ಹಿಜಾಬ್ ವಿವಾದ; ರಜೆ ಘೋಷಣೆ ಮಾಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ
ಬೆಂಗಳೂರು, ಫೆಬ್ರವರಿ 08; ಉಡುಪಿಯಲ್ಲಿ ಆರಂಭವಾದ ಹಿಜಾಬ್ ವಿವಾದ ಈಗ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ವ್ಯಾಪಿಸಿದೆ. ಹಿಜಾಬ್‌ಗೆ ವಿರುದ್ಧ ವಿದ್ಯಾರ್ಥಿಗಳ ಕೇಶರಿ ಶಾಲು ಅಭಿಯಾನ ಆರಂಭವಾಗಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಧಕ್ಕೆ ಆಗುವ ಆತಂಕ ಎದುರಾಗಿದೆ.
ಮಂಗಳವಾರ ಹಿಜಾಬ್ ವಿವಾದದ ಬಗ್ಗೆ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಪ್ರತಿಕ್ರಿಯೆ ನೀಡಿದರು. "ಕಾಲೇಜುಗಳಲ್ಲಿ ಹಿಜಾಬ್ ವಿವಾದ ವಿದ್ಯಾರ್ಥಿಗಳು, ಪೋಷಕರ ಮಧ್ಯೆ ಸಂಘರ್ಷದ ಹಂತ ತಲುಪಿರುವುದರಿಂದ ಪರಿಸ್ಥಿತಿ ನೋಡಿಕೊಂಡು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡುವ ಅಧಿಕಾರ ಆಯಾ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ" ಎಂದರು.
ಸ್ಥಳೀಯ ಪರಿಸ್ಥಿತಿಗೆ ತಕ್ಕಂತೆ ರಜೆ ಘೋಷಣೆ ಮಾಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದ್ದಾರೆ. ಮತ್ತೊಂದು ಕಡೆ ದೆಹಲಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಲಾಟೆ ನಡೆದ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

ಶಿವಮೊಗ್ಗದಲ್ಲಿ ನಿಷೇಧಾಜ್ಞೆ; ಮಂಗಳವಾರ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳ ಬಳಿಕ ಶಿವಮೊಗ್ಗ ನಗರದಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವ ಬಗ್ಗೆ ನಡೆಯುತ್ತಿರುವ ವಿವಾಧದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ದಿನಾಂಕ 8-02-2022 ಮತ್ತು 09-02-2022 ರಂದು 02 ದಿನಗಳ ಕಾಲ ಶಿವಮೊಗ್ಗ ನಗರದಲ್ಲಿ ಕಲಂ 144 CrPC ರೀತ್ಯಾ ನಿಷೇದಾಜ್ಞೆಯನ್ನು ಜಾರಿಗೊಳಿಸಿದ್ದು, ಸಾರ್ವಜನಿಕರ ಗಮನಕ್ಕೆ ತಂದಿರುತ್ತದೆ ಎಂದು ಶಿವಮೊಗ್ಗ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲಾ ಪದವಿ ಕಾಲೇಜುಗಳಿಗೆ ರಜೆ; ಕರ್ನಾಟಕ ಸರ್ಕಾರ ಫೆಬ್ರವರಿ 9ರಿಂದ 3 ದಿನ ರಾಜ್ಯದ ಎಲ್ಲಾ ಪದವಿ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಹಿಜಾಬ್ ವಿವಾದ ಪದವಿ ಕಾಲೇಜುಗಳಿಗೂ ಹಬ್ಬಬಾರದು ಎಂದು ರಜೆ ಘೋಷಣೆ ಮಾಡಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದು, "ರಾಜ್ಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಾಲೆ, ಕಾಲೇಜುಗಳ ಆಡಳಿತ ಮಂಡಳಿಗಳು ಹಾಗೂ ನಾಡಿನ ಸಮಸ್ತ ಜನತೆ ಶಾಂತಿ ಸೌಹಾರ್ದತೆ ಕಾಪಾಡುವಂತೆ ಮನವಿ ಮಾಡುತ್ತೇನೆ. ಮುಂದಿನ ಮೂರು ದಿನಗಳ ಅವಧಿಗೆ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸುವಂತೆ ಆದೇಶಿಸಲಾಗಿದೆ. ಸಂಬಂಧಿಸಿದ ಎಲ್ಲರೂ ಸಹಕರಿಸಲು ಕೋರಿದೆ" ಎಂದು ಹೇಳಿದ್ದಾರೆ.












Click it and Unblock the Notifications