ಬೇಲೆಕೇರಿ ಪ್ರಕರಣ : ಶಾಸಕರ ವಿರುದ್ಧದ ಜಾಮೀನು ರಹಿತ ವಾರೆಂಟ್ ವಾಪಸ್
ಬೆಂಗಳೂರು, ಅಕ್ಟೋಬರ್ 04 : ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮತ್ತು ಬಳ್ಳಾರಿ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರೆಂಟ್ ಅನ್ನು ನ್ಯಾಯಾಲಯ ವಾಪಸ್ ಪಡೆದಿದೆ.
ಗುರುವಾರ ಇಬ್ಬರೂ ಶಾಸಕರು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 12ಕ್ಕೆ ಮುಂದಿನ ವಿಚಾರಣೆ ಮುಂದೂಡಿದೆ.
ವಿಚಾರಣೆಗೆ ಸತತವಾಗಿ ಶಾಸಕರು ಗೈರು ಹಾಜರಾಗಿದ್ದರಿಂದ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಆದರೆ, ಇಂದು ಶಾಸಕರು ವಿಚಾರಣೆಗೆ ಹಾಜರಾಗಿದ್ದರಿಂದ, ಕೋರ್ಟ್ ಜಾಮೀನು ರಹಿತ ವಾರೆಂಟ್‌ಅನ್ನು ರದ್ದುಗೊಳಿಸಿತು.

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಇಬ್ಬರು ಶಾಸಕರು ಆರೋಪಿಗಳಾಗಿದ್ದಾರೆ. ಪ್ರಕರಣದಲ್ಲಿ ಇಬ್ಬರೂ ಜೈಲು ವಾಸ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಪ್ರಕರಣದಲ್ಲಿ ತಮ್ಮ ಹೆಸರನ್ನು ಕೈಬಿಡುವಂತೆ ಶಾಸಕರು ಮನವಿ ಮಾಡಿದ್ದರು.
ಕಳೆದ ಮೂರು ಬಾರಿ ಶಾಸಕರಿಬ್ಬರು ಸತತವಾಗಿ ವಿಚಾರಣೆಗೆ ಗೈರು ಹಾಜರಾಗಿದ್ದರು. ಆದ್ದರಿಂದ, ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಶಾಸಕ ಆನಂದ್ ಸಿಂಗ್ ಸಂಬಂಧಿ ಶ್ಯಾಮರಾಜ್ ಸಿಂಗ್ ಸಹ ಆರೋಪಿಯಾಗಿದ್ದಾರೆ.












Click it and Unblock the Notifications