ಕರ್ನಾಟಕದಲ್ಲಿ ಕೊರೊನಾವೈರಸ್ ಪಾಸಿಟಿವಿಟಿ ದರ ಇಳಿಕೆ; ಸಚಿವ ಸುಧಾಕರ್
ಬೆಂಗಳೂರು, ಜನವರಿ 31: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಪಾಸಿಟಿವಿಟಿ ಕ್ರಮೇಣ ಇಳಿಕೆಯಾಗುತ್ತಿದೆ. ಅದಾಗ್ಯೂ, ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಎಚ್ಚರದಿಂದ ಪಾಲಿಸಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಲಿಕಾನ್ ಸಿಟಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಕೊವಿಡ್-19 ಪ್ರಕರಣ ಸಂಖ್ಯೆ ಇಳಿಕೆಯಾಗಿದೆ ಎಂದರು. ಬೆಂಗಳೂರು ಹೊರತಾಗಿ ಬೇರೆ ಜಿಲ್ಲೆಗಳಲ್ಲಿ ಕೂಡ ಪಾಸಿಟಿವಿಟಿ ದರ ಕ್ರಮೇಣ ಇಳಿಕೆಯಾಗುತ್ತಿದೆ. ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕೊವಿಡ್ ಪಾಸಿಟಿವಿಟಿ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಕೊವಿಡ್-19 ಪಾಸಿಟಿವಿಟಿ ದರದ ಏರಿಳಿತದ ಹೊರತಾಗಿಯೂ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ. 2 ರಿಂದ 3ರಷ್ಟಿದೆ. ಇದರ ಜೊತೆಗೆ ಮರಣ ಪ್ರಮಾಣ ಶೇ. 0.05ರಷ್ಟಿರುವುದು ಸದ್ಯಕ್ಕೆ ಸಮಾಧಾನಕರ ಸಂಗತಿಯಾಗಿದೆ. ಆದರೂ ರಾಜ್ಯದಲ್ಲಿ ಕೊವಿಡ್-19 ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕಿದೆ. ಬೇರೆ ರಾಷ್ಟ್ರಗಳು ಮತ್ತು ರಾಜ್ಯಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

ಕೊವಿಜ್-19 ಲಸಿಕೆ ವಿತರಣೆಯಲ್ಲಿ ರಾಜ್ಯವೇ ಟಾಪ್-01:
ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ದೊಡ್ಡ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ರಾಜ್ಯದಲ್ಲಿ ಶೇ.100ರಷ್ಟು ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು ಶೇ.87ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ತಪಾಸಣೆ ವೇಗ ಹೆಚ್ಚಳ:
ಕರ್ನಾಟಕದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯಲ್ಲಿ ಮತ್ತೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ರಾಜ್ಯದಲ್ಲಿ ನಿತ್ಯ 2.5 ಲಕ್ಷಕ್ಕೂ ಹೆಚತ್ಚು ಜನರಿಗೆ ಕೊರೊನಾವೈರಸ್ ಸೋಂಕಿನ ಪರೀಕ್ಷೆ ಮಾಡಲಾಗುತ್ತಿದೆ. ಪಾಸಿಟಿವಿಟಿ ದರ ಶೇ.32ರಷ್ಟಿದ್ದರೂ, ಅದು ಇಳಿಕೆಯಾಗುತ್ತಿದೆ.
ಹೊಸ ರೂಪಾಂತರಿ ಒಮಿಕ್ರಾನ್ ಸೋಂಕು ತೀವ್ರವಾಗಿ ಬಾಧಿಸುತ್ತಿಲ್ಲ. ಆದರೆ ಇದು ವೇಗವಾಗಿ ಹರಡುವ ಲಕ್ಷಣ ಹೊಂದಿದೆ. ಈ ಓಮಿಕ್ರಾನ್ ರೂಪಾಂತರಿಯಿಂದಾಗಿ ಏನಾದರೂ ಬದಲಾವಣೆ ಆಗಲಿದೆಯೇ ಎಂದು ಗಮನಿಸಬೇಕಿದೆ. ಚಿತ್ರಮಂದಿರಗಳು ಮುಚ್ಚಿದ ಸ್ಥಳವಾಗಿದ್ದು, ಬೇರೆ ಉದ್ಯಮಕ್ಕಿಂತ ಭಿನ್ನವಾಗಿದೆ. ಚಿತ್ರ ಮಂದಿರಗಳಿಗೆ ವಿಧಿಸಿದ ನಿರ್ಬಂಧಗಳ ಸಡಿಲಿಕೆ ಕುರಿತು ಮುಖ್ಯಮಂತ್ರಿಗಳ ಬಸವರಾಜ ಬೊಮ್ಮಾಯಿಯವರು ಚರ್ಚಿಸಿ ತೀರ್ಮಾನ ಕೈಗೊಳ್ಳಬಹುದು ಎಂದು ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಕೊರೊನಾವೈರಸ್ ಸಂಖ್ಯೆ:
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 24,172 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಕೊವಿಡ್-19 ಪಾಸಿಟಿವಿಟಿ ದರ ಶೇ.17.11ರಷ್ಟಾಗಿದ್ದು, ಸಾವಿನ ಪ್ರಮಾಣ ಶೇ.0.23ರಷ್ಟಿದೆ. ಇದೇ ಅವಧಿಯಲ್ಲಿ 56 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದು, 30,869 ಸೋಂಕಿತರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈವರೆಗೂ 38,09,467 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಇದುವರೆಗೂ 38,998 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಸೋಂಕು ತಗುಲಿದ 35,26,108 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ ಇನ್ನೂ 2,44,331 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications