ರಾಜ್ಯಕ್ಕೆ ಮೂರು ಡಿಸಿಎಂ ಹುದ್ದೆ: ಸಿಎಂ ಉತ್ತರಿಸುತ್ತಾರೆ ಎಂದ ಡಿ.ಕೆ ಶಿವಕುಮಾರ್
ಬೆಂಗಳೂರು, ಸೆಪ್ಟೆಂಬರ್ 18: ಸಚಿವ ಕೆ.ಎನ್.ರಾಜಣ್ಣ ಮೂರು ಡಿಸಿಎಂಗಳು ಅವಶ್ಯಕತೆ ಇದೆ ಎನ್ನುವ ಮಾತಿನ ವಿರುದ್ಧ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನನ್ನನ್ನು ಈ ಹುದ್ದೆಗೆ ನೇಮಕ ಮಾಡಿದ್ದು ಮುಖ್ಯಮಂತ್ರಿಗಳು. ಅವರೇ ಇದಕ್ಕೆ ಉತ್ತರ ನೀಡುತ್ತಾರೆ, ರಾಜಣ್ಣ ಅವರು ಏಕೆ ಈ ರೀತಿ ಹೇಳಿಕೆ ಕೊಟ್ಟರೊ ಗೊತ್ತಿಲ್ಲ. ನಾವೆಲ್ಲಾ ಮುಖ್ಯಮಂತ್ರಿಗಳ ಕೆಳಗೆ ಕೆಲಸ ಮಾಡುವವರು ಅವರನ್ನೇ ಕೇಳಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎನ್.ರಾಜಣ್ಣ ಅವರ ಬಳಿ ಮುಖ್ಯಮಂತ್ರಿಗಳು, ಹೈಕಮಾಂಡ್ ಉತ್ತರ ಕೇಳುತ್ತದೆ. ಹರಿಪ್ರಸಾದ್ ಅವರಿಗೆ ಹೈಕಮಾಂಡ್ ಪತ್ರ ಬರೆದಿದೆ. ನಾನು ಯಾರಿಗೆ ಉತ್ತರ ಕೊಡಬೇಕೋ ಅವರಿಗೆ ಮಾತ್ರ ಕೊಡುತ್ತೇನೆ. ನಾನು ಯಾರಿಗೆ ಉತ್ತರ ಕೇಳಬೇಕೋ ಅವರ ಬಳಿ ಕೇಳುತ್ತೇನೆ, ಯಾವುದೇ ಮುಲಾಜಿಲ್ಲ ನನಗೆ ಎಂದು ಉತ್ತರಿಸಿದರು.

ಹೈಕಮಾಂಡ್ ಒಂದೇ ಡಿಸಿಎಂ ಎಂದು ಹೇಳಿದ ನಂತರವೂ ಈ ಬೆಳವಣಿಗೆ ಏಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಎರಡು ದಿನಗಳಿಂದ ಹೈದರಾಬಾದ್‌ನಲ್ಲಿ ಎಐಸಿಸಿ ಸಭೆಯಲ್ಲಿ ಇದ್ದೆ, ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು, ಈಗ ತಿಳಿದುಕೊಂಡು ಹೇಳುವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕಾರಣವಿಲ್ಲ
ಬಿ.ಕೆ.ಹರಿಪ್ರಸಾದ್ ಅವರ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಅವರ ಬಣ ಮೌನ ತಾಳಿದ ಕಾರಣ ಡಿಸಿಎಂ ವಿವಾದ ಎದ್ದಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, ನಮ್ಮ ಪಕ್ಷದಲ್ಲಿ ಯಾವುದೇ ಬಣವಿಲ್ಲ, ನಿಮ್ಮ ಬಳಿ ಇರಬೇಕು. ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಯಾವುದೇ ಬಣಕ್ಕೆ ನಾನು ಬೆಂಬಲ ಕೊಟ್ಟಿಲ್ಲ. ನನಗೆ ಬಣದ ಅವಶ್ಯಕತೆ ಇಲ್ಲ. ಎಸ್.ಎಂ.ಕೃಷ್ಣ ಅವರು, ಬಂಗಾರಪ್ಪ ಅವರ ಕಾಲದಲ್ಲಿ ಬಣ ಮಾಡಬಹುದಿತ್ತು, ನನ್ನದು ಕಾಂಗ್ರೆಸ್ ಬಣ. ಬಣದ ಬಗ್ಗೆ ನನ್ನ ಬಳಿ ಪ್ರಶ್ನೆ ಕೇಳಬೇಡಿ ಎಂದು ಸಿಡಿಮಿಡಿಗೊಂಡರು.
ಕೆ.ಎನ್ ರಾಜಣ್ಣ ಹೇಳಿದ್ದೇನು..?
ಲಿಂಗಾಯತ, ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡುವಂತೆ ಹೈಕಮಾಂಡ್‌ಗೆ ಪತ್ರ ಬರೆಯಲು ನಿರ್ಧರಿಸಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಈ ಹಿಂದೆ ವಿಧಾನಸಭೆಯಲ್ಲಿ ಭರ್ಜರಿ ಜಯಭೇರಿ ಭಾರಿಸಿದ್ದೆವು, ಈಗ ಲೋಕಸಭಾ ಚುನಾವಣೆಗೂ ಹೆಚ್ಚಿನ ಸ್ಥಾನಗಳನ್ನ ಗೆಲ್ಲಬೇಕಾದರೆ ಮತ್ತೆ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಪಕ್ಷಕ್ಕೆ ಲಾಭವಾಗಲಿದೆ ಎಂದು ಕೆ.ಎನ್ ರಾಜಣ್ಣ ಹೇಳಿದ್ದರು.












Click it and Unblock the Notifications