ಕೋವಿಡ್ ಭ್ರಷ್ಟಾಚಾರ; ಬಿಜೆಪಿ ಆಡಳಿತದಲ್ಲಿ 1 ಸಾವಿರ ಕೋಟಿಗೂ ಹೆಚ್ಚು ಲೂಟಿ?
ಬೆಂಗಳೂರು, ಸೆಪ್ಟೆಂಬರ್ 06: ಬಿಜೆಪಿ ಅಧಿಕಾರದಲ್ಲಿದ್ದಾಗ ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ನೂರಾರು ಕೋಟಿ ದುರ್ಬಳಕೆಯಾಗಿರುವುದನ್ನು ಪತ್ತೆ ಹಚ್ಚಲು, ಕೋವಿಡ್-19 ಅಕ್ರಮಗಳ ಕುರಿತು ನ್ಯಾಯಾಂಗ ತನಿಖಾ ವರದಿ ಅಧ್ಯಯನಕ್ಕೆ ಉನ್ನತ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ರಾಜ್ಯ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ.
ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ನೇತೃತ್ವದ ಆಯೋಗವು 1,722 ಪುಟಗಳ ಮಧ್ಯಂತರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗಸ್ಟ್ 31 ರಂದು ಸಲ್ಲಿಸಿತು. ವಿಚಾರಣೆ ಪೂರ್ಣಗೊಳಿಸಲು ಆಯೋಗಕ್ಕೆ ಆರು ತಿಂಗಳ ಕಾಲಾವಕಾಶ ನೀಡಲಾಗಿದೆ.

ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ವೈದ್ಯಕೀಯ ಪರಿಕರಗಳ ಖರೀದಿ, ವಿತರಣೆ ಮತ್ತು ಬಳಕೆ ವಿಷಯಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಶ್ರೀ ಮೈಕೆಲ್ ಡಿ. ಕುನ್ಹಾ ನೇತೃತ್ವದ ನ್ಯಾಯಾಂಗ ಆಯೋಗ ಒಂದು ವರದಿಯನ್ನು ಸಲ್ಲಿಸಿದ್ದು, ವರದಿಯನ್ನು ವಿಶ್ಲೇಷಿಸಿ ಅಧ್ಯಯನ ಮಾಡಿ ಮುಂದಿನ ಕ್ರಮಗಳ ಬಗ್ಗೆ ಅಗತ್ಯದ ಶಿಫಾರಸ್ಸುಗಳನ್ನು ಮಾಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಹಾಗೂ ಮುಖ್ಯ ಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಎಲ್.ಕೆ ಅತೀಕ್ ಅವರನ್ನೊಳಗೊಂಡ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ ಎಂದು ಕಾನೂನು, ನ್ಯಾಯ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ ಇಂದಿಲ್ಲಿ ಪ್ರಕಟಿಸಿದರು.
ಕೋವಿಡ್ ಚಿಕಿತ್ಸೆಯ ಸಂದರ್ಭದಲ್ಲಿ ನೂರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ನ್ಯಾಯಾಂಗ ಆಯೋಗ ವರದಿ ಸಲ್ಲಿಸಿದೆ ಎಂದು ತಿಳಿಸಿದರು. ತಾವು ಮತ್ತು ಶ್ರೀ ರಾಮಲಿಂಗಾ ರೆಡ್ಡಿಯವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೋವಿಡ್ ಭ್ರಷ್ಟಾಚಾರದ ಕುರಿತು ವಿವರವಾದ ವರದಿಯನ್ನು ವಿಧಾನ ಮಂಡಲಕ್ಕೆ ಸಲ್ಲಿಸಲಾಗಿತ್ತು. ಆದರೆ ಬಿ.ಜೆ.ಪಿ. ಆಡಳಿತಾವಧಿಯಲ್ಲಿ ಅಂದಿನ ಸಭಾಧ್ಯಕ್ಷರು ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಲಿಲ್ಲ ಎಂದು ಪತ್ರಕರ್ತರ ಉತ್ತರವಾಗಿ ತಿಳಿಸಿದರು.
ಕೋವಿಡ್ ಪರಿಕರಗಳ ಖರೀದಿಯಲ್ಲಿ ಬಹು ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡಿತ್ತು. ಈ ವರದಿಯ ನಂತರ ಶ್ರೀ ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಧಾರದ ಮೇಲೆ ನ್ಯಾಯಾಂಗ ಆಯೋಗ ರಚನೆಯಾಗಿತ್ತು. ಈ ಆಯೋಗ 7 ಸಂಪುಟದಲ್ಲಿ ವರದಿ ಸಲ್ಲಿಸಿದೆ. ನೂರಾರು ಕೋಟಿ ರೂಪಾಯಿಗಳ ಭ್ರಷ್ಠಾಚಾರ, ಸರ್ಕಾರಿ ಕಡತಗಳ ಕಾಣೆಯಾಗುವಿಕೆ ಬಹು ಪ್ರಮುಖವಾದ ಅಂಶವಾಗಿದೆ ಎಂದು ಸಚಿವರು ವಿವರಿಸಿದರು.
