Crop Insurance: ಧಾರವಾಡ ರೈತರಿಗೆ ಸಿಹಿ ಸುದ್ದಿ ನೀಡಿದ ಜಿಲ್ಲಾಡಳಿತ
ಧಾರವಾಡ, ಡಿಸೆಂಬರ್ 05: ಧಾರವಾಡ ಜಿಲ್ಲೆ ವ್ಯಾಪ್ತಿಯ ರೈತರಿಗೆ ಖಷಿ ಸುದ್ದಿಯೊಂದು ಲಭಿಸಿದೆ. ವಿವಿಧ ಬೆಳೆಗಳಡಿ ಹೆಸರು ನೋಂದಾಯಿಸಿಕೊಂಡ ರೈತರಿಗೆ ಮಧ್ಯಂತರ ಬೆಳೆ ವಿಮೆ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆ ವ್ಯಾಪ್ತಿಯ 63,566 ಜನ ರೈತರಿಗೆ 50.298 ಕೋಟಿ ರೂ ಗಳ ಮಧ್ಯಂತರ ವಿಮೆ ಮಂಜೂರಾಗಿದೆ. ಯಾವ ಯಾವ ಬೆಳೆಗಳಿಗೆ ಈ ವಿಮೆ ಹಣ ಸಿಗಲಿದೆ ಎಂಬ ಪೂರ್ಣ ಮಾಹಿತಿ ಇಲ್ಲಿದೆ. 2023 ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಧಾರವಾಡ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗಿತ್ತು.

ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ, ಕೆಂಪು ಮೆಣಸಿನಕಾಯಿ ಮತ್ತು ಆಲೂಗಡ್ಡೆ ಬೆಳೆಗಳಡಿ ನೊಂದಾಯಿಕೊಂಡ ರೈತರಿಗೆ ಮಧ್ಯಂತರ ವಿಮೆ ಜಮಾವಣೆ ಆರಂಭವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರೈತರಿಗೆ ಜಮೆ ಆದ ವಿಮೆ ಮಾಹಿತಿ
ಅಳ್ನಾವರ ತಾಲ್ಲೂಕಿನ 3052 ಜನ ರೈತರಿಗೆ 1.82 ಕೋಟಿ ರೂಪಾಯಿ, ಅಣ್ಣಿಗೇರಿ ತಾಲ್ಲೂಕಿನ 6044 ಜನ ರೈತರಿಗೆ 6.45 ಕೋಟಿ ರೂ ಗಳ, ಧಾರವಾಡ 9978À ಜನ ರೈತರಿಗೆ 6.575 ಕೋಟಿ ರೂಪಾಯಿ, ಹುಬ್ಬಳ್ಳಿ ತಾಲ್ಲೂಕಿನ 9472 ಜನ ರೈತರಿಗೆ 9.12 ಕೋಟಿ ರೂಪಾಯಿ.
ಹುಬ್ಬಳ್ಳಿ ನಗರ ತಾಲ್ಲೂಕಿನ 301 ಜನ ರೈತರಿಗೆ 0.365 ಕೋಟಿ ರೂಪಾಯಿ, ಕಲಘಟಗಿ ತಾಲ್ಲೂಕಿನ 15248 ಜನ ರೈತರಿಗೆ 9.731 ಕೋಟಿ ರೂಪಾಯಿ ಮತ್ತು ನವಲಗುಂದ ತಾಲ್ಲೂಕಿನ 5286 ಜನ ರೈತರಿಗೆ 5.282 ಕೋಟಿ ರೂಪಾಯಿ ಮಧ್ಯಂತರ ವಿಮಾ ಪರಿಹಾರ ಜಮಾವಣೆ ಆಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1,11,057 ರೈತರು ನೋಂದಣಿ
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ. ನದಿಗಳು ಬತ್ತಿ ಹೋಗಿವೆ. ಎಲ್ಲೆಲ್ಲೂ ಬರ ಪರಿಸ್ಥಿತಿ ನಿರ್ಮಾಣವಾದ ಪ್ರಯುಕ್ತ ಬೆಳೆ ವಿಮೆ ಯೋಜನೆಯಡಿ ಈ ರೀತಿಯ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಮಧ್ಯಂತರ ವಿಮೆ ಪರಿಹಾರ ಪಡೆಯಲು ಅವಕಾಶ ಇರುತ್ತದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಸಕಾಲಿಕ ಕ್ರಮ ಕೈಗೊಂಡ ನಿಮಿತ್ಯ ಜಿಲ್ಲೆಯ 63566 ಜನ ರೈತರಿಗೆ 50.298 ಕೋಟಿ ರೂ ಗಳ ಮಧ್ಯಂತರ ಬೆಳೆ ವಿಮೆ ಮಂಜೂರಾಗಿದೆ. ವಿಮೆಗೊಳಪಟ್ಟ 56995 ಹೆಕ್ಟೇರ ಪ್ರದೇಶಕ್ಕೆ ವಿಮೆ ಪರಿಹಾರ ದೊರೆಯಲಿದೆ ಎಂದು ಅವರು ಹೇಳಿದರು.
ಧಾರವಾಡ ಜಿಲ್ಲೆಯ 1,11,057 ಜನ ರೈತರು ಈ ಯೋಜನೆಯಡಿ ವಿವಿಧ ಬೆಳೆಗಳಿಗೆ ನೋಂದಾವಣೆ ಮಾಡಿಕೊಂಡಿದ್ದಾರೆ. ಒಟ್ಟು 1,05,065 ಹೆಕ್ಟೇರ್ ನಷ್ಟು ಬೆಳೆ ಪ್ರದೇಶ ವಿಮೆ ಯೋಜನೆಗೆ ಒಳಪಟ್ಟಿತ್ತು. ಪ್ರಕೃತಿ ವಿಕೋಪಗಳಿಂದ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ, ಆರ್ಥಿಕ ಬೆಂಬಲ ಮತ್ತು ಕೃಷಿ ಆದಾಯ ಸ್ಥಿರವಾಗಿರುವಂತೆ ಮಾಡಲು ನೆರವಾಗುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.












Click it and Unblock the Notifications