ಮನೆ ತಿಜೋರಿಯಲ್ಲಿದ್ದ ₹2000 ನೋಟು ಈಗ ಯಾರಿಗೂ ಬೇಡ!
ಬೆಂಗಳೂರು: ಭಾರತದಲ್ಲಿ ಚಲಾವಣೆಯಲ್ಲಿದ್ದ 2000 ರೂ. ಮುಖಬೆಲೆ ನೋಟ್ ಚಲಾವಣೆ ಸ್ಥಗಿತಗೊಳಿಸಿರುವ ಆರ್‌ಬಿಐ, 2000 ರೂ. ನೋಟುಗಳನ್ನ ಬ್ಯಾಂಕ್‌ಗಳಿಗೆ ಹಿಂದಿರುಗಿಸಲು ತಿಳಿಸಿದೆ. ಆದರೆ ಜನ ಮಾಡ್ತಿರೋದೆ ಬೇರೆ. ಬ್ಯಾಂಕ್‌ಗೆ 2000 ರೂ. ನೋಟು ಕೊಡುವ ಬದಲು ಬೇರೆಯದ್ದೇ ಐಡಿಯಾ ಮಾಡಿ ತಲೆ ಓಡಿಸಿದ್ದಾರೆ. ಅರೆರೆ ಜನ ಮಾಡ್ತಿರೋದು ಏನು ಅಂದ್ರಾ? ಮುಂದೆ ಓದಿ.
ಹೌದು, 2016ರಲ್ಲಿ 500, 1000ರ ನೋಟ್ ಅಮಾನ್ಯ ಅಥವಾ ನೋಟ್ ಬ್ಯಾನ್ (Note Ban) ಬಳಿಕ 2000 ರೂ. ಮುಖಬೆಲೆ ನೋಟ್ ಚಲಾವಣೆಗೆ ಬಂತು. ಆದ್ರೆ ಆರ್‌ಬಿಐ ಭಾರತದಲ್ಲಿ ಚಲಾವಣೆಯಲ್ಲಿದ್ದ 2000 ರೂ. ನೋಟ್ ಚಲಾವಣೆ ಸ್ಥಗಿತಗೊಳಿಸಿದೆ (2000 Note). ವಾಪಸ್ ಪಡೆಯಲು ಆರ್‌ಬಿಐ ಬ್ಯಾಂಕ್‌ಗಳಿಗೆ ಆದೇಶ ನೀಡಿದೆ. ಈಗ ಜನ 2000 ರೂ. ನೋಟ್‌ಗಳನ್ನ ಬ್ಯಾಂಕ್‌ಗೆ ವಾಪಸ್ ಮಾಡುವ ಬದಲು ಝೊಮ್ಯಾಟೋ ಮತ್ತು ಪೆಟ್ರೋಲ್ ಬಂಕ್‌ಗಳಿಗೆ ನೀಡುತ್ತಿದ್ದಾರಂತೆ. ಈ ಮೂಲಕ ಮನೆ ತಿಜೋರಿಯಲ್ಲಿದ್ದ ₹2000 ನೋಟು ಈಗ ಹೊರ ಬರ್ತಿದೆ! ಆದರೆ ಇದರಿಂದಲೇ ದೊಡ್ಡ ಸಮಸ್ಯೆ ಕೂಡ ಎದುರಾಗಿದೆ.

ಸಂಕಷ್ಟ ಹೇಳಿಕೊಂಡ ಝೊಮ್ಯಾಟೋ!
2000 ರೂ. ನೋಟುಗಳ ಚಲಾವಣೆ ರದ್ದು ಮಾಡೋದಾಗಿ ಆರ್‌ಬಿಐ ಆದೇಶ ಹೊರಡಿಸಿ ಇನ್ನೂ 3 ದಿನವೂ ಕಳೆದಿಲ್ಲ, ಅದಾಗಲೇ ಜನ ತಮ್ಮ ಬಳಿ ಇರುವ 2000 ರೂ. ನೋಟುಗಳನ್ನ ಖರ್ಚು ಮಾಡಲು ಮುಗಿಬಿದ್ದು ಮುಂದೆ ಬರ್ತಿದ್ದಾರೆ. ಅದರಲ್ಲೂ ಫುಡ್ ಡೆಲಿವರಿ ಕಂಪನಿ ಝೊಮ್ಯಾಟೋಗೆ ಇದೇ ತಲೆನೋವಾಗಿದೆ ಅಂತೆ. ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಳ್ಳುತ್ತಿರುವ ಶೇ.72ರಷ್ಟು ಗ್ರಾಹಕರು ಬರೀ 2000ದ ನೋಟುಗಳನ್ನೇ ನೀಡುತ್ತಿದ್ದಾರಂತೆ. ಹೀಗಾಗಿ ಡೆಲಿವರಿ ಬಾಯ್ಸ್ ಕೂಡ ಪರದಾಡುತ್ತಿದ್ದಾರೆ.
ಚಿಲ್ಲರೆಗೆ ಏನ್ ಮಾಡೋದು ಸ್ವಾಮಿ?
ಹೌದಲ್ವಾ.. ಕೆಲವರು ತಾವು ಇಷ್ಟು ದಿನ ಗುಡ್ಡೆ ಹಾಕಿದ್ದ 2000 ರೂ. ನೋಟುಗಳನ್ನ ಖರ್ಚು ಮಾಡೋಕೆ ದಿಢೀರ್ ಮುಂದೆ ಬಂದರೆ ಚಿಲ್ಲರೆ ಎಲ್ಲಿಂದ ತರಬೇಕು? ಇದೇ ಪರಿಸ್ಥಿತಿಯಲ್ಲಿ ಝೊಮ್ಯಾಟೋ ಬಾಯ್ಸ್ ಕೂಡ ಪರದಾಡುತ್ತಿದ್ದಾರೆ. ಜನ 200-300 ರೂಪಾಯಿ ಆರ್ಡರ್‌ಗೂ 2 ಸಾವಿರ ರೂಪಾಯಿ ನೋಟು ಕೊಡುತ್ತಿರುವ ಕಾರಣ ಝೊಮ್ಯಾಟೋ ಫುಡ್ ಡೆಲಿವರಿ ಮಾಡುವವರು ಕಂಗಾಲಾಗಿದ್ದು, ಚಿಲ್ಲರೆ ಇಲ್ಲ ಅಂದ್ರೆ ಜಗಳ ಪಕ್ಕಾ ಮತ್ತು ಕಂಪ್ಲೇಂಟ್ ಮಾಡ್ತಾರೆ ಅನ್ನೋ ಭಯ ಕೂಡ ಅವರನ್ನ ಕಾಡುತ್ತಿದೆ.
()since friday, 72% of our cash on delivery orders were paid in ₹2000 notes pic.twitter.com/jO6a4F2iI7
— zomato (@zomato) May 22, 2023
ಪೆಟ್ರೋಲ್ ಬಂಕ್‌ಗಳಲ್ಲೂ ಇದೇ ಗೋಳು!
ಝೊಮ್ಯಾಟೋ ಮಾತ್ರವಲ್ಲ ಪೆಟ್ರೋಲ್ ಬಂಕ್‌ನಲ್ಲೂ 2,000 ಮುಖಬೆಲೆ ನೋಟುಗಳದ್ದೇ ಹವಾ ಅಂತೆ. ಈ ರೀತಿ ಗ್ರಾಹಕರು ಬರೀ 2,000 ಮುಖಬೆಲೆ ನೋಟುಗಳನ್ನೇ ಕೊಡುತ್ತಿದ್ದು ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನೂ ರೊಚ್ಚಿಗೆಬ್ಬಿಸಿದ್ದಾರೆ. ಚಿಲ್ಲರೆಗೆ ಬೆಂಗಳೂರು ಸೇರಿ ದೇಶದ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ಕಿರಿಕ್ ಜೋರಿದೆ. ಮೊದಲಿನಿಂದಲೂ ಚಿಲ್ಲರೆ ಸಮಸ್ಯೆಯಲ್ಲಿ ಬಳಲಿ ಬೆಂಡಾಗಿದ್ದ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಇದೀಗ 2,000 ರೂಪಾಯಿ ನೋಟ್‌ಗಳು ಕೂಡ ಸಮಸ್ಯೆ ತಂದೊಡ್ಡಿವೆ.

4 ತಿಂಗಳು ಅವಕಾಶ ನೀಡಿದ RBI!
2016ರಲ್ಲಿ ಘೋಷಣೆ ಮಾಡಿದಂತೆ ದಿಢೀರ್ ನೋಟ್ ಬ್ಯಾನ್ ಮಾಡುತ್ತಿಲ್ಲ ಆರ್‌ಬಿಐ. ಈಗ ಜನರಿಗೆ ಅನುಕೂಲ ಆಗಲಿ ಎಂದು ಬರೋಬ್ಬರಿ 4 ತಿಂಗಳ ಅವಕಾಶ ಕಲ್ಪಿಸಿದೆ. ನೀವು ನಿಮ್ಮ ಬಳಿ ಇರುವ 2000 ಮುಖಬೆಲೆ ನೋಟ್ ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಅವಕಾಶವಿದ್ದು, ಅಕ್ಟೋಬರ್ 1ರಿಂದ ನೋಟ್ ಚಲಾವಣೆ ಸಂಪೂರ್ಣ ಬ್ಯಾನ್ ಮಾಡಲಾಗುವುದು ಎಂದು ಆರ್‌ಬಿಐ ಹೇಳಿದೆ. ಹೀಗಾಗಿ ಟೆನ್ಷನ್ ಮಾಡಿಕೊಳ್ಳದೆ ನಿಮ್ಮ ಹತ್ತಿರ ಇರುವ 2000 ರೂ. ಮುಖಬೆಲೆ ನೋಟ್‌ಗಳನ್ನ ಎಕ್ಸ್‌ಚೇಂಜ್ ಮಾಡಿಕೊಳ್ಳಿ.
ಒಟ್ನಲ್ಲಿ 2000 ರೂ. ನೋಟ್‌ಗಳನ್ನ ಹಿಂಪಡೆಯಲು ಆರ್‌ಬಿಐ ಆದೇಶ ನೀಡಿದ್ದೇ ತಡ, ಮನೆ ತಿಜೋರಿಯಲ್ಲಿ ಭದ್ರವಾಗಿದ್ದ ₹2000 ನೋಟುಗಳು ನದಿ ನೀರಿನಂತೆ ಹರಿದು ಹೊರ ಬರುತ್ತಿವೆ. ಆದರೆ ಇದರಿಂದ ಪೆಟ್ರೋಲ್ ಬಂಕ್ ಸೇರಿದಂತೆ ಹಲವು ಕಡೆ ಚಿಲ್ಲರೆಗೆ ಸಮಸ್ಯೆ ಎದುರಾಗಿದೆ. ಜನ ಕೂಡ ತಮ್ಮ ಬಳಿ ಇರುವ ನೋಟ್‌ನ ಮೊದಲು ಎಕ್ಸ್‌ಚೇಂಜ್ ಮಾಡಬೇಕು ಅಂತಾ ಮುಗಿಬೀಳುತ್ತಿರುವುದು ಚಿಲ್ಲರೆ ಸಮಸ್ಯೆ ದುಪ್ಪಟ್ಟು ಮಾಡಿದೆ.












Click it and Unblock the Notifications