ಬಾಬಾಬುಡನ್ ಗಿರಿಯಲ್ಲಿ ದತ್ತಮಾಲಾ ಅಭಿಯಾನ ಆರಂಭ
ಚಿಕ್ಕಮಗಳೂರು, ಅ. 20: ಹಿಂದೂ-ಮುಸಲ್ಮಾನರ ಭಾವೈಕ್ಯತಾ ಕೇಂದ್ರವಾಗಿರುವ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿಗೆ ತೆರಳಲು ದತ್ತಮಾಲಾ ಅಭಿಯಾನ ಆರಂಭಗೊಂಡಿದೆ. ನಗರದ ಕಾಮಧೇನು ಗಣಪತಿ ದೇಗುಲದಲ್ಲಿ ಶ್ರೀರಾಮಸೇನೆ ಆಯೋಜನೆಯಲ್ಲಿ ದತ್ತಮಾಲೆ ಧಾರಣೆ ಕಾರ್ಯಕ್ರಮ ನಡೆಯಿತು.
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಯೋಜಿಸಿರುವ 10ನೇ ವರ್ಷದ ದತ್ತಮಾಲಾ ಅಭಿಯಾನ ಇದಾಗಿದೆ. ಅಕ್ಟೋಬರ್ 19 ರಿಂದ 25 ರವರೆಗೆ ನಡೆಯಲಿರುವ ಈ ಅಭಿಯಾನಕ್ಕೆ ಜಿಲ್ಲಾ ಘಟಕ ಅಧ್ಯಕ್ಷ ಕಟ್ಟಿಮನೆ ಮಹೇಶ್ ಕುಮಾರ್ ಅವರು ಚಾಲನೆ ನೀಡಿದರು.

ನಾಗ ಸಾಧುಗಳು : ಈ ಬಾರಿಯ ದತ್ತಮಾಲಾ ಅಭಿಯಾನದಲ್ಲಿ ಉತ್ತರ ಭಾರತದ ಅಯೋಧ್ಯೆ ಸೇರಿದಂತೆ ಉತ್ತರ ಭಾರತದ ಹಲವೆಡೆಯಿಂದ 60ಕ್ಕೂ ಹೆಚ್ಚು ನಾಗಸಾಧುಗಳು ಭಾಗವಹಿಸಲಿದ್ದಾರೆ. ನಾಗಾ ಸಾಧುಗಳನ್ನು ಬಸವ ಮಂದಿರ ಹಾಗೂ ಕಲ್ಯಾಣ ನಗರದಲ್ಲಿ ನೆಲೆಸಲು ವ್ಯವಸ್ಥೆ ಮಾಡಲಾಗಿದೆ.
ಅಕ್ಟೋಬರ್ 25 ರಂದು ನಡೆಯುವ ಬೃಹತ್ ಶೋಭಾಯಾತ್ರೆಯಲ್ಲಿ ನಾಗಸಾಧುಗಳು ಭಾಗವಹಿಸಿ, ಅಂದೇ ದತ್ತಪೀಠದಲ್ಲಿ ಹೋಮ ಹವನ ನಡೆಸಲಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖಂಡ ರಂಜಿತ್ ಶೆಟ್ಟಿ ತಿಳಿಸಿದ್ದಾರೆ. ಇರುಮುಡಿ ಹೊತ್ತ ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಮಿಂದು ನಂತರ ದತ್ತಾತ್ರೇಯ ಪೀಠಕ್ಕೆ ತೆರಳಿ, ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ಭಕ್ತರ ಜಪ ತಪಕ್ಕೆ ಬೋಳರಾಮೇಶ್ವರ ದೇಗುಲದಲ್ಲಿ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications