ದೇವೇಗೌಡರನ್ನು ಭೇಟಿಯಾದ ಸಿಪಿ ಯೋಗೇಶ್ವರ!
ಬೆಂಗಳೂರು, ಫೆಬ್ರವರಿ 12: ಲೋಕಸಭೆ ಚುನಾವಣೆ ಸಮಯದಲ್ಲಿಯೇ ಬಿಜೆಪಿ ನಾಯಕ ಸಿ. ಪಿ. ಯೋಗೇಶ್ವರ ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿ ಕೂತೂಹಲ ಮೂಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಅವರು ಲೋಕಸಭೆ ಚುನಾವಣೆ ಟಿಕೆಟ್ ಆಕಾಂಕ್ಷಿ ಎಂಬ ಸುದ್ದಿಗಳು ಹಬ್ಬಿವೆ.
ಭಾನುವಾರ ಸಿ. ಪಿ. ಯೋಗೇಶ್ವರ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಭೇಟಿ ಮಾಡಿದರು. ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜಕೀಯ ಎದುರಾಳಿಯಾದ ಸಿ. ಪಿ. ಯೋಗೇಶ್ವರ ದೇವೇಗೌಡರನ್ನು ಭೇಟಿಯಾಗಿರುವುದು ಹಲವು ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಬೆಂಗಳೂರು ಗ್ರಾಮಾಂತರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಯೋಗೇಶ್ವರ ಬಯಸಿದ್ದಾರೆ.
ಬಿಜೆಪಿ ಅಭ್ಯರ್ಥಿ?: ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯ ಹಿನ್ನಲೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಕುತೂಹಲ. ಈ ಕ್ಷೇತ್ರ ಬಿಜೆಪಿಗೋ ಅಥವ ಜೆಡಿಎಸ್ ಪಕ್ಷಕ್ಕೋ? ಎಂಬುದು ಇನ್ನೂ ಅಂತಿಮವಾಗಿಲ್ಲ.
ಒಂದು ವೇಳೆ ಕ್ಷೇತ್ರ ಬಿಜೆಪಿಗೆ ಸಿಕ್ಕಿದರೆ ತಮಗೆ ಬೆಂಬಲ ನೀಡುವಂತೆ ಸಿ. ಪಿ. ಯೋಗೇಶ್ವರ ಎಚ್. ಡಿ. ದೇವೇಗೌಡರ ಬಳಿ ಚರ್ಚೆ ನಡೆಸಿರುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಗೆ ಚನ್ನಪಟ್ಟಣ ಸಹ ಒಳಪಡುತ್ತದೆ. ಅಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಲಿ ಶಾಸಕರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಕುಣಿಗಲ್, ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ, ಆನೇಕಲ್, ಮಾಗಡಿ, ರಾಮನಗರ, ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರ ಸೇರುತ್ತದೆ. ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅಲ್ಲದೇ ಎಚ್. ಡಿ. ಕುಮಾರಸ್ವಾಮಿ ರಾಮನಗರ ಜಿಲ್ಲೆಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ.
ಆದ್ದರಿಂದ ಸಿ. ಪಿ. ಯೋಗೇಶ್ವರ ರಾಜಕೀಯ ಎದುರಾಳಿತನವನ್ನು ಮರೆತು ಎಚ್. ಡಿ. ದೇವೇಗೌಡರನ್ನು ಭೇಟಿ ಮಾಡಿದ್ದಾರೆ. 2019ರಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನ ಡಿ. ಕೆ. ಸುರೇಶ್ ಗೆದ್ದಿದ್ದಾರೆ. ರಾಜ್ಯದಲ್ಲಿ ಪಕ್ಷ ಗೆದ್ದ ಏಕೈಕ ಕ್ಷೇತ್ರವಿದಾಗಿದೆ.
ರಾಮನಗರ ಅಭಿವೃದ್ಧಿ ವಿಚಾರದಲ್ಲಿ ಸಿ. ಪಿ. ಯೋಗೇಶ್ವರ ಮತ್ತು ಎಚ್. ಡಿ. ಕುಮಾರಸ್ವಾಮಿ ನಡುವೆ ಸದಾ ಜಟಾಪಟಿ ನಡೆಯುತ್ತಿರುತ್ತದೆ. ಆದರೆ ಈಗ ರಾಜಕೀಯ ಚಿತ್ರಣ ಬದಲಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಸಿ. ಪಿ. ಯೋಗೇಶ್ವರ ಚನ್ನಪಟ್ಟಣದಲ್ಲಿ ಎಚ್. ಡಿ. ಕುಮಾರಸ್ವಾಮಿ ಎದುರಾಳಿಯಾಗಿದ್ದರು. ಬಿಜೆಪಿಯ ಯೋಗೇಶ್ವರ 80,677 ಮತಗಳನ್ನು ಪಡೆದು ಸೋಲು ಕಂಡಿದ್ದರು. ಎಚ್. ಡಿ. ಕುಮಾರಸ್ವಾಮಿ 96,592 ಮತಗಳನ್ನು ಪಡೆದು ಗೆಲುವು ಕಂಡಿದ್ದರು.
ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಿಜೆಪಿಗೆ ಸಿಗುತ್ತಿಲ್ಲ. ಪ್ರತಿ ಚುನಾವಣೆಯಲ್ಲಿಯೂ ಅಭ್ಯರ್ಥಿ ಬದಲಾವಣೆ ಮಾಡಿದರೂ ಸಹ ಯಾವ ತಂತ್ರವೂ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಬಾರಿ ಜೆಡಿಎಸ್, ಬಿಜೆಪಿ ಮೈತ್ರಿ ಯಾವ ರೀತಿ ಸಹಾಯಕವಾಗಲಿದೆ ಎಂದು ಕಾದು ನೋಡಬೇಕಿದೆ.
ದೇವೇಗೌಡರ ಭೇಟಿ ಬಗ್ಗೆ ಫೇಸ್‌ಬುಕ್ ಪೋಸ್ಟ್ ಹಾಕಿರುವ ಸಿ. ಪಿ. ಯೋಗೇಶ್ವರ, 'ಕರುನಾಡಿನ ಹೆಮ್ಮೆ, ಗೌರವಾನ್ವಿತ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರನ್ನು ಅವರ ನಿವಾಸದಲ್ಲಿ ಭೇಟಿಮಾಡಿ ಆಶೀರ್ವಾದ ಪಡೆಯಲಾಯಿತು. ನಾಡಿನ ರೈತರು, ಕೃಷಿ ಕಾರ್ಮಿಕರ ಬಗ್ಗೆ ಈ ಇಳಿ ವಯಸ್ಸಿನಲ್ಲೂ ದೇವೇಗೌಡರಿಗೆ ಇರುವ ಕಳಕಳಿ ಅನುಕರಣೀಯ. 6 ದಶಕಗಳ ಸುದೀರ್ಘ ಸಾರ್ವಜನಿಕ ಜೀವನ ಪೂರೈಸಿರುವ ಶ್ರೀ ದೇವೇಗೌಡರ ಜ್ಞಾನ, ಅನುಭವ ನಮ್ಮೆಲ್ಲರಿಗೂ ಪ್ರೇರಣಾದಾಯಿ' ಎಂದು ಹೇಳಿದ್ದಾರೆ.












Click it and Unblock the Notifications