DCM DK Shivakumar: ವಿಧಾನಸಭೆ ಕಲಾಪ: ಆರ್. ಧ್ರುವನಾರಾಯಣ ನೆನೆದು ಕಣ್ಣೀರಿಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಜುಲೈ 03: ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲರ ಭಾಷಣದ ಬಳಿಕ ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಮಾಡುವ ಸಂದರ್ಭದಲ್ಲಿ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ ಅವರನ್ನು ನೆನೆದು ಡಿಸಿಎಂ ಡಿಕೆ ಶಿವಕುಮಾರ್ ಭಾವುಕರಾಗಿ ಕಣ್ಣಿರಿಟ್ಟಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಿರ್ಣಯವನ್ನು ಸ್ಪೀಕರ್ ಯು.ಟಿ ಖಾದರ್ ಮಂಡಿಸಿದರು. ಸಂತಾಪ ಸೂಚಕ ನಿರ್ಣಯಕ್ಕೆ ಬೆಂಬಲ ಸೂಚಿಸಿ ಹಲವರು ಮಾತನಾಡಿದರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮಾಜಿ ಸಂಸದ ಆರ್ ಧ್ರುವನಾರಾಯಣ ಕುರಿತಾಗಿ ಮಾತನಾಡಿ ಭಾವುಕರಾಗಿ ಕಣ್ಣೀರಿಟ್ಟರು. ನನ್ನ ನಂತರ ಯಾರು ರಾಜ್ಯಾಧ್ಯಕ್ಷ ಆಗ್ತಾರೆ ಅನ್ನೋ ಪ್ರಶ್ನೆ ಇತ್ತು. ಆ ಪ್ರಶ್ನೆ ಬಂದಾಗೆಲ್ಲ ನನ್ನ ಮನಸಲ್ಲಿ ಇದ್ದಿದ್ದು ಧ್ರುವನಾರಾಯಣ ಹೆಸರು ಮಾತ್ರ ಎಂದು ಭಾವುಕರಾದರು.

ನನ್ನ ನಂತರ ಧ್ರುವನಾರಾಯಣರನ್ನು ಅಧ್ಯಕ್ಷರಾಗಿ ಮಾಡ್ತಿದ್ದೆ. ಅಧ್ಯಕ್ಷ ಸ್ಥಾನದ ಜಂಜಾಟ ಯಾಕೆ ಅಂತ ಧ್ರುವನಾರಾಯ ಜತೆ ಒಮ್ಮೆ ಮಾತಾಡಿದ್ದೆ. ಅವರು ಬದುಕಿರುತ್ತಿದ್ರೆ ಅವರಿಗೆ ರಾಜ್ಯಾಧ್ಯಕ್ಷ ಮಾಡುವ ಆಕಾಂಕ್ಷೆ ಇತ್ತು.ಇವತ್ತು ಅವರಿದ್ದಿದ್ರೆ ಕ್ಯಾಬಿನೆಟ್ ಸಚಿವ ಆಗೋದ್ರಿಂದ ಯಾರೂ ತಪ್ಪಿಸೋಕೆ ಆಗ್ತಿರಲಿಲ್ಲ ಎಂದು ಹೇಳಿದರು.
ಧೃವನಾರಾಯಣ್ ಅವರು ನನ್ನ ಜತೆ ಕಾರ್ಯಾಧ್ಯಕ್ಷರಾಗಿದ್ದರು. ಅವರಿಗೆ ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲಾ ಜವಾಬ್ದಾರಿ ವಹಿಸಿದ್ದೆ. ಈ ಎಲ್ಲಾ ಕಡೆಗಳಲ್ಲಿ ಅವರು ಶುದ್ಧ ರಾಜಕಾರಣ ಮಾಡಿದ್ದಾರೆ. ಅವರಿಗೆ ವಹಿಸಿದ್ದ ಪ್ರಧೇಶದಲ್ಲಿ ಸುಮಾರು 75% ರಷ್ಟು ಸದಸ್ಯರು ಆಯ್ಕೆಯಾಗಿ ಬಂದಿದ್ದಾರೆ.
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬೊಮ್ಮಾಯಿ
ವ್ಯಕ್ತಿಯ ಸ್ಥಾನಮಾನದಿಂದ ಗೌರವ ದೊರೆಯುವುದಿಲ್ಲ. ಅವರ ಸಮಾಜಿಕ ನಡೆ ನುಡಿ ಜನರೊಂದಿಗೆ ಬೆರೆಯುವ ರೀತಿ ಅವರನ್ನು ನಾಯಕರಾಗಿ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ವಿಧಾನಸಭೆಯಲ್ಲಿ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಧ್ರುವ ನಾರಾಯಣ ಅವರು ಕ್ಷೇತ್ರದ ಜನರ ಜೊತೆ ಒಡನಾಟ ಹೊಂದಿದ್ದರು. ಲೋಕಸಭೆಯಲ್ಲಿ ಪ್ರಭಾವಶಾಲಿಯಾಗಿ ರಾಜ್ಯದ ಪರವಾಗಿ ಮಾತನಾಡಿದ್ದರು ಎಂದರು.
ಡಿ. ಬಿ. ಇನಾಮ್ ದಾರ್ ಅತ್ಯಂತ ಸ್ನೇಹ ಜೀವಿಯಾಗಿದ್ದರು. ಅವರು ಓದಿಕೊಂಡಿದ್ದರು. ಅವರು ಗಣಿ ಸಚಿವರಿದ್ದಾಗ ಇಲ್ಲಿಯ ಗಣಿ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಅವರು ಚಂದ್ರನಲ್ಲಿ ಗಣಿಗಾರಿಕೆ ಬಗ್ಗೆ ಮಾತನಾಡಿದ್ದರು. ಇತ್ತಿಚೆಗೆ ಪೇಪರ್ ನಲ್ಲಿ ಚಂದ್ರನಲ್ಲಿ ಗಣಿಗಾರಿಕೆ ನಡೆಯುವ ಬಗ್ಗೆ ಸುದ್ದಿ ಬಂದಿದೆ.
ಇನಾಮ್ ದಾರ್ ಅವರು ಮಲಪ್ರಭ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಕ್ಕರೆ ಕಾರ್ಖಾನೆ ಮುಚ್ಚುವ ಸಂದರ್ಭದಲ್ಲಿ ಅದನ್ನು ಉಳಿಸಿ ಬೆಳೆಸಿದವರು. ಯು. ಆರ್ ಸಭಾಪತಿ ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದರು. ವೆಂಕಟಸ್ವಾಮಿ ಶಾಸಕರಾಗಿ ಕೆಲಸ ಮಾಡಿದ್ದರು. ಉಮಾಕಾಂತ್ ಬೋಲ್ಕರ್ ಅವರ ಹೆಸರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೆಚ್ಚು ಚರ್ಚೆ ಇತ್ತು. ಧರ್ಮಪ್ಪ ಅವರು ಬಂಗಾರಪ್ಪ ಅವರ ಜೊತೆ ಇದ್ದವರು. ಹೋರಾಟದ ಮೂಲಕ ಬಂದವರು, ಭೂ ಸುಧಾರಣೆ, ಕಾಗೋಡು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಜೈಲು ಶಿಕ್ಷೆ ಅನುಭವಿಸಿದ್ದರು. ಅವರ ಹೋರಾಟ ನಮಗೆ ಆದರ್ಶವಾಗಲಿ ಎಂದರು.
ಖ್ಯಾತ ನೇತ್ರ ತಜ್ಞ ಡಾ ಭುಜಂಗಶೆಟ್ಟಿ ಅವರು ನಮಗೆಲ್ಲರಿಗೂ ಚಿರಪರಿಚಿತರಾಗಿದ್ದರು. ನಮ್ಮಲ್ಲಿ ಅನೇಕ ವೈದ್ಯರಿದ್ದಾರೆ. ಆದರೆ ಕೆಲವೇ ಕೆಲವರು ದಾಖಲೆಯ ಕೆಲಸ ಮಾಡಿದ್ದಾರೆ. ಡಾ. ಎಂ.ಸಿ. ಮೋದಿಯವರು ಕಣ್ಣಿನ ಶಸ್ತ್ರ ಚಿಕಿತ್ಸೆ ನೀಡುವ ಮೂಲಕ ದಾಖಲೆ ಮಾಡಿದಂತೆ ಡಾ. ಭುಜಂಗಶೆಟ್ಟಿ ಅವರು ದಾಖಲೆಯ ಶಸ್ತ್ರಚಿಕಿತ್ಸೆ ಮಾಡಿದ್ದರು. ತುಮಕೂರಿನಲ್ಲಿ ಸುಸಜ್ಜಿತ ಕಣ್ಣಿನ ಆಸ್ಪತ್ರೆ ತರೆದಿದ್ದು, ಅದು ಸಂಪೂರ್ಣ ಉಚಿತವಾಗಿದೆ. ಅವರು ನಮ್ಮನ್ನು ಅಕಾಲಿಕವಾಗಿ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.












Click it and Unblock the Notifications