ರಾಜಕೀಯಕ್ಕೆ ಗಡಿ ಸಮಸ್ಯೆ ಸೃಷ್ಟಿ, ವಿಶ್ವ ಕನ್ನಡ ಸಮ್ಮೇಳನ ಶೀಘ್ರ: CM
ಬೆಳಗಾವಿ, ಡಿಸೆಂಬರ್ 27: ರಾಜಕೀಯ ಕಾರಣಕ್ಕಾಗಿ ಮಹಾರಾಷ್ಟ್ರದಲ್ಲಿ ಗಡಿ ಸಮಸ್ಯೆ ಸೃಷ್ಟಿ ಮಾಡಲಾಗುತ್ತಿದೆ. ಕರ್ನಾಟಕ ಎಂದೂ ಗಡಿ ಸಮಸ್ಯೆ ಸೃಷ್ಟಿಸಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳಗಾವಿ ಮಂಗಳವಾರ ಕನ್ನಡ ಭವನ ಕ್ಷೇಮಾಭಿವೃದ್ಧಿ ಸಂಘದ 'ಕನ್ನಡ ಭವನ' ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿ ಭಾಗದಲ್ಲಿ ಈ ಹಿಂದೆ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿದೆ. ಆದಷ್ಟು ಶೀಘ್ರವೇ ಜಿಲ್ಲೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲಾಗುವುದು ಎಂದರು.
ಕನ್ನಡದಲ್ಲಿ ಪ್ರಾಮಾಣಿಕತೆ, ಒಳ್ಳೆಯತನ ಇದೆ. ಕನ್ನಡದ ಸಾಕ್ಷಿ ಪ್ರಜ್ಞೆ ಮಾನವೀಯತೆಯಿಂದ ಕೂಡಿರುವಂಥದ್ದು. ಕನ್ನಡದ ಪುರಂದರದಾಸರು, ಅಲ್ಲಮಪ್ರಭು, ಬಸವಣ್ಣ, ಅವರಿಂದ ಹರಿದುಬರುವ ಜ್ಞಾನದ ಭಂಡಾರ ಕನ್ನಡಿಗರನ್ನು ಬೆಳೆದಿದೆ. ಹಿಂದಿನವರು ಇದನ್ನು ನಮಗೆ ಕೊಟ್ಟಿದ್ದಾರೆ. ನಮ್ಮ ಕರ್ತವ್ಯ ಇದನ್ನು ಇನ್ನಷ್ಟು ಉತ್ಕೃಷ್ಟಗೊಳಿಸಿ ಬಿಟ್ಟುಕೊಡಬೇಕು. ಅದ್ಭುತ ರಂಗಮಂದಿರವನ್ನು ನಿರ್ಮಿಸಲಾಗಿದೆ.

ಗಡಿ ಭಾಗದ ಅಭಿವೃದ್ಧಿಗೆ 100 ಕೋಟಿ ರೂ.
ಗಡಿ ಭಾಗದ ಶಾಲೆಗಳ ಅಭಿವೃದ್ಧಿ ಬಗ್ಗೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು. ಗಡಿಯಾಚೆಗಿನ ಕನ್ನಡ ಶಾಲೆಗಳ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸಲಾಗುವುದು. ಈಗಾಗಲೇ 100 ಕೋಟಿ ರೂ.ಗಳನ್ನು ಗಡಿ ಭಾಗದ ಅಭಿವೃದ್ಧಿಗೆ ನೀಡಲಾಗಿದೆ. ಕೆಲವೇ ದಿನಗಲ್ಲಿ ಗಡಿ ಭಾಗದಲ್ಲಿ ಏನಾಗಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸೂಚಿಸಿದರೆ ಅದನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ರಾಜಕೀಯವಾಗಿ ಗಡಿಯಾಚೆ ಸಮಸ್ಯೆ ಸೃಷ್ಟಿ
ಗಡಿಯಾಚೆ ಇತ್ಯರ್ಥವಾಗದ ವಿಚಾರದಲ್ಲಿ ಸಮಸ್ಯೆ ಉಂಟಾಗಿದೆ. ರಾಜಕೀಯವಾಗಿ ಗಡಿಯಾಚೆ ಸಮಸ್ಯೆ ಪ್ರಾರಂಭಿಸಿದ್ದಾರೆ. ಕರ್ನಾಟಕದಲ್ಲಿ ಯಾವತ್ತೂ ಹಾಗೆ ಮಾಡಿಲ್ಲ. ಕನ್ನಡಕ್ಕೆ ಗಟ್ಟಿಯಾಗಿ ಎದ್ದು ನಿಲುವುದು ಕನ್ನಡಿಗರಿಗೆ ರಕ್ಷಣೆ ಸದಾ ಕಾಲ ಮಾಡಿಕೊಂಡು ಬಂದಿದ್ದೇವೆ. ಯಾರೂ ಅರ್ಜಿ ಕೊಟ್ಟು ಹುಟ್ಟಲು ಸಾಧ್ಯವಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದವರು ಕನ್ನಡಿಗರೇ. ಇವು ಕಟು ಸತ್ಯ. ಸತ್ಯದ ಮಾರ್ಗ ಅನುಸರಿಸಿದಾಗ ಸ್ವರ್ಗದ ದರ್ಶನವಾಗುತ್ತದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವುದನ್ನು ಅಕ್ಷರಶಃ ಪಾಲನೆ ಮಾಡಬೇಕು ಎಂದು ತಿಳಿಸಿದರು.

ಅಂತರ್ಗತ ಶಕ್ತಿ ಬಳಸಿದರೆ ನಾವು ಬೆಳಯುತ್ತೇವೆ
ಕನ್ನಡಕ್ಕೆ ಅಂತರ್ಗತ ಶಕ್ತಿ ಇದ್ದು, ದಿನನಿತ್ಯ ಬಳಕೆ ಮಾಡಿದರೆ ಅದು ಉಳಿಯುತ್ತದೆ. ಕನ್ನಡವನ್ನು ಅಳಿಸಲು ಈ ಭೂಮಿಯ ಮೇಲಿನ ಯಾವುದೇ ಶಕ್ತಿಗೂ ಇಲ್ಲ. ಹಿನ್ನಡೆಯಾದರೆ ಅದು ನಮ್ಮಿಂದಾಗಬೇಕು, ಕನ್ನಡ ಭಾಷೆಯ ಶಕ್ತಿ ಬಳಕೆ ಮಾಡಿದರೆ ಕನ್ನಡವೂ ಬೆಳೆದು ನಾವೂ ಬೆಳೆಯುತ್ತೇವೆ. ಕನ್ನಡ ಭಾಷೆ ಗೆ ಆತಂಕವಿಲ್ಲ. ಕನ್ನಡ ಶ್ರೀಮಂತ ಭಾಷೆಯಾಗಿದ್ದು ಬಳಸಿದಷ್ಟೂ ನಮ್ಮನ್ನು ಶಕ್ತಿ ಶಾಲಿಯಾಗಿಸುತ್ತದೆ. ಸಕಾರಾತ್ಮಕ ವಾಗಿ ಮುಂದುವರೆದಾಗ ನಮಗೆ, ಕನ್ನಡಕ್ಕೆ ಉತ್ತಮ ಭವಿಷ್ಯವಿದೆ. ಸಾಧನೆ ಕನ್ನಡದಿಂದ ಇದೆ ಎಂದು ಮರೆಯಬೇಡಿ ಎಂದು ಸಲಹೆ ನೀಡಿದರು.
ಈ ಹಿಂದೆ ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಶೀಘ್ರದಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಲಾಗುವುದು. ರಂಗಮಂದಿರದ ಬಾಕಿಯಿರುವ ಕೆಲಸಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಪುನರುಚ್ಚರಿಸಿದರು.

ಸಂಸ್ಕೃತಿ ಮತ್ತು ಕನ್ನಡ ಭಾಷೆಗೆ ನಿಕಟ ಸಂಬಂಧ
ಬೆಳಗಾವಿಯಲ್ಲಿ ಇಷ್ಟು ಸುಸಜ್ಜಿತ ಕನ್ನಡ ಭವನ ನಿರ್ಮಾಣ ಮಾಡಿರುವುದು ಈ ಭಾಗದಲ್ಲಿ ಕನ್ನಡಕ್ಕೆ ಮತ್ತಷ್ಟು ಮಹತ್ವ ಬಂದಂತಾಗಿದೆ. ಸಂಸ್ಕೃತಿ ಮತ್ತು ಭಾಷೆಗೆ ಬಹಳ ನಿಕಟ ಸಂಬಂಧ ಇದೆ. ನಾವು ಕನ್ನಡಿಗರು ಅತಿಥಿಗಳನ್ನು ಸ್ವಾಗತಿಸುವ, ಉಪಚರಿಸುವ ರೀತಿ ಎಲ್ಲವೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಬಾಷೆ ಇಡೀ ಮನುಕುಲದಲ್ಲಿ ಮಹತ್ವದ ಪಾತ್ರ ವಹಿಸಿದೆ. ಮನುಷ್ಯನಿಗೆ ಅಭಿವ್ಯಕ್ತಪಡಿಸಲು ಭಾಷೆ ಮುಖ್ಯವಾಗಿದೆ. ಮನಸ್ಸುಗಳನ್ನು ಒಗ್ಗೂಡಿಸುವ, ತತ್ವಾದರ್ಶಗಳನ್ನು, ದೇಶಭಕ್ತಿಯನ್ನು ಜೋಡಿಸಲು ಭಾಷೆ ಮುಖ್ಯವಾಗುತ್ತದೆ ಎಂದು ಭಾಷೆ ಬಗ್ಗೆ ವಿವರಿಸಿದರು.

ದಾಸ ಸಾಹಿತ್ಯ ಕನ್ನಡ ಶ್ರೀಮಂತ
ರಾಷ್ಟ್ರಕವಿ ಕುವೆಂಪು ಬರೆದ ನಾಡಗೀತೆ ಕೇಳಿದರೆ ಸಾಕಷ್ಟು ಅರ್ಥಗರ್ಭಿತವಾಗಿದೆ. ಕನ್ನಡ ಶ್ರೀಮಂತವಾದ ಭಾಷೆಯಾಗಿಸಲು ಸಾಹಿತಿಗಳು ಮಹತ್ತರ ಕೊಡುಗೆ ನೀಡಿದ್ದಾರೆ. ಕನ್ನಡ ಅತ್ಯಂತ ಪ್ರಾಚೀನ ಭಾಷೆ ಕನ್ನಡ. ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ಬಡಕ್ಕೆ ಬಂದಿವೆ. ಹಳೆಕನ್ನಡ,ನುಡಿಗನ್ನಡ, ಜಾನಪದ ಕನ್ನಡವಿರುವಂತೆ ಕನ್ನಡ ಸಾಹಿತ್ಯದಲ್ಲಿಯೂ ಅನೇಕ ವಿಧಗಳಿವೆ. ವಚನ ಸಾಹಿತ್ಯ ತತ್ವ, ತಾತ್ವಿಕತೆಯನ್ನು ನೀಡಿದೆ. ವಚನ ಸಾಹಿತ್ಯ, ದಾಸ ಸಾಹಿತ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ. ಈ ಸಾಹಿತ್ಯಗಳನ್ನು ಇಡೀ ದೇಶದ ಜನರಿಗೆ ತಿಳಿಸಬೇಕಿದೆ. ಸಂಕುಚಿತ ಮನೋಭಾವದಿಂದ ಹೊರ ಬರಬೇಕು. ಸ್ವಾತಂತ್ರ್ಯ ಬಂದಾಗ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿತ್ತು ಆದರೆ ಬೇರೆ ಭಾಷೆ ಕಲಿಯಬೇಕು. ಆದರೆ, ನಮ್ಮತನ ಬಿಟ್ಡು ಕೊಡಬಾರದು. ಕನ್ನಡ ನಮ್ಮ ಅಸ್ಮಿತೆ. ಕನ್ನಡ ಭಾಷೆಯಿಂದ ನಾವು ಗುರುತಿಸಲ್ಪಡುತ್ತೇವೆ ಎಂದರು.
ಜಗದ್ಗುರು ತೋಂಟದ ಸಿದ್ಧರಾಮ ಸ್ವಾಮೀಜಿ, ಸಚಿವ ಗೋವಿಂದ ಕಾರಜೋಳ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ, ಹಿರಿಯ ಕಲಾವಿದೆ ಗಿರಿಜಾ ಲೋಕೇಶ್, ಸಂಸದೆ ಮಂಗಳಾ ಅಂಗಡಿ, ಮಾಜಿ ಸಂಸದರು ಹಾಗೂ ಕೆಎಲ್ ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications