ಗ್ರಾಮೀಣ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು: ಡಿಕೆ ಶಿವಕುಮಾರ್
ಬೆಂಗಳೂರು: ಗ್ರಾಮೀಣ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವಂತೆ ಮಾಡಲು ಪ್ರತ್ಯೇಕ ಕಾರ್ಯಕ್ರಮ ಆಲೋಚಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಸಿಎಸ್ಆರ್ ಸಮಾವೇಶ 2023ರ ಸಮಾರಂಭದಲ್ಲಿ ಡಿಸಿಎಂ ಮಾತನಾಡಿದರು.
ಪ್ರತಿ 2 ಪಂಚಾಯ್ತಿ ಸೇರಿಸಿ ಪಬ್ಲಿಕ್ ಶಾಲೆ ಆರಂಭಿಸಬೇಕು. ಅದಕ್ಕೆ ಬೇಕಾಗಿರುವ ಜಾಗವನ್ನು ಸರ್ಕಾರದಿಂದ ನೀಡುತ್ತೇವೆ. ನೀವು ಅಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಿ. ಪ್ರಮುಖ ಶಿಕ್ಷಣ ಸಂಸ್ಥೆಗಳು ಸರ್ಕಾರದ ಸಹಯೋಗದಲ್ಲಿ ಈ ಶಾಲೆಗಳ ಜವಾಬ್ದಾರಿ ವಹಿಸಿಕೊಳ್ಳುವಂತೆ ನಾವು ಮಾಡುತ್ತೇವೆ. ನೀವು ಹಣ ನೀಡಬೇಡಿ, ನಾವು ಕಾರ್ಯಕ್ರಮದ ರೂಪುರೇಷೆ ನೀಡುತ್ತೇವೆ. ನೀವೇ ಕಟ್ಟಡ ನಿರ್ಮಾಣ ಮಾಡಿ. ಈಗಾಗಲೇ ನಾನು ವಿಪ್ರೋ ಹಾಗೂ ಇಫೋಸಿಸ್ ರೀತಿಯ ಪ್ರಮುಖ ಸಂಸ್ಥೆಗಳ ಜತೆ ಮಾತನಾಡಿದ್ದೇನೆ. ಅವರು ಸಾವಿರ ಕೋಟಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲು ಸಿದ್ಧರಿದ್ದಾರೆ ಎಂದು ಡಿಸಿಎಂ ತಿಳಿಸಿದರು.

ಶಿಕ್ಷಣ ತಜ್ಞನಾಗಿ ನಾನು ಭಾಗವಹಿಸಿದ್ದೇನೆ!
ಮುಂದಿನ 3 ವರ್ಷಗಳಲ್ಲಿ ರಾಜ್ಯದ 2 ಸಾವಿರ ಗ್ರಾಮ ಪಂಚಾಯ್ತಿಗಳಲ್ಲಿ ಈ ಪಬ್ಲಿಕ್ ಶಾಲೆಗಳು ನಿರ್ಮಾಣವಾಗಲಿದ್ದು, ಸರ್ಕಾರದಿಂದ ಒಂದು ರೂಪಾಯಿ ವೆಚ್ಚವಿಲ್ಲದೇ ನಿರ್ಮಾಣವಾಗಲಿದೆ ಎಂಬುದು ವಿಶೇಷವಾಗಿದೆ. ಆದರೆ ಈ ವಿಚಾರದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಜವಾಬ್ದಾರಿ ಮಹತ್ವದ್ದಾಗಿದ್ದು, ನಾವು ಅವರಿಗೆ ಬೇಕಾದ ಎಲ್ಲಾ ಸಹಕಾರ ನೀಡಲು ಸಿದ್ಧರಿದ್ದೇವೆ. ನಾವು ಮೊದಲು ಪ್ರಾಥಮಿಕ ಶಿಕ್ಷಣದ ಬಗ್ಗೆ ಗಮನಹರಿಸೋಣ, ನಂತರ ಹಂತಹಂತವಾಗಿ ಕೌಶಲ್ಯ ಅಭಿವೃದ್ಧಿಯತ್ತ ಗಮನಹರಿಸೋಣ. ಆಗ ಸಮಾಜ ತಾನಾಗಿಯೇ ಅಭಿವೃದ್ಧಿ ಹೊಂದುತ್ತದೆ.ನಾನು ಹುಟ್ಟಿನಿಂದ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಿಂದ ರಾಜಕಾರಣಿ. ಇಂದು ಶಿಕ್ಷಣ ತಜ್ಞನಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.
ಹಳ್ಳಿ ಬಿಟ್ಟು ನಗರಕ್ಕೆ ಜನರ ವಲಸೆ
ಈ ಸಮಾವೇಶದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ದೇಶ ಹಾಗೂ ರಾಜ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು, ನಿಮ್ಮೆಲ್ಲರಿಗೂ ಅಭಿನಂದನೆ. ಬೆಂಗಳೂರಲ್ಲಿ ಇಂದು ಇರುವ ಜನಸಂಖ್ಯೆ ಎಷ್ಟು? ಇದು ಏರಿಕೆಯಾಗಲು ಕಾರಣವೇನು? ನಗರ ಪ್ರದೇಶಗಳಲ್ಲಿ ಜನಸಂಖ್ಯೆ ಏರಿಕೆಯಾಗುತ್ತಿರುವುದು ಏಕೆ? ನನ್ನ ಕ್ಷೇತ್ರದ 70 ಸಾವಿರ ಮತದಾರರು ಬೆಂಗಳೂರಲ್ಲಿದ್ದಾರೆ. ಈ ವಿಚಾರವಾಗಿ ನಾನು ಸಮೀಕ್ಷೆ ನಡೆಸಿದಾಗ ವಲಸೆ ಬಂದಿರುವವರು ಶಿಕ್ಷಣ ಮತ್ತು ಉದ್ಯೋಗ ಕಾರಣಕ್ಕಾಗಿ ಬಂದಿದ್ದಾರೆ ಎಂದು ಡಿಸಿಎಂ ತಿಳಿಸಿದರು.
ಜನರ ವಲಸೆ ತಪ್ಪಿಸುವುದು ಹೇಗೆ?
ಗ್ರಾಮೀಣ ಜನರ ವಲಸೆಯನ್ನ ತಪ್ಪಿಸದಿದ್ದರೆ ನಗರಗಳನ್ನ ಉಳಿಸಿಕೊಳ್ಳಲು ಸಾಧ್ಯವಿಲ್ಲ. ನಗರ ಪ್ರದೇಶಕ್ಕೆ ಬಂದವರೆಲ್ಲರಿಗೂ ಉತ್ತಮ ಸವಲತ್ತು ನೀಡಲು ಆಗಲ್ಲ. ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆದು ದೇಶ ನಿರ್ಮಾಣದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಕೂಡ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಲಾಯಿತು. ನಿವೆಲ್ಲರೂ ವೈಯಕ್ತಿಕವಾಗಿ ಸಿಎಸ್ಆರ್ ಮೂಲಕ ಸೇವೆ ಸಲ್ಲಿಸುತ್ತಿದ್ದೀರಿ. ಇನ್ನುಮುಂದೆ ನೀವು ಒಟ್ಟಾಗಿ ಸೇರಿ ಯಾಕೆ ಕೆಲಸ ಮಾಡಬಾರದು. ಆಗಾಗ ಒಂದು ಮಾತು ಹೇಳುತ್ತಿರುತ್ತೇನೆ. ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಪ್ರಗತಿ. ಈ ಕಾರಣಕ್ಕೆ ನಾವು ಇಲ್ಲಿ ಸೇರಿದ್ದೇವೆ.

ಶಿಕ್ಷಣ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿ
ನಾನು ರಾಮನಗರ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ರಾಮನಗರದಲ್ಲಿ ನಮ್ಮ ಉದ್ಯಮಿಗಳು ನಮ್ಮ ಜಿಲ್ಲೆಯಲ್ಲೇ ವೆಚ್ಚ ಮಾಡಬೇಕು. ಮೂರ್ನಾಲ್ಕು ವರ್ಷಗಳ ಹಿಂದೆ ಟೊಯೋಟಾ ಕಂಪನಿ ಜತೆ ಚರ್ಚೆ ಮಾಡಿ ನಮ್ಮ ಜಿಲ್ಲೆಯಲ್ಲಿರುವ ಸುಮಾರು 300 ಶಾಲೆಗಳ ಜವಾಬ್ದಾರಿ ನೀಡಿದೆವು. ಅವರು ಅಲ್ಲಿ ಅತ್ಯುತ್ತಮ ಶೌಚಾಲಯ ಸೌಲಭ್ಯ ಕಲ್ಪಿಸಿದ್ದಾರೆ. ನಾವು ಈಗ ಹೊಸ ಯೋಜನೆ ರೂಪಿಸುತ್ತಿದ್ದು, ನಮ್ಮಲ್ಲಿ 6600 ಪಂಚಾಯ್ತಿಗಳಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಪ್ರಭಾವಿ ಸಂಸ್ಥೆಗಳ ಜತೆ ಮಾತನಾಡಿದ್ದು ಪಂಚಾಯ್ತಿ ಮಟ್ಟದಲ್ಲಿ ಪಬ್ಲಿಕ್ ಶಾಲೆ ಆರಂಭಿಸಲು ಚಿಂತನೆ ನಡೆಸಿದ್ದೇವೆ. ನೀವು ಬೇರೆಲ್ಲೂ ಹಣ ವೆಚ್ಚ ಮಾಡಬೇಡಿ. ಶಿಕ್ಷಣ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿ, ಕಾರ್ಯಕ್ರಮವನ್ನು ನಾವು ನೀಡುತ್ತೇವೆ.
ಗ್ರಾಮೀಣ ಮಕ್ಕಳ ಸಾಧನೆ ಬಗ್ಗೆ
ನಾವು ಗ್ರಾಮೀಣ ಪ್ರದೇಶದ ಜನ ಶಿಕ್ಷಣ ಹಾಗೂ ಉದ್ಯೋಗ ಹುಡುಕಿಕೊಂಡು ನಗರ ಪ್ರದೇಶಕ್ಕೆ ಬರುವುದನ್ನು ತಪ್ಪಿಸಬೇಕು. ಇದು ಕರ್ನಾಟಕ ಸರ್ಕಾರದ ಬದ್ಧತೆ. ನಮ್ಮ ಜನರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದರೆ, ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡಲಿದ್ದಾರೆ. ಈಗಿನ ತಂತ್ರಜ್ಞಾನದ ಮೂಲಕ ಮಕ್ಕಳು ಜಾಗತಿಕ ಮಟ್ಟದಲ್ಲಿ ಆಲೋಚನೆ ಮಾಡಬಹುದು. ಜಗತ್ತಿನ ಪ್ರಮುಖ 500 ಕಂಪನಿಗಳಲ್ಲಿ ಭಾರತೀಯ ಪಾತ್ರ ಮಹತ್ವದ್ದಾಗಿದೆ. ಇದೇ ಕಾರಣಕ್ಕೆ ಬೆಂಗಳೂರು ಐಟಿ ರಾಜಧಾನಿ, ಸಿಲಿಕಾನ್ ಸಿಟಿ ಎಂಬ ಹೆಸರು ಪಡೆದಿದೆ ಎಂದರು.
ಶಿಕ್ಷಣದಲ್ಲಿ ಕರ್ನಾಟಕಕ್ಕೆ ಹೆಮ್ಮೆ
ಹಾಗೇ, ನೆದರ್ಲೆಂಡ್ ಪ್ರಧಾನಿಗಳು ಬೆಂಗಳೂರಿಗೆ ಭೇಟಿ ನೀಡಿದ್ದಾಗ ನಾನು ನೀವು ಇಲ್ಲಿಗೆ ಬರಲು ಕಾರಣವೇನು? ಎಂದು ಕೇಳಿದ್ದೆ. ಅದಕ್ಕೆ ಅವರು ಉತ್ತರಿಸಿ, ನಾನು ಸಿಲಿಕಾನ್ ಸಿಟಿಗೆ ಹೋಗಿದ್ದೆ. ಅಲ್ಲಿ ಭಾರತೀಯರು ಅದರಲ್ಲೂ ಕರ್ನಾಟಕ ರಾಜ್ಯದವರು ಹೆಚ್ಚಾಗಿದ್ದರು. ಹೀಗಾಗಿ ಇಲ್ಲಿಗೆ ಭೇಟಿ ನೀಡಲು ತೀರ್ಮಾನಿಸಿದೆ ಎಂದು ಹೇಳಿದರು. ಇಂದಿಗೂ ದೇಶದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜು ಹೊಂದಿರುವ ರಾಜ್ಯ ನಮ್ಮದು. ನಮ್ಮ ರಾಜ್ಯದಲ್ಲಿ 67 ಮೆಡಿಕಲ್ ಕಾಲೇಜುಗಳಿವೆ. ವಿಶ್ವದ ಅತ್ಯುತ್ತಮ ವೈದ್ಯರು, ಇಂಜಿನಿಯರ್ ಗಳು ಕರ್ನಾಟಕ ರಾಜ್ಯದವರು. ಇದು ನಮ್ಮ ಸಾಮರ್ಥ್ಯ ಎಂದು ಡಿಸಿಎಂ ಡಿಕೆ ಶೀವಕುಮಾರ್ ತಿಳಿಸಿದರು.

ಮಾಜಿ ಪ್ರಧಾನಿ ಕೂಡ ಹೊಗಳಿದ್ದರು
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡುವ ಸಂದರ್ಭದಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಬಂದಾಗ, ಇಷ್ಟು ದಿನ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ಭಾರತದ ಇತರೆ ನಗರಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಈಗ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಿಳಿಸಿದರು. ನಮ್ಮ ರಾಜ್ಯ, ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಇಲ್ಲಿನ ಗುಣಮಟ್ಟದ ಶಿಕ್ಷಣ ಕಾರಣ ಎಂದು ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ನಮ್ಮಲ್ಲಿ ಅತಿ ದೊಡ್ಡ ಮಾನವ ಸಂಪನ್ಮೂಲವನ್ನು ನಿರ್ಮಿಸಲಾಗುತ್ತಿದೆ. ನಮ್ಮಲ್ಲಿ ಅತಿ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುತ್ತಿದ್ದು, ಸರಾಸರಿ ಯುವಕರು ಮಾತ್ರ ನಮ್ಮ ನಗರ ಪ್ರದೇಶಗಳಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ಪೋಷಕರ ಕನಸು ತಮ್ಮ ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ಉತ್ತಮ ಶಿಕ್ಷಣ ಕೊಡಿಸುವುದಾಗಿದೆ. ಹೀಗಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ನಗರಗಳತ್ತ ವಲಸೆ ಬರುವುದನ್ನು ತಪ್ಪಿಸಬೇಕು. ನಿಮ್ಮ ಕೈ ಬಲಪಡಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಬಲಿಷ್ಠ ಸರ್ಕಾರ ಅಧಿಕಾರದಲ್ಲಿದ್ದು ಸಮಾಜದಲ್ಲಿ ಬದಲಾವಣೆ ತರಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.












Click it and Unblock the Notifications