಇಲ್ಲಿನ ಶಾಸಕರು ಸದನದಲ್ಲಿ ಮಾತನಾಡಬಹುದು. ಜಿಬಿಎ ಸಭೆಯಲ್ಲಿ ತಮ್ಮ ದುಃಖ ದುಮ್ಮಾನಗಳನ್ನ ತಿಳಿಸಬಹುದಿತ್ತು, ಆದರೆ ಬರಲಿಲ್ಲ. ಅವರಿಗೆ ಪ್ರಚಾರ ಬೇಕು. ಮಾಧ್ಯಮಗಳು ಸಹ ಅವರಿಗೆ ಪ್ರಚಾರ ನೀಡುತ್ತಾರೆ ಎಂದರು.












Click it and Unblock the Notifications