ಕೊವಿಡ್19 ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ
ಬೆಂಗಳೂರು, ಏಪ್ರಿಲ್ 13: ಕೊರೊನಾವೈರಸ್ ದೆಸೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇನ್ನಷ್ಟು ಕಾಲ ಮುಂದುವರೆಯಲಿದೆ. ಈ ನಡುವೆ ಅನೇಕ ಕ್ಷೇತ್ರದ ಕಾರ್ಮಿಕರಿಗೆ ಅದರಲ್ಲೂ ಗುತ್ತಿಗೆ ಆಧಾರಿತ ನೌಕರರಿಗೆ ಉದ್ಯೋಗ ಭದ್ರತೆಯ ಚಿಂತೆ ಎದುರಾಗಿದೆ. ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವಾಲಯದ ಸೂಚನೆಯಂತೆ, ಕಾರ್ಮಿಕ ಇಲಾಖೆ ಇಂದು ಮಹತ್ವದ ಆದೇಶ ಹೊರಡಿಸಿದೆ.
ಈ ಆದೇಶವು ಸಾರ್ವಜನಿಕ, ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಅನ್ವಯವಾಗಲಿದ್ದು, ಗುತ್ತಿಗೆ ಆಧಾರಿತ, ಅರೆ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದು, ಅವರ ವೇತನವನ್ನು ಕಡಿತಗೊಳಿಸಬಾರದು ಎಂದು ಸೂಚಿಸಲಾಗಿದೆ.
ರಾಜ್ಯ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ ಕ್ಯಾಪ್ಟನ್ ಮಣಿವಣ್ಣನ್ ನೀಡಿರುವ ಪ್ರಕಟಣೆಯಂತೆ, ಕೋವಿಡ್-19 ತುರ್ತು ಪರಿಸ್ಥಿತಿಯ ಸನ್ನಿವೇಶದಲ್ಲಿ ಎಲ್ಲಾ ಸಾರ್ವಜನಿಕ, ಖಾಸಗಿ ಸಂಸ್ಥೆಗಳ ಉದ್ಯೋಗದಾತರು, ತಮ್ಮ ಉದ್ಯೋಗಿಗಳನ್ನು, ವಿಶೇಷವಾಗಿ ಕ್ಯಾಸುಯಲ್ಟಿ ಕೆಲಸಗಾರರನ್ನು ಅಥವಾ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಬಾರದೆಂದು ವಿಪತ್ತು ನಿರ್ವಹಣೆ ಕಾಯ್ದೆ 2005 ಸೆಕ್ಷನ್ 69ರಡಿಯಲ್ಲಿ ಆದೇಶಿಸಿದ್ದಾರೆ.

ಯಾವುದೇ ಕೆಲಸಗಾರರನ್ನು ಈ ಅವಧಿಯಲ್ಲಿ ರಜೆ ತೆಗೆದುಕೊಂಡಿದ್ದಲ್ಲಿ ಅವರ ವೇತನದಲ್ಲಿ ಯಾವುದೇ ಪರಿಣಾಮಕಾರಿ ಕಡಿತವಿಲ್ಲದೇ, ಅಂತಹ ಕೆಲಸಗಾರರನ್ನು ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸುವುದು. ಇದಲ್ಲದೇ ಕೋವಿಡ್-19 ಕಾರಣದಿಂದಾಗಿ ಉದ್ಯೋಗದ ಸ್ಥಳದಲ್ಲಿ ಕಾರ್ಯನಿರ್ವಹಿಸದಿರುವ ಸಂದರ್ಭ ಉಂಟಾದಲ್ಲಿ ಅಂತಹ ಘಟಕದ(ವರ್ಕ್ ಯುನಿಟ್) ನೌಕರರು ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸುವುದು.
ಈ ಸಂಬಂಧ ಮಾಡುವ ಯಾವುದೇ ಉಲ್ಲಂಘನೆಗಳು ವಿಪತ್ತು ನಿರ್ವಹಣೆ ಕಾಯ್ದೆ 2005ರಡಿ ದಂಡನೆಯ ಕ್ರಮಕ್ಕೆ ಒಳಪಟ್ಟಿರುತ್ತದೆ. ಕಾರ್ಮಿಕ ಇಲಾಖೆಯು ಈ ನಿಟ್ಟನಲ್ಲಿ 48 ಗಂಟೆಯೊಳಗಾಗಿ ಸಹಾಯವಾಣಿಯನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವುದು ಎಂಬುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.












Click it and Unblock the Notifications