DK Shivakumar: ಮುಡಾ, ವಾಲ್ಮೀಕಿ ಹಗರಣ ಮುಚ್ಚಲು ದರ್ಶನ್ ಫೋಟೋ ರಿಲೀಸ್: ಜೋಶಿ ಹೇಳಿಕೆಗೆ ಡಿಕೆಶಿ ವ್ಯಂಗ್ಯ
ಬೆಂಗಳೂರು ಸೆಪ್ಟೆಂಬರ್ 7: ಮುಡಾ ಹಾಗೂ ವಾಲ್ಮೀಕಿ ಹಗರಣ ಪ್ರಕರಣದಿಂದ ಜನರ ಗಮನ ಬೇರೆಡೆ ಸೆಳೆಯಲು ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಫೋಟೋ ವೈರಲ್ ಮಾಡಿದ್ದು ರಾಜ್ಯ ಸರ್ಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಕ್ಕೆ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಜೋಶಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಜೋಶಿ ಹೇಳಿಕೆಗೆ ಪ್ರತಿಕ್ರಿಸಿ, 'ದರ್ಶನ್, ಮುಡಾ ಆರೋಪದ ವಿಚಾರ ಬಿಡಿ. ಈಗ ಮಹದಾಯಿ ವಿಚಾರದಲ್ಲಿ ಏನು ತೊಂದರೆಯಾಗಿದೆ. ಮಹದಾಯಿ ಯೋಜನೆಗೆ ಅನುಮತಿ ಕೊಡಿಸ್ರಪ್ಪ' ಎಂದು ಸವಾಲು ಹಾಕಿದ್ದಾರೆ. 'ಗಣೇಶ ಚತುರ್ಥಿ ಹಬ್ಬದ ದಿನವೇ ವಿಘ್ನ ನಿವಾರಣೆ ಆಗಲಿ. ಮಹದಾಯಿ ಯೋಜನೆ ಜಾರಿ ಮಾಡಲು ದುಡ್ಡು ಕೊಡಿಸ್ರಪ್ಪ. ಇಲ್ಲಿಂದಲೇ ದೀರ್ಘದಂಡ ನಮಸ್ಕಾರ ಹಾಕುತ್ತೇನೆ' ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಜೋಶಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ವಿರೋಧ
ಮಾಧ್ಯಮ ಹಾಗೂ ಜನರ ಗಮನ ಬೇರೆಡೆ ಸೆಳೆದು ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ಸೇರಿದಂತೆ ತನ್ನ ಸಾಲು ಸಾಲು ಹಗರಣಗಳನ್ನು ಮರೆಮಾಚಲು ರಾಜ್ಯ ಸರ್ಕಾರವೇ ದರ್ಶನ್ ರಾಜಾತಿಥ್ಯದ ಫೋಟೋ ಹೊರಬಿಟ್ಟಿದೆ ಎಂಬ ಪ್ರಲ್ಹಾದ್ ಜೋಶಿ ಅವರ ಹೇಳಿಕೆಗೆ ಕಾಂಗ್ರೆಸ್ ಪಾಳೆಯದಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ದರ್ಶನ್ ಫೋಟೋಗಳನ್ನು ಹೊರಬಿಟ್ಟು ಸರ್ಕಾರವೇ ತನ್ನ ಹಗರಣಗಳನ್ನು ಮುಚ್ಚಿ ಹಾಕಲು ಯತ್ನಿಸಿದೆ ಎಂದು ಜೋಶಿ ಶುಕ್ರವಾರ ಆರೋಪ ಮಾಡಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ನಾಯಕರು ಮುಡಾ ಹಗರಣದಲ್ಲಿ ಏನಿದೆ ಮುಚ್ಚಿಡಲು? ಜೋಶಿಯವರು ಇಂತಹ ಹೇಳಿಕೆ ನೀಡುವ ಬದಲು ರಾಜ್ಯಕ್ಕೆ ಕೇಂದ್ರದಿಂದ ಏನು ಅನುಕೂಲ ಮಾಡಿಸಬಹುದು ಎಂದು ಯೋಚಿಸಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

ಪ್ರಿಯಾಂಕ್ ಖರ್ಗೆ ಕಿಡಿ
ವಿಷಯ ಡೈವರ್ಟ್ ಮಾಡೋದಾಗಿದ್ರೆ ನಿಮ್ಮ ನಾಯಕರ ಸಿಡಿನೇ ಇತ್ತಲ್ಲ? ಎಂದು ಪ್ರಶ್ನಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಸಿಡಿ ಬಿಡುಗಡೆ ಮಾಡಬಾರದು ಎಂದು ಇಂಜೆಕ್ಷನ್ ಅರ್ಡರ್ ತೆಗೆದುಕೊಂಡಿದ್ದಾರಲ್ಲಾ, ಯಾರು ಮಾಡಿಸಿದ್ದು ಅದನ್ನು? ಎಂದು ಕೇಳಿದ್ದಾರೆ.
ಅಲ್ಲದೆ, ಜೋಶಿ ರಾಜ್ಯದ ವಿಚಾರವಾಗಿ ಮಾತನಾಡಿದ್ದನ್ನು ನಾನು ಎಂದೂ ನೋಡಿಲ್ಲ. ಮಹದಾಯಿ ವಿಚಾರದಲ್ಲಿ ನಮಗೆ ಇನ್ನೂ ಅನುಮತಿಯೇ ಸಿಕ್ಕಿಲ್ಲ. ಆ ಬಗ್ಗೆ ಯಾವತ್ತಾದ್ರೂ ಕೇಂದ್ರ ಸಚಿವ ಜೋಶಿ ಮಾತನಾಡಿದ್ದಾರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಎಂ. ಬಿ ಪಾಟೀಲ್ ಪ್ರತಿಕ್ರಿಯೆ
ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಕೂಡ ಜೋಶಿ ಅವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಕೊಲೆ ಆರೋಪಿ ದರ್ಶನ್ ರಾಜಾತಿಥ್ಯ ಗಂಭೀರವಾದ ವಿಷಯ. ಅದಕ್ಕಾಗಿಯೇ ದರ್ಶನ್ ಅನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಮುಡಾ ಕೇಸ್ ಡೈವರ್ಟ್ ಮಾಡುವುದಕ್ಕೆ ಅದರಲ್ಲಿ ಏನಿದೆ. ದರ್ಶನ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಮ್ಮನೆ ಈ ರೀತಿ ಮಾತನಾಡುವುದು ಸರಿಯಲ್ಲ' ಎಂದರು.












Click it and Unblock the Notifications