ಕೋವಿಡ್ 19 ಪರಿಕರ ಖರೀದಿ ಅಕ್ರಮ: ಬಿಜೆಪಿ, ಕಾಂಗ್ರೆಸ್ಸಿಗೆ ಸರಿಯಾಗಿ ಕಿವಿಹಿಂಡಿದ ಕುಮಾರಸ್ವಾಮಿ
ಬೆಂಗಳೂರು, ಜುಲೈ 23: ಕೋವಿಡ್ 19 ವೈದ್ಯಕೀಯ ಉಪಕರಣ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು, ಯಡಿಯೂರಪ್ಪ ನೇತೃತ್ವದ ಸರಕಾರದ ವಿರುದ್ದ ಕಾಂಗ್ರೆಸ್, ದಾಖಲೆಗಳ ಮೇಲೆ ದಾಖಲೆಯನ್ನು ಬಿಡುಗಡೆ ಮಾಡಿದೆ, ಇದಕ್ಕೆ ಬಿಜೆಪಿ ಪ್ರತ್ಯುತ್ತರವನ್ನೂ ನೀಡಿದೆ.
Recommended Video
ಈ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದು, ಎರಡೂ ಪಕ್ಷಗಳಿಗೆ ನೀತಿಪಾಠವನ್ನು ಮಾಡಿದ್ದಾರೆ. ಇದರ ಜೊತೆಗೆ, ರೇಷ್ಮೆ ಬೆಳೆಗಾರರ ಹಿತವನ್ನು ಕಾಪಾಡಿ ಎಂದು ಎಚ್ಡಿಕೆ, ಬಿಎಸ್ವೈ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಕುಮಾರಸ್ವಾಮಿ ಮಾಡಿದ ಟ್ವೀಟ್, "#COVID19 ಮತ್ತು ಲಾಕ್‌ಡೌನ್‌ಗಳಿಂದಾಗಿ ಮಾರುಕಟ್ಟೆ ಇಲ್ಲದೇ ರಾಜ್ಯದಲ್ಲಿ ₹1000 ಕೋಟಿ ಮೌಲ್ಯದ ರೇಷ್ಮೆ ಖರೀದಿಯಾಗದೇ ಉಳಿದಿದೆ ಎಂಬ ಸಂಗತಿ ರೀಲರ್‌ಗಳು, ಬೆಳೆಗಾರರೊಂದಿಗೆ ಇಂದು ನಡೆಸಿದ ಚರ್ಚೆಯಲ್ಲಿ ತಿಳಿಯಿತು. ಸರ್ಕಾರ ಕೂಡಲೇ ₹450-500 ಕೋಟಿ ಮೊತ್ತದ ರೇಷ್ಮೆ ಖರೀದಿಸಿ ಬೆಳೆಗಾರರು, ರೀಲರ್‌ಗಳನ್ನು ಸಂಕಷ್ಟದಿಂದ ಪಾರು ಮಾಡಬೇಕು".

"#Covid19 ಪರಿಕರಗಳ ಖರೀದಿ ಅಕ್ರಮದ ಬಗೆಗಿನ ಅತ್ಯಂತ ಹಳೇ ರಾಷ್ಟ್ರೀಯ ಪಕ್ಷವೊಂದರ ಆರೋಪ, ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಪ್ರತ್ಯಾರೋಪ, ಕಸರೆರಚಾಟವನ್ನು ಗಮನಿಸಿದೆ. ಕೋವಿಡ್ ಈ ರಾಜ್ಯದ ಪ್ರತಿಯೊಬ್ಬನ ಜೀವ, ಜೀವನಕ್ಕೆ ಬೆದರಿಕೆಯೊಡ್ಡಿರುವಾಗ, ಬದುಕನ್ನೇ ಕಸಿಯುತ್ತಿರುವಾಗ ಎರಡೂ ಪಕ್ಷಗಳ ಬೇಜವಾಬ್ದಾರಿ ವರ್ತನೆ ಕಂಡು ಬೇಸರವಾಗಿದೆ" ಎಚ್ಡಿಕೆ ಟ್ವೀಟ್.
"#Covid ಪರಿಕರಗಳ ಖರೀದಿಯಲ್ಲಿ ಅಕ್ರಮವೆಸಗಿರುವುದು ನಿಜವೇ ಆಗಿದ್ದರೆ, ಅದು ಆಡಳಿತ ಪಕ್ಷದ ನೈತಿಕತೆಯೇ ಇಲ್ಲದ, ಮನುಷ್ಯತ್ವ ಹೀನ ಕೃತ್ಯವೇ ಸರಿ. ಕೇವಲ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹಳೇ ರಾಷ್ಟ್ರೀಯ ಪಕ್ಷ ಮತ್ತು ಅದರ ನಾಯಕರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ ಅದು ಆ ನಾಯಕರ ರಾಜಕೀಯ ದಾಹದ ಪ್ರತೀಕ" ಕುಮಾರಸ್ವಾಮಿಯ ಟ್ವೀಟ್.
"ಹಳೇ ಪಕ್ಷ ಮತ್ತು ಆಡಳಿತಾರೂಢ ಪಕ್ಷಗಳು ಮೊದಲು ಕೆಸರೆರಚಾಟ ನಿಲ್ಲಿಸಬೇಕು. ನಮ್ಮ ಆದ್ಯತೆ ಜನರ ಜೀವ ಮತ್ತು ಜೀವನವಾಗಬೇಕು. ಮುಖ್ಯಮಂತ್ರಿ ಈ ಬಗ್ಗೆ ಸೂಕ್ತ ಸ್ಪಷ್ಟನೆ ನೀಡಿ, ಪರಿಣಾಮಕಾರಿಯಾಗಿ ಕೋವಿಡ್ ಅನ್ನು ನಿಗ್ರಹಿಸುವತ್ತ ಗಮನಹರಿಸಬೇಕು. ಕೋವಿಡ್ ನಿಗ್ರಹಿಸುವುದಕ್ಕೆ ನಮ್ಮ ಬೆಂಬಲ. ನಿಮ್ಮ ಕ್ಷುಲ್ಲಕ ನಡವಳಿಕೆಗಳಿಗಲ್ಲ" ಹೀಗೆ ಕುಮಾರಸ್ವಾಮಿ, ಆಡಳಿತ ಮತ್ತು ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications