ಕೊರೊನಾ ಸೋಂಕಿತ ಸರ್ಕಾರಿ ನೌಕರರಿಗೆ 7 ದಿನ ರಜೆ
ಬೆಂಗಳೂರು, ಜನವರಿ 28: ಕೊರೊನಾ ಸೋಂಕಿತ ಸರ್ಕಾರಿ ನೌಕರರಿಗೆ 7 ದಿನ ರಜೆ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗುವ ಸರಕಾರಿ ನೌಕರರಿಗೆ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆ ಎಂದು ಸರಕಾರ ಆದೇಶ ಹೊರಡಿಸಿದೆ. ಸರಕಾರಿ ನೌಕರ ಅಥವಾ ಆತನ ಕುಟುಂಬದ ಸದಸ್ಯರು ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಒಳಪಟ್ಟ ಸಂದರ್ಭದಲ್ಲಿ ಹಾಗೂ ಸರಕಾರಿ ನೌಕರನು ವಾಸಿಸುವ ಪ್ರದೇಶದಲ್ಲಿ ಕಂಟೋನ್ಮೆಂಟ್ ಪ್ರದೇಶವೆಂದು ಘೋಷಿಸಿ ಸಾರ್ವಜನಿಕ ಸಂಚಾರದಲ್ಲಿ ಯಾವುದೇ ನಿರ್ಬಂಧ ವಿಧಿಸಿದ್ದಲ್ಲಿ ಅಂಥವರಿಗೆ ಈ ರಜೆಯನ್ನು ಮಂಜೂರು ಮಾಡಬಹುದು.
ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಚುಚ್ಚುಮದ್ದು ನೀಡಲಾಗಿರುವ ಹಿನ್ನೆಲೆಯಲ್ಲಿ ಕೊರೊನಾ ಸೋಂಕಿನ ತೀವ್ರತೆಯು ಪ್ರಸ್ತುತ ಇಳಿಮುಖವಾಗಿದೆ. ಇದಕ್ಕೆ ತುತ್ತಾದವರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಪ್ರಮಾಣದಲ್ಲಿಯೂ ಗಣನೀಯವಾಗಿಯೂ ಬದಲಾವಣೆ ಆಗುತ್ತಿದೆ. ಕೋವಿಡ್ 19 ಸಂಬಂಧ ಮುಂಜಾಗೃತ ಕ್ರಮದ ಮಾರ್ಗಸೂಚಿಯನ್ನು ಮಾರ್ಪಡಿಸಿ ಆದೇಶಿಸಿರುವುದನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ 19 ರೋಗದಿಂದ ರಾಜ್ಯ ಸರ್ಕಾರಿ ನೌಕರರಿಗೆ ಸಂದರ್ಭ ಅನುಸಾರ ವಿಶೇಷ ಸಾಂದರ್ಭಿಕ ರಜೆಯನ್ನು ಸಂಬಂಧ ಪಟ್ಟ ಸಕ್ಷಮ ಪ್ರಾಧಿಕಾರವು ರಜೆ ಮಂಜೂರು ಮಾಡಬಹುದಾಗಿದೆ.
ಕೊರೋನಾ ವೈರಸ್ ಸೋಂಕಿಗೆ ಒಳಗಾಗುವ ಸರ್ಕಾರಿ ನೌಕರರಿಗೆ ಮನೆಯಲ್ಲಿ ಪ್ರತ್ಯೇಕವಾಗಿರಲು ಅಥವಾ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ (ಜು.22ರಂದು) ಹೊರಡಿಸಿದ್ದ ಆದೇಶದಲ್ಲಿ ಸರ್ಕಾರಿ ನೌಕರರು ವಾಸಿಸುವ ಸ್ಥಳವನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಿದಲ್ಲಿ ಅಥವಾ ಸರ್ಕಾರಿ ನೌಕರರ ಕುಟುಂಬದ ಯಾವುದೇ ಸದಸ್ಯರು ಕೊರೋನಾ ಸೋಂಕಿಗೆ ಒಳಗಾಗಿ ನೌಕರರು ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರೆ ಅವರು ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅವರು ಕರ್ತವ್ಯ ನಿರ್ವಹಣೆಗೆ ಕಚೇರಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಆದೇಶಿಸಲಾಗಿತ್ತು. ಆದರೆ, ಈ ಆದೇಶದಲ್ಲಿ ಸ್ವತಃ ನೌಕರನೇ ಸೋಂಕಿಗೆ ಒಳಗಾಗಿದ್ದರೆ ಅವರಿಗೂ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯ ಅನ್ವಯವಾಗಲಿದೆಯೇ ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೇಳಿದ ಸ್ಪಷ್ಟನೆಗೆ ಉತ್ತರ ಸಿಕ್ಕಿದೆ. ರಾಜ್ಯ ಸರ್ಕಾರಿ ನೌಕರರಿಗೆ ಇಳಿಕೆ ಮಾಡಿದಂತೆ ಸಾಂದರ್ಭಿಕ ರಜೆಯನ್ನು 15ಕ್ಕೆ ಏರಿಕೆ ಮಾಡಲಾಗಿದೆ.

ಕೇಂದ್ರ ಸರ್ಕಾರ ಕಳೆದ ಜೂನ್‌ನಲ್ಲಿ ತನ್ನ ನೌಕರರಿಗೆ 15 ದಿನಗಳ ವಿಶೇಷ ಕೊರೊನಾ ಸಾಂಕ್ರಾಮಿಕ ರಜೆಯನ್ನು ಘೊಷಣೆ ಮಾಡಿತು. ಈ ಆದೇಶದ ಪ್ರಕಾರ, ಎಲ್ಲಾ ಕೇಂದ್ರ ಸರ್ಕಾರಿ ನೌಕರರು ತಮ್ಮ ಪೋಷಕರು ಅಥವಾ ಯಾವುದೇ ಅವಲಂಬಿತ ಕುಟುಂಬ ಸದಸ್ಯರು ಕೋವಿಡ್ ಸೋಂಕಿಗೆ ತುತ್ತಾದ ಸಂದರ್ಭದಲ್ಲಿ ಅವರ ಆರೈಕೆಗಾಗಿ 15 ದಿನಗಳ ವಿಶೇಷ ಸಮಾನ್ಯ ರಜೆ (ಎಸ್‌ಸಿಎಲ್) ಪಡೆಯಬಹುದು. ಅಷ್ಟೇ ಅಲ್ಲದೆ ಈ ವಿಶೇಷ ರಜೆಗಳ 15 ದಿನಗಳ ಅವಧಿ ಮುಕ್ತಾಯದ ಬಳಿಕವೂ ಕೂಡ ಕುಟುಂಬದ ಸೋಂಕಿತ ವ್ಯಕ್ತಿ ಅಥವಾ ಪೋಷಕರು ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರೆ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೂ ಸಂತ್ರಸ್ಥ ನೌಕರನ ರಜೆಯನ್ನು ವಿಸ್ತರಣೆ ಮಾಡಲು ಅವಕಾಶ ನೀಡಲಾಗಿದೆ.












Click it and Unblock the Notifications