ಲೋಕಾ ಹಗರಣ : ಅಶ್ವಿನ್ ರಾವ್ ವಿರುದ್ಧ ಮತ್ತೊಂದು ಚಾರ್ಜ್‌ಶೀಟ್
ಬೆಂಗಳೂರು, ಡಿಸೆಂಬರ್ 16 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಅಶ್ವಿನ್ ರಾವ್ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಶ್ರೀನಿವಾಸ್ ಅವರು ನೀಡಿದ ದೂರಿನ ತನಿಖೆ ನಡೆಸಿದ ಪೊಲೀಸರು ಬುಧವಾರ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ 1,250 ಪುಟಗಳ ಚಾರ್ಜ್‌ಶೀಟ್ ಅನ್ನು ಎಸ್‌ಐಟಿ ಅಧಿಕಾರಿಗಳು ಸಲ್ಲಿಕೆ ಮಾಡಿದ್ದು, ಈ ಪ್ರಕರಣದಲ್ಲಿ ವೈ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್, ಹೊಟ್ಟೆ ಕೃಷ್ಣ ಮತ್ತು ನರಹಿಂಹಮೂರ್ತಿ ಆರೋಪಿಗಳು ಎಂದು ಹೇಳಿದ್ದಾರೆ. [ಭಾಸ್ಕರರಾವ್ ರಾಜೀನಾಮೆ : ಯಾರು, ಏನು ಹೇಳಿದರು?]

ಲೋಕಾಯುಕ್ತದಲ್ಲಿ ನಡೆದ ಹಗರಣಗಳ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಶ್ರೀನಿವಾಸ್ ಎಂಬುವರು ನೀಡಿದ್ದ ದೂರಿನ ಆಧಾರದ ಮೇಲೆ ಅಶ್ವಿನ್ ರಾವ್, ಹೊಟ್ಟೆ ಕೃಷ್ಣ, ನರಸಿಂಹಮೂರ್ತಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದರು. ಸದ್ಯ, ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. [ಕರ್ನಾಟಕ ಲೋಕಾಯುಕ್ತ ಹಗರಣದ Timeline]
ಏನಿದು ದೂರು? : ಹೊಟ್ಟೆ ಕೃಷ್ಣ, ಅಶ್ವಿನ್ ರಾವ್ ಮತ್ತು ನರಸಿಂಹಮೂರ್ತಿ ಅವರು, ಜಮೀನು ವಿವಾದ ಇತ್ಯರ್ಥ ಮಾಡಿಕೊಡುವುದಾಗಿ ಹೇಳಿ 3 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ ಎಂದು ಬೆಂಗಳೂರು ಮೂಲದ ಶ್ರೀನಿವಾಸ್ ಅವರು ಎಸ್‌ಐಟಿಗೆ ದೂರು ನೀಡಿದ್ದರು. [ಉಪ ಲೋಕಾಯುಕ್ತ ಸುಭಾಷ್ ಅಡಿ ಪದಚ್ಯುತಿ?]
ಬಡಾವಣೆ ನಿರ್ಮಾಣಕ್ಕಾಗಿ ಶ್ರೀನಿವಾಸ್ ಅವರಿಗೆ ಸೇರಿದ್ದ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನ ಪಡಿಸಿಕೊಂಡಿತ್ತು. ಇದಕ್ಕೆ ನಗದು ಪರಿಹಾರ ನೀಡಿತ್ತು, ಆದರೆ, ಬದಲಿ ನಿವೇಶನ ಮಂಜೂರು ಮಾಡುವಲ್ಲಿ ವಿಳಂಬವಾಗಿತ್ತು. ಈ ಸಂಬಂಧ ವಿವಾದ ಉಂಟಾಗಿತ್ತು. ಆಗ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೊಟ್ಟೆಕೃಷ್ಣ 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ 3 ಲಕ್ಷ ರೂ. ಪಡೆದುಕೊಂಡಿದ್ದರು.
ಅಶ್ವಿನ್‌ರಾವ್ ಮೂಲಕ ಕೆಲಸ ಮಾಡಿಸಿಕೊಡುವುದಾಗಿ ಹೊಟ್ಟೆಕೃಷ್ಣ ಹೇಳಿದ್ದರು. ನಂತರ ನರಸಿಂಹಮೂರ್ತಿ, ಅಶ್ವಿನ್ ರಾವ್ ಎಲ್ಲರೂ ಸೇರಿ ಹಣವನ್ನು ವಾಪಸ್ ನೀಡದೆ, ಕೆಲಸವನ್ನು ಮಾಡಿಕೊಡದೆ ವಂಚಿಸಿದ್ದಾರೆ ಎಂದು ಶ್ರೀನಿವಾಸ್ ಅವರು ದೂರು ನೀಡಿದ್ದಾರೆ.












Click it and Unblock the Notifications