ಭ್ರಷ್ಟಾಚಾರ,ಲಂಚ ತೆಗೆದುಕೊಳ್ಳುವುದು ಬಿಜೆಪಿ ಸರ್ಕಾರದ ಕಾರ್ಯಕ್ರಮ: ಬಿ.ಕೆ ಹರಿಪ್ರಸಾದ್
ಬೆಂಗಳೂರು, ನವೆಂಬರ್8: ಭ್ರಷ್ಟಾಚಾರ, ಲಂಚ ತೆಗೆದುಕೊಳ್ಳುವುದು ಬಿಜೆಪಿ ಸರ್ಕಾರದ ಕಾರ್ಯಕ್ರಮವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರದಲ್ಲಿ ಸಚಿವರುಗಳು ನೇರವಾಗಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅಧಿಕಾರಿಗಳು ಸಚಿವರುಗಳಿಗೆ ಲಂಚ ನೀಡಬೇಕೆಂದು ಗಂಭೀರವಾಗಿ ಆರೋಪ ಮಾಡಿರುವ ಆಡಿಯೋಗಳು ವೈರಲ್ ಆಗುತ್ತಿದೆ. 15 ಲಕ್ಷ ಸಚಿವ ಭೈರತಿ ಬಸವರಾಜ್ ಅವರಿಗೆ ನೀಡಬೇಕೆಂದು ಅಧಿಕಾರಿಗಳು ಹೇಳಿರುವುದು ಹೊಸದೇನಲ್ಲ. ಭ್ರಷ್ಟಾಚಾರ ನಡೆಸುವುದು ಬಿಜೆಪಿಗೆ ಕಾನೂನು ಬಾಹಿರ ಅಂಶವೇ ಅಲ್ಲ. 40% ಕಮಿಷನ್ ತಗೆದುಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರ, ವರ್ಗಾವಣೆಯಲ್ಲಿ ಲಂಚ, ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕಿಡಿಕಾರಿದರು.
ಸತೀಶ್ ಜಾರಕಿಹೊಳಿ ಕೂಡ ಒಬ್ಬ ಹಿಂದುನೇ
ಹಿಂದು ಶಬ್ದದ ಅರ್ಥ ಅಶ್ಲೀಲವಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ವೈಯಕ್ತಿಕವಾಗಿ ಮಾತನಾಡುವ ಹಕ್ಕಿದೆ. ಸತೀಶ್ ಜಾರಕಿಹೊಳಿ ಅವರು ಬುದ್ದ, ಬಸವ, ಅಂಬೇಡ್ಕರ್ ವಿಚಾರಗಳಿಂದ ರಾಜಕೀಯ ಪ್ರಾರಂಭ ಮಾಡಿದವರು. ಹಿಂದೂ ಪದದ ಹೇಳಿಕೆ ಅವರ ವೈಯಕ್ತಿಕವಾದದ್ದು. ಮಾನವ ಬಂಧುತ್ವ ವೇದಿಕೆಯ ಮೂಲಕ ಮೌಡ್ಯಾಚರಣೆ ವಿರುದ್ಧ ಜಾಗೃತಿ ನಡೆಸುತ್ತಿದ್ದಾರೆ. ವೈಚಾರಿಕ ವಿಷಯಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಸತೀಶ್ ಜಾರಕಿಹೊಳಿಯವರ ರಾಜಕೀಯ ಹಿನ್ನೆಲೆ ಗೊತ್ತಿದೆ. ಅಲ್ಲಿನ ಜನರಿಗೆ ಅದು ವಿವಾದ ಅಂತಾ ಭಾವಿಸುವುದಿಲ್ಲ. ಹೇಳಿಕೆಯಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸತೀಶ್ ಜಾರಕಿಹೊಳಿ ಕೂಡ ಒಬ್ಬ ಹಿಂದೂ. ಹಿಂದೂ ಧರ್ಮದ ಒಳಗೆ ಇರುವ ಅಸಮಾನತೆಗಳ ಬಗ್ಗೆ ಅವರು ಬಂಧುತ್ವ ವೇದಿಕೆಯಲ್ಲಿ ಮಾತ್ನಾಡಿದ್ದಾರೆ. ಅದನ್ನ ಅನಗತ್ಯ ವಿವಾದ ಮಾಡಬಾರದು.
ನಾನು ಸ್ವಾಭಿಮಾನಿ ಹಿಂದು ಎಂದು ಬಿಜೆಪಿ ಅಭಿಮಾನ ಆರಂಭಿಸಿರುವ ವಿಚಾರವಾಗಿ ಮಾತನಾಡಿ, ನಾನು ಸ್ವಾಭಿಮಾನಿ ಹಿಂದು ಎಂದು ಬಿಜೆಪಿಯವರು ಪ್ರಚಾರ ಮಾಡುತ್ತಿರಬಹುದು. ಆದರೆ ಬಿಜೆಪಿಯ ಹಿಂದುತ್ವವಾದಿಗಳಿಗೂ ಹಿಂದೂ ಧರ್ಮಕ್ಕೂ ಸಂಬಂಧವೇ ಇಲ್ಲ. ಸಾವರ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಸಂಬಂಧವೇ ಇಲ್ಲ ಎಂದು. ಬಿಜೆಪಿಯ ನಾಯಕಿ ದಿ. ಸುಷ್ಮಾ ಸ್ವರಾಜ್ ಅವರೇ ಹೇಳಿದ್ದಾರೆ ಚುನಾವಣಾ ಭಾಷಣದಲ್ಲಿ, ರಾಮಮಂದಿರ ಚುನಾವಣಾ ವಿಷಯವೇ ಹೊರತು ಹಿಂದೂ ಧರ್ಮದ್ದಲ್ಲ ಎಂದು. ಹಿಂದೂ ಧರ್ಮ ಬಿಜೆಪಿಯ ಗುತ್ತಿಗೆಯಲ್ಲ, ಬಿಜೆಪಿಯವರು ಹಿಂದೂ ಧರ್ಮದ ಬಗ್ಗೆ ಮಾತ್ನಾಡದೆ ಇರುವುದೇ ಒಳ್ಳೆಯದು ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಅಧ್ಯಕ್ಷರಾದ ಮೇಲೆ ಕೇವಲ ಕರ್ನಾಟಕಕ್ಕೆ ಮಾತ್ರ ಶಕ್ತಿಯಲ್ಲ, ಇಡೀ ದೇಶಕ್ಕೆ ಶಕ್ತಿ. ಎಐಸಿಸಿ ಅಧ್ಯಕ್ಷರಿಗಿರುವ ಶಕ್ತಿಯೇ ಬೇರೆ. ನಮ್ಮಲ್ಲಿ ಯಾವ ಪವರ್ ಪಾಯಿಂಟ್ ಇಲ್ಲ, ಕೇವಲ ಕಾಂಗ್ರೆಸ್ ಪವರ್ ಪಾಯಿಂಟ್ ಮಾತ್ರ ಇದೆ. ಖರ್ಗೆ ಅವರಿಗೆ ಟಿಕೆಟ್ ಕೊಡಿ ಅಂತಾ ಆಕಾಂಕ್ಷಿಗಳು ಹೋಗುವುದರಲ್ಲಿ ತಪ್ಪೇನಿದೆ ಎಂದರು
ಬಿಜೆಪಿಯಲ್ಲಿ ಕೇಶವ ಕೃಪಕ್ಕೆ ಅರ್ಜಿ ಸಲ್ಲಿಸಬೇಕು, ಆದ್ರೆ ಕಾಂಗ್ರೆಸ್ ಪಕ್ಷದಲ್ಲಿ ಒಂದು ಸಮಿತಿ ಇದೆ. ಆಂತರಿಕ ಪ್ರಜಾಪ್ರಭುತ್ವ ಇದೆ. ಬಿಜೆಪಿಯಲ್ಲಿ ನಳೀನ್ ಕುಮಾರ್ ಕಟೀಲ್‌ಗೆ ಅರ್ಜಿ ಸಲ್ಲಿಸಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳನ್ನು ಚುನಾವಣಾ ಸಮಿತಿ ತೀರ್ಮಾನ ಮಾಡಲಿದೆ. ಎಲ್ಲಾ ಹಂತದಲ್ಲೂ ಸಮಿತಿಗಳಿವೆ. ಕೆಪಿಸಿಸಿ ಅಧ್ಯಕ್ಷರು, ಸಿಎಲ್‌ಪಿ ನಾಯಕರು ಸೇರಿದಂತೆ ಹಿರಿಯ ನಾಯಕರು ಸಮಿತಿಯಲ್ಲಿ ಇರಲಿದ್ದಾರೆ. ವಲಸಿಗರು, ಪ್ರವಾಸಿಗರು ಯಾರೇ ಬಂದರು ಸ್ವಾಗತ ಇದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧರಾಗಿರುವವರಿಗೆ ಟಿಕೆಟ್ ಸಿಗಲಿದೆ.
ಮಲ್ಲಿಕಾರ್ಜುನ ಖರ್ಗೆ ಕೇವಲ ರಾಜ್ಯದ ನಾಯಕರು ಅಂತ ಸೀಮಿತ ಮಾಡಬೇಡಿ. ಖರ್ಗೆಯವರ ಭುಜ ಎಷ್ಟು ಅಗಲವಾಗಿದೆಯೋ ಅದಕ್ಕಿಂತ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಅದನ್ನ ಅವರು ನಿಭಾಯಿಸುತ್ತಾರೆ. ಸೋನಿಯಾ ಗಾಂಧಿ ಅವರನ್ನು, ರಾಹುಲ್ ಗಾಂಧಿ ಅವರನ್ನ ನಂಬಿ ಯಾರಾದ್ರು ಪಕ್ಷಕ್ಕೆ ಬರಬಹುದು ಎಂದರು.












Click it and Unblock the Notifications