ಮುಡಾ ಹಗರಣದ ನಂತರ ಕೋವಿಡ್ ಭ್ರಷ್ಟಾಚಾರವನ್ನು ಪ್ರಸ್ತಾಪಿಸುತತಿರುವುದು ಪ್ರತಿಕಾರದ ಕ್ರಮವಲ್ಲವೇ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮುಡಾ ಎಂಬ ಹೆಸರಿನ ಹಗರಣವಲ್ಲದಿದ್ದರೂ ಪ್ರಸ್ತಾಪವಾಗಿ ಕೇವಲ ಎರಡು ತಿಂಗಳು ಗತಿಸಿದೆ. ಆದರೆ ಕೊವೀಡ್ ಭ್ರಷ್ಟಾಚಾರ ಕುರಿತು ನ್ಯಾಯಾಂಗ ಆಯೋಗ ರಚನೆಯಾಗಿ ಒಂದು ವರ್ಷ ಕಳೆದಿದೆ. ಪ್ರತಿಕಾರದ ಕ್ರಮ ಎಲ್ಲಿಂದ ಬಂತ್ತು ಎಂದು ಮರು ಪ್ರಶ್ನೆ ಮಾಡಿದರು. ಕೊವೀಡ್ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ಆಯೋಗದ ವರದಿ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಚಾಮುಂಡಿ ಪ್ರಾಧಿಕಾರದ ಸಭೆ ನಡೆಸಿರುವುದು ನ್ಯಾಯಾಂಗ ನಿಂದನೆಯಲ್ಲ. ಸಭೆ ನಡೆದ ಸಂದರ್ಭದಲ್ಲಿ ಯಾವುದೇ ತಡೆಯಾಜ್ಞೆ ಇರಲಿಲ್ಲವೆಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಮಾಧ್ಯಮ ಪ್ರತಿನಿಧಿಗಳಿಗೆ ಇಂದಿಲ್ಲಿ ತಿಳಿಸಿದರು.
ಸಚಿವ ಸಂಪುಟದ ನಿರ್ಣಯಗಳನ್ನು ವಿವರಿಸಿದ ಸಚಿವರು ಶ್ರೀಮತಿ. ಪ್ರಮೋದಾ ದೇವಿ ಒಡೆಯರ್ ರವರು ತಡೆಯಾಜ್ಞೆ ಇದ್ದರೂ ಪ್ರಾಧಿಕಾರದ ಸಭೆ ನಡೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿರುವ ಆರೋಪ ಸರಿಯಲ್ಲ. ಇಂದು ಈ ರಿಟ್ ಅರ್ಜಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಸಭೆ ನಡೆದ ದಿನಾಂಕದಂದು ಯಾವುದೇ ತಡೆಯಾಜ್ಞೆ ಇರಲಿಲ್ಲವೆಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆಂದು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಶ್ರೀ ಎನ್. ದೇವದಾಸ ರವರು ಪತ್ರ ಮುಖೇನ ತಿಳಿಸಿರುವುದನ್ನು ತಾವು ಸಚಿವ ಸಂಪುಟದ ಸಭೆಯ ಗಮನಕ್ಕೆ ತಂದಿರುವುದಾಗಿ ಸಚಿವರು ವಿವರಿಸಿದರು.
ಚಾಮುಂಡಿ ಪ್ರಾಧಿಕಾರದ ಕಾನೂನು ಅಸ್ತಿತ್ವದಲ್ಲಿದ್ದು, ಈ ಕಾನೂನಿನ ಕಲಂಗಳನ್ನು ಜಾರಿಗೆ ತರಲು ಅಥವಾ ಅನುಷ್ಠಾನಗೊಳಿಸಲು ಯಾವುದೇ ನ್ಯಾಯಾಂಗದ ಅಡ್ಡಿಗಳಿಲ್ಲವೆಂದು ಅಡ್ವೋಕೇಟ್ ಜನರಲ್ ಕಛೇರಿಯಿಂದ ತಮಗೆ ಪತ್ರ ಕಳುಹಿಸಲಾಗಿದೆ ಎಂದು ಸಚಿವರು ವಿವರಿಸಿದರು.












Click it and Unblock the Notifications