ಡಿ.ಕೆ.ಶಿವಕುಮಾರ್ ಸಿಎಂ ಆಗುವ ಸುಳಿವು ಕೊಟ್ಟ ರಾಮಲಿಂಗಾರೆಡ್ಡಿ
ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ವಿಚಾರ ಸದ್ದು ಮಾಡುತ್ತಿದ್ದರೆ, ಮುಂದೆ ಸಿಎಂ ಆಗುವುದು ಡಿ.ಕೆ.ಶಿವಕುಮಾರ್ ಅವರೇ ಎಂದು ಹೇಳಲಾಗುತ್ತಿದೆ. ಇದೀಗ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೇರುವುದು ಯಾವಾಗ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ಸಚಿವ ರಾಮಲಿಂಗಾರೆಡ್ಡಿ ಅವರೇ ಉತ್ತರ ನೀಡಿದ್ದಾರೆ. ಸದ್ಯ ಈ ವಿಚಾರ ಕಾಂಗ್ರೆಸ್‌ನಲ್ಲೇ ಸಂಚಲನ ಸೃಷ್ಟಿಸಿದೆ.
ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಹೇಳಿಕೆಯ ವಿಚಾರವಾಗಿ ರಾಮನಗರದಲ್ಲಿ ಮಾತನಾಡಿರುವ ಸಚಿವ ರಾಮಲಿಂಗಾರೆಡ್ಡಿ, ಬಾಲಕೃಷ್ಣ ಅವರು ಸಿಎಂ ಯಾವಾಗ ಬದಲಾವಣೆ ಆಗುತ್ತಾರೆ ಎಂದು ಹೇಳಿಲ್ಲ. ಅವರ ಪ್ರಕಾರ ಮುಂದಿನ ಬಾರಿ ಅಂದರೆ 2028ಕ್ಕೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬಹುದು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್ ಈ ಬಗ್ಗೆ ಯಾರೂ ಮಾತನಾಡಬೇಡಿ ಎಂದು ಹೇಳಿದೆ. ಒಂದು ವೇಳೆ ಮಾತನಾಡುವ ಸಂದರ್ಭ ಬಂದರೆ ಸಿಕ್ರೇಟ್ ಆಗಿ ಮಾತನಾಡಿಕೊಳ್ಳುತ್ತೇವೆ ಎಂದೂ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಆದರೆ, ಮುಂದಿನ ಬಾರಿ ಡಿ.ಕೆ.ಶಿವಕುಮಾರ್ ಅವರೇ ಸಿಎಂ ಆಗುತ್ತಾರೆ ಎಂದು ರಾಮಲಿಂಗಾ ರೆಡ್ಡಿ ಅವರ ಹೇಳಿಕೆ ಗಮನ ಸೆಳೆದಿದೆ.
ಬಾಲಕೃಷ್ಣ ಅವರು ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಅವರ ಗೆಲುವಿನ ಸಮಾವೇಶದಲ್ಲಿ ಮಾತನಾಡುತ್ತಾ ಡಿ.ಕೆ.ಶಿವಕುಮಾರ್ ಅವರು ಮುಂದಿನ ಸಿಎಂ ಎಂಬರ್ಥದಲ್ಲಿ ಮಾತನಾಡಿದ್ದರು. ಇದು ಕಾಂಗ್ರೆಸ್‌ನಲ್ಲೇ ಸಂಚಲನ ಮೂಡಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಾಲಕೃಷ್ಣ ಅವರು, ಚನ್ನಪಟ್ಟಣದ ಗೆಲುವಿನ ಬಗ್ಗೆ ನಾನು ಹೇಳಿದ್ದು ಎಂದಿದ್ದಾರೆ.

ಚನ್ನಪಟ್ಟಣದಲ್ಲಿ ಜನ ಕಾಂಗ್ರೆಸ್‌ನ ಗೌರವ ಉಳಿಸಿದ್ದು, ಅವರು ಕೊಟ್ಟ ಶಕ್ತಿ ಡಿಕೆಶಿ ಅವರಿಗೆ ಮುಂದೆ ಅಧಿಕಾರದ ಚುಕ್ಕಾಣಿ ಹಿಡಿಯಲು ನೆರವಾಗುತ್ತೆ ಎಂಬರ್ಥದಲ್ಲಿ ಹೇಳಿದ್ದೇನೆ. ನಾನು ಡಿಕೆಶಿ ಅವರು ನಾಳೆಯೇ ಸಿಎಂ ಆಗ್ತಾರೆ ಎಂದು ಹೇಳಿದ್ದೀನಾ? ನಾವು ಯಾರ ಬೆಂಬಲಿಗರೂ ಅಲ್ಲ, ಹೈಕಮಾಂಡ್ ಬೆಂಬಲಿಗರು ಎಂದು ಬಾಲಕೃಷ್ಣ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಕಾಡಾನೆ ಹಾವಳಿಗೆ ಕ್ರಮ: ಜಲಜೀವನ್ ಮಿಷನ್ ಯೋಜನೆಯ ಕೆಲಸ ಕಳಪೆಯಾಗಿದ್ದು, ಈ ಬಗ್ಗೆ ನಾನು ಕೂಡ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಕಳಪೆ ಪೈಪ್ ಅಳವಡಿಸಿ ಕೆಲಸಗಳನ್ನ ಮಾಡಿದ್ದಾರೆ. ಈ ಬಗ್ಗೆ ಪ್ರಿಯಾಂಕಾ ಖರ್ಗೆ ಕೂಡ ಸಭೆ ನಡೆಸಿದ್ದಾರೆ ಎಂದಿದ್ದಾರೆ. ರಾಮನಗರದಲ್ಲಿ ಕಾಡಾನೆ ಹಾವಳಿ ಹೆಚ್ಚುತ್ತಿರುವ ವಿಚಾರ ಸಂಬಂಧ, ಜಿಲ್ಲೆಯಲ್ಲಿ ಕೆಲವು ಐಲ್ಯಾಂಡ್ ರೀತಿಯ ಪ್ರದೇಶಗಳಿವೆ. ಆದ್ರೆ ರೈತರು ಬೆಳೆದ ಸಾಕಷ್ಟು ಬೆಳಗಳನ್ನ ಕಾಡಾನೆಗಳು ನಾಶ ಮಾಡಿ ನಷ್ಟ ಉಂಟು ಮಾಡಿವೆ. ಹಾಗಾಗಿ ಐಲ್ಯಾಂಡ್ ಪ್ರದೇಶಗಳಿಗೆ ಪೆನ್ಸಿಂಗ್ ಹಾಕುತ್ತಿದ್ದೇವೆ ಎಂದಿದ್ದಾರೆ.
ಕೆಲ ಅರಣ್ಯ ಪ್ರದೇಶಕ್ಕೆ ಇನ್ನೂ ಕೂಡ ರೈಲ್ವೆ ಬ್ಯಾರಿಕೇಟ್ ಅಳವಡಿಸಬೇಕಾಗಿದೆ. ಸರ್ಕಾರದಿಂದ ಕೂಡ ಹಣ ಬಿಡುಗಡೆಯಾಗಿದ್ದು, ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ಸದ್ಯ 40 ಕೋಟಿ ರೂಪಾಯಿ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.












Click it and Unblock the Notifications