ಲೋಕಾಯುಕ್ತ ಹಗರಣ : ಆರೋಪಿಗಳಿಗೆ ಜಾಮೀನು ನೀಡದ ಸುಪ್ರೀಂಕೋರ್ಟ್
ಬೆಂಗಳೂರು, ನವೆಂಬರ್ 02 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಲೋಕಾಯುಕ್ತ ಮಾಜಿ ಪಿಆರ್‌ಒ ಸೈಯದ್ ರಿಯಾಜ್, ಶ್ರೀನಿವಾಸ ಗೌಡ, ಶಂಕರೇಗೌಡ, ಅಶೋಕ್ ಕುಮಾರ್ ಅವರು ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸೆ.16ರಂದು ಕೋರ್ಟ್ ಆರೋಪಿಗಳ ಅರ್ಜಿಯ ವಿಚಾರಣೆ ನಡೆಸಿ ಜಾಮೀನಿಗೆ ನವೆಂಬರ್ 2ರ ತನಕ ತಡೆಯಾಜ್ಞೆ ನೀಡಿತ್ತು. [ನಾಲ್ವರ ಜಾಮೀನಿಗೆ ಸುಪ್ರೀಂ ತಡೆ]

ಸೋಮವಾರ ಮುಖ್ಯನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆಯಿತು. ಈ ಸಂದರ್ಭದಲ್ಲಿ ಪ್ರಕರಣದ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ಆದ್ದರಿಂದ, ಜಾಮೀನು ನೀಡಲು ಬರುವುದಿಲ್ಲ. ಜಾಮೀನು ಕೋರಿ ಪದೇ ಪದೇ ಇಲ್ಲಿಗೆ ಬರಬೇಡಿ ಎಂದು ಆರೋಪಿಗಳ ಪರ ವಕೀಲರಿಗೆ ನ್ಯಾಯಮೂರ್ತಿಗಳು ಸೂಚನೆ ನೀಡಿದರು.[ಕರ್ನಾಟಕ ಲೋಕಾಯುಕ್ತರಿಗೆ ಮತ್ತೆ 45 ದಿನ ರಜೆ!]
ಆರೋಪಿಗಳ ಪರ ವಕೀಲರು ಪ್ರಕರಣದ ವಿಚಾರಣೆ ಮುಗಿದಿದೆ. ಚಾರ್ಚ್ ಶೀಟ್ ಸಹ ಹಾಕಲಾಗಿದೆ. ಆದ್ದರಿಂದ, ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಸುಪ್ರೀಂಕೋರ್ಟ್ ಸಹ ಆರೋಪಿಗಳ ಜಾಮೀನಿಗೆ ನೀಡಿರುವ ತಡೆಯನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡದರು. ಕೋರ್ಟ್ ಮನವಿಯನ್ನು ತಿರಸ್ಕರಿಸಿತು. [ಲೋಕಾಯುಕ್ತದ ಭ್ರಷ್ಟಾಚಾರದಲ್ಲಿ ಅಕ್ರಮ ಹಣ ವರ್ಗಾವಣೆ?]
ಸೆಪ್ಟೆಂಬರ್ 8ರಂದು ಲೋಕಾಯುಕ್ತ ಮಾಜಿ ಪಿಆರ್‌ಒ ಸೈಯದ್ ರಿಯಾಜ್, ಶ್ರೀನಿವಾಸ ಗೌಡ, ಶಂಕರೇಗೌಡ, ಅಶೋಕ್ ಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಎಸ್‌ಐಟಿ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು.
ಈ ಪ್ರಕರಣ ಗಂಭೀರ ಸ್ವರೂಪದಿಂದ ಕೂಡಿರುವುದರಿಂದ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು ಎಸ್‌ಐಟಿ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿತ್ತು. ಈ ಎಲ್ಲಾ ಆರೋಪಿಗಳು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.












Click it and Unblock the Notifications