ಲೋಕಾಯುಕ್ತದಲ್ಲಿ ಭ್ರಷ್ಟಾಚಾರ : 5 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್
ಬೆಂಗಳೂರು, ಸೆಪ್ಟೆಂಬರ್, 16 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಐವರು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. 1,550 ಪುಟಗಳ ಚಾರ್ಜ್‌ಶೀಟ್‌ಅನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಬುಧವಾರ ಸಲ್ಲಿಸಲಾಗಿದೆ.
ವಿಶೇಷ ತನಿಖಾ ತಂಡದ (ಎಸ್‌ಐಟಿ)ಯ ಮುಖ್ಯ ತನಿಖಾಧಿಕಾರಿ ಲಾಬೂರಾಮ್ ಅವರು ನೃಪತುಂಗ ರಸ್ತೆಯಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಇಂದು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಲೋಕಾಯುಕ್ತ ಕಚೇರಿಯಲ್ಲಿಯೇ 1 ಕೋಟಿ ಲಂಚ ಕೇಳಲಾಯಿತು ಎಂದು ಇಂಜಿನಿಯರ್ ಕೃಷ್ಣಮೂರ್ತಿ ಅವರು ಸಲ್ಲಿಸಿರುದ ದೂರಿನಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ : ನಾಲ್ವರಿಗೆ ಜಾಮೀನು]

ಎಸ್‌ಐಟಿ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರಾವ್ ಪುತ್ರ ಅಶ್ವಿನ್ ರಾವ್, ಲೋಕಾಯುಕ್ತದ ಮಾಜಿ ಪಿಆರ್‌ಒ ಸೈಯದ್ ರಿಯಾಜ್, ಅಶೋಕ್ ಕುಮಾರ್, ಶ್ರೀನಿವಾಸ ಗೌಡ, ಶಂಕರೇಗೌಡ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ]
ಅಂದಹಾಗೆ ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಲೋಕಾಯುಕ್ತ ಮಾಜಿ ಪಿಆರ್‌ಒ ಸೈಯದ್ ರಿಯಾಜ್, ಶ್ರೀನಿವಾಸ ಗೌಡ, ಶಂಕರೇಗೌಡ, ಅಶೋಕ್ ಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ.
ಎಲ್ಲಾ ಆರೋಪಿಗಳನ್ನು ಸೆ.15ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶ ಹೊರಡಿಸಿತ್ತು. ಇಂದು ಅವರ ನ್ಯಾಯಾಂಗ ಬಂಧನ ಅವಧಿ ಮುಕ್ತಾಯಗೊಳ್ಳಲಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ.
11 ಆರೋಪಿಗಳ ಬಂಧನ : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 11 ಆರೋಪಿಗಳನ್ನು ಎಸ್‌ಐಟಿ ಬಂಧಿಸಿದೆ. ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್, ಎಚ್.ಎಸ್.ರಾಜಶೇಖರ್, ಸೈಯದ್ ರಿಯಾಜ್, ಅಶೋಕ್ ಕುಮಾರ್, ಶ್ರೀನಿವಾಸ ಗೌಡ, ಶಂಕರೇಗೌಡ, ವಿ. ಭಾಸ್ಕರ್, ಮೊಹಮ್ಮದ್ ಸಾದಿಕ್, ಎನ್. ನರಸಿಂಹಮೂರ್ತಿ, ನರಸಿಂಹರಾವ್, ಹೊಟ್ಟೆ ಕೃಷ್ಣ ಬಂಧಿತ ಆರೋಪಿಗಳು.












Click it and Unblock the Notifications