CP Yogeshwar: ಚನ್ನಪಟ್ಟಣದಿಂದ ಸಿಪಿ ಯೋಗೇಶ್ವರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಮೈತ್ರಿಗೆ ಸಂಕಷ್ಟ?
ಬೆಂಗಳೂರು, ಅಕ್ಟೋಬರ್ 17: ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಚನ್ನಪಟ್ಟಣ ಚುನಾವಣಾ ಕಣ ರಂಗೇರಿದೆ. ಚನ್ನಪಟ್ಟಣ ಟಿಕೆಟ್ ಗಾಗಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರು ಪಟ್ಟು ಹಿಡಿದಿದ್ದು, ಟಿಕೆಟ್ ಸಿಗದಿದ್ದರೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ನವೆಂಬರ್ 13 ರಂದು ನಡೆಯಲಿರುವ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಮಾಜಿ ಸಚಿವ ಮತ್ತು ಬಿಜೆಪಿ ಎಂಎಲ್‌ಸಿ ಸಿಪಿ ಯೋಗೇಶ್ವರ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಎಲ್ಲಾ ಸೂಚನೆಗಳನ್ನು ನೀಡಿದ್ದು, ಸಮೀಕ್ಷೆಗಳು ತಮಗೆ ಸ್ಪಷ್ಟವಾದ ಜಯವನ್ನು ನೀಡಿವೆ ಎಂದು ಸಿ ಪಿ ಯೋಗೇಶ್ವರ್ ಅವರು ತಿಳಿಸಿದ್ದಾರೆ.

-ನಾನು ಬಿಜೆಪಿ ಅಭ್ಯರ್ಥಿಯಾಗಿ ಐದು ಚುನಾವಣೆಗಳಿಗೆ ಸ್ಪರ್ಧಿಸಿದ್ದೇನೆ, ಆದರೆ ಒಮ್ಮೆ ಮಾತ್ರ ಗೆದ್ದಿದ್ದೇನೆ. ಡಿ.ಕೆ.ಶಿವಕುಮಾರ್ ಬೆಂಬಲದಿಂದ ಪ್ರಬಲ ದೇವೇಗೌಡರ ಕುಟುಂಬ ನನ್ನ ವಿರುದ್ಧವಾಗಿತ್ತು. ಈ ಬಾರಿ ನನ್ನ ಬೆಂಬಲಿಗರು ನನ್ನನ್ನು ಸ್ವತಂತ್ರ ಶಾಸಕನನ್ನಾಗಿ ಮಾಡಲು ಮನಸ್ಸು ಮಾಡಿದ್ದಾರೆ. ರಾಜಕೀಯ ಪಕ್ಷಗಳು ನನ್ನನ್ನು ಕೈಬಿಟ್ಟರೂ ಜನ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಚನ್ನಪಟ್ಟಣದ ಕೂಡ್ಲೂರು ರಸ್ತೆಯಲ್ಲಿ ಬುಧವಾರ ತಮ್ಮ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ತಿಳಿಸಿದ್ದಾರೆ.
ಎನ್‌ಡಿಎ ತನ್ನ ಅಭ್ಯರ್ಥಿಯನ್ನು ಪರಿಗಣಿಸದಿದ್ದರೂ ಪಕ್ಷೇತರರಾಗಿ ಸ್ಪರ್ಧಿಸುವಂತೆ ಬೆಂಬಲಿಗರು ಸಲಹೆ ನೀಡಿದ್ದಾರೆ ಎಂದು ಸಿ ಪಿ ಯೋಗೇಶ್ವರ್ ಅವರು ಹೇಳಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಅವರನ್ನು ಕಣಕ್ಕಿಳಿಸಲು ಬಯಸಿ ಯೋಗೇಶ್ವರ್ ಅವರಿಗೆ ಸ್ಥಾನ ಬಿಟ್ಟುಕೊಡುತ್ತಿಲ್ಲ ಎಂದುಕಾರ್ಯಕರ್ತರು ಆರೋಪಿಸಿದ್ದಾರೆ.
ನನಗೆ ಟಿಕೆಟ್ ಸಿಗದಿದ್ದರೆ, ನಮ್ಮ ಕಾರ್ಯಕರ್ತರು ಹೇಳುವ ಆಧಾರದ ಮೇಲೆ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ. ಆದರೆ ನಾನು ಹೊರದಬ್ಬುವ ಅಗತ್ಯವಿಲ್ಲ. ನಾನೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ. ಯಾವುದೇ ಗೊಂದಲವಿಲ್ಲ ಎಂದು ಯೋಗೇಶ್ವರ ತಿಳಿಸಿದ್ಧಾರೆ.
ಹಳೆ ಮೈಸೂರಿನಲ್ಲಿ ಬಿಜೆಪಿ ಬೆಳೆಯಬೇಕಾದರೆ ನಾನು ಚುನಾವಣೆಗೆ ಸ್ಪರ್ಧಿಸಬೇಕು. ನಾನು ಈ ಭಾಗದ ಬಿಜೆಪಿಯ ಹಿರಿಯ ಸದಸ್ಯ. ಕುಮಾರಸ್ವಾಮಿ ಕೂಡ ಬುದ್ಧಿವಂತರು. ಎನ್‌ಡಿಎ ನಾಯಕರು ಎಲ್ಲರಿಗೂ ಮನವರಿಕೆ ಮಾಡಿ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಸಿ ಪಿ ಯೋಗೇಶ್ವರ್ ಅವರು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ನನಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಬಿಜೆಪಿ-ಜೆಡಿಎಸ್ ನಾಯಕರು ನನ್ನ ಹೆಸರನ್ನು ಅಂತಿಮಗೊಳಿಸಲಿದ್ದಾರೆ. ಪಕ್ಷದ ನಾಯಕರ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಎರಡೂ ಪಕ್ಷಗಳ ನಾಯಕರ ಜತೆ ಚರ್ಚಿಸಿದ್ದೇನೆ. ಬಹುಶಃ ಒಂದೆರಡು ದಿನಗಳಲ್ಲಿ ಹೆಸರನ್ನು ಪ್ರಕಟಿಸಲಾಗುವುದು. ಈ ಹಿಂದೆ ಹಲವು ಬಾರಿ ಕುಮಾರಸ್ವಾಮಿ ಅವರ ಜೊತೆ ಹಾಗೂ ನಮ್ಮ ರಾಜ್ಯ ಮತ್ತು ಕೇಂದ್ರ ನಾಯಕರ ಜೊತೆ ಮಾತನಾಡಿದ್ದೇನೆ ಎಂದಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರು ತಿಳಿಸಿದ್ದಾರೆ.












Click it and Unblock the Notifications