ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಎಸ್‌ಐಟಿಯಿಂದ ಮೊದಲ ಬಂಧನ
ಬೆಂಗಳೂರು, ಜುಲೈ 22 : ಲೋಕಾಯುಕ್ತದಲ್ಲಿ ನಡೆದ ಲಂಚದ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಅಶೋಕ್ ಕುಮಾರ್ ಎಂಬುವವರನ್ನು ಬಂಧಿಸಿದೆ. ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಎಸ್‌ಐಟಿ ಮುಖ್ಯಸ್ಥ ಕಮಲ್ ಪಂತ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಸೋಮವಾರ ಸಂಜೆ ಅಶೋಕ್ ಕುಮಾರ್ (30) ಎಂಬುವವರನ್ನು ಬಂಧಿಸಿದ್ದಾರೆ. ಅಶೋಕ್ ಕುಮಾರ್ ಅಶ್ವಿನ್ ರಾವ್ ಅವರ ಆಪ್ತ ಸ್ನೇಹಿತರು ಎಂಬ ಮಾಹಿತಿ ಲಭ್ಯವಾಗಿದೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ]

ಅಶೋಕ್ ಕುಮಾರ್ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಸಂಜೆ ಹಾಜರುಪಡಿಸಲಾಗಿದ್ದು, 10 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಅಶೋಕ್ ಕುಮಾರ್ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ಪ್ರಮುಖ ಆರೋಪಿಯಾಗಿದ್ದಾನೆ. [SIT ತಂಡದಲ್ಲಿರುವ ಅಧಿಕಾರಿಗಳ ಪಟ್ಟಿ]
ಎರಡನೇ ಆರೋಪಿ : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ಆಂತರಿಕ ತನಿಖೆ ನಡೆಸಿದ್ದ ಎಸ್ಪಿ ಸೋನಿಯಾ ನಾರಂಗ್ ಅವರು ಅಶ್ವಿನ್ ರಾವ್ ಮೊದಲ ಆರೋಪಿ ಎಂದು ಎಫ್‌ಐಆರ್ ದಾಖಲಿಸಿದ್ದರು. ಎಸ್ಐಟಿ ಸಹ ಅಶ್ವಿನ್ ರಾವ್ ಮೊದಲ ಆರೋಪಿ, ಅಶೋಕ್ ಕುಮಾರ್ 2ನೇ ಆರೋಪಿ ಎಂದು ಪರಿಗಣಿಸಿ ತನಿಖೆ ಆರಂಭಿಸಿದೆ. [20 ಲಕ್ಷ ರೂ. ವಂಚನೆ ಮಾಡಿದ ಅಶ್ವಿನ್ ರಾವ್]
ಅಶೋಕ್ ಕುಮಾರ್ ಯಾರು? : ಅಶೋಕ್ ಕುಮಾರ್ ಮೂಲತಃ ಆಂಧ್ರಪ್