ಗುಲ್ಬರ್ಗದಲ್ಲಿ ಕರ್ಗೆ ಇಎಸ್‌ಐ ಆಸ್ಪತ್ರೆ ಲೋಕಾರ್ಪಣೆಗೆ ಸಜ್ಜು
ಗುಲ್ಬರ್ಗ, ಜ. 31- ಕಾಂಗ್ರೆಸ್ ಪಕ್ಷ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಹತ್ವದ/ಚರಿತ್ರಾರ್ಹ ಕೆಲಸದ ಮೇಲೆ ಗುಲ್ಬರ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ದೇಶದಲ್ಲೇ ಅತಿ ದೊಡ್ಡದಾದ ಇಎಸ್‌ಐ ವೈದ್ಯಕೀಯ ಕಾಲೇಜು ಸಂಕೀರ್ಣ ಇಲ್ಲಿ ನಿರ್ಮಾಣಗೊಂಡಿದ್ದು, ಸೋನಿಯಾ ಗಾಂಧಿ ಅವರು ಶನಿವಾರ (ಫೆ. 1) ಲೋಕಾರ್ಪಣೆ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆ ವೇಳೆಗೆ ಇಂತಹ ಬೃಹತ್ ಆಸ್ಪತ್ರೆಯೊಂದು ಅದೂ ಗುಲ್ಬರ್ಗದಲ್ಲಿ ಲೋಕಾರ್ಪಣೆಯಾಗುತ್ತಿರುವುದು ಕಾಕತಾಳೀಯ! ಮತ್ತೂ ಒಂದು ಕಾಕತಾಳೀಯ ಸಂಗತಿಯೆಂದರೆ ಇಡೀ ಆಸ್ಪತ್ರೆಯನ್ನು ಮೇಲಿಂದ ನೋಡಿದಾಗ ಕರ್ಗೆ ಎಂಬ ಪದವು ಆಸ್ಪತ್ರೆಯ ಆಕೃತಿಯಾಗಿ ಮೂಡಿದೆ (ಕೆಳಗಿನ ಚಿತ್ರ ನೋಡಿ). ಅಂದಹಾಗೆ ಈ ಆಸ್ಪತ್ರೆಯ ಹಿಂದಿನ ಶಕ್ತಿ/ಯುಕ್ತಿ ನಿಸ್ಸಂಶಯವಾಗಿ ಕೇಂದ್ರ ರೈಲ್ವೆ ಸಚಿವ/ ಈ ಭಾಗದ ಪ್ರಭಾವಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರದ್ದು!

Employees State Insurance Corporation's (ESIC) medical education complex: ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಕಾರ್ಯಗತಗೊಂಡಿರುವ ಬೃಹತ್ ಯೋಜನೆ ಇದಾಗಿದೆ. ಉತ್ತರ ಕರ್ನಾಟಕದ 16 ಜಿಲ್ಲೆಗಳು, ಮಹಾರಾಷ್ಟ್ರ ಮರಾಠವಾಡದ 5 ಜಿಲ್ಲೆಗಳು ಹಾಗೂ ಆಂಧ್ರಪ್ರದೇಶ ತೆಲಂಗಾಣದ 10 ಜಿಲ್ಲೆಗಳು ಸೇರಿ ಒಟ್ಟು 31 ಜಿಲ್ಲೆಗಳ 50 ಸಾವಿರಕ್ಕೂ ಹೆಚ್ಚು ಇಎಸ್‌ಐ ಸದಸ್ಯರು ಈ ಬೃಹತ್ ಆಸ್ಪತ್ರೆಯ ಪ್ರಯೋಜನ ಪಡೆಯಬಹುದಾಗಿದೆ.
ಅಲ್ಲದೆ 31 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಈ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿ ವರ್ಷ 3000 ವಿದ್ಯಾರ್ಥಿಗಳು ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಶುಶ್ರೂಷಾ ಕೋರ್ಸ್ ಶಿಕ್ಷಣ ಮತ್ತು ತರಬೇತಿ ಪಡೆಯಲಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ESI ಆಸ್ಪತ್ರೆಯನ್ನು ಇತ್ತೀಚೆಗೆ ಅತ್ಯಾಧುನಿಕ ರೀತಿಯಲ್ಲಿ ನವೀಕರಿಸಲಾಗಿದೆ. ರಾಜ್ಯದಲ್ಲಿ ಇದನ್ನು ಹೊರತು ಪಡಿಸಿದರೆ ದಕ್ಷಿಣ ಭಾರತದಲ್ಲಿಯೇ ಅತ್ಯಾಧುನಿಕವಾದ ESI ವೈದ್ಯಕೀಯ ಕಾಲೇಜು ಇದಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಕಾರ್ಮಿಕ ಸಚಿವರಾಗಿದ್ದಾಗ ಈ ಕಾಲೇಜು ಸ್ಥಾಪನೆಗೆ ಮುನ್ನುಡಿ ಬರೆದಿದ್ದರು. ಮುಂದೆ ಅವರ ಒತ್ತಾಸೆಯಂತೆ 1500 ಕೋಟಿ ರೂ. ವೆಚ್ಚದಲ್ಲಿ ಈ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಗೊಂಡಿದೆ.
ಐದು ಮೆಡಿಕಲ್ ಕಾಲೇಜುಗಳು ಗುಲ್ಬರ್ಗದಲ್ಲಿವೆ:
ಖಾಸಗಿ ವೈದ್ಯಕೀಯ ಕಾಲೇಜುಗಳಾದ ಕೆಬಿಎನ್ ವೈದ್ಯ ಕಾಲೇಜು ಹಾಗೂ ಎಂಆರ್ ವೈದ್ಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಇದೀಗ ಮೂರನೆಯ ಆಸ್ಪತ್ರೆಯಾಗಿ ಇಎಸ್‌ಐ ವೈದ್ಯ ಕಾಲೇಜು ಆರಂಭವಾಗುತ್ತಿದೆ. ಇನ್ನೂ ಎರಡು ವೈದ್ಯಕೀಯ ಕಾಲೇಜುಗಳು ಆರಂಭವಾಗುವ ಅಂದಾಜಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಅವರು ತಿಳಿಸಿದ್ದಾರೆ.












Click it and Unblock the Notifications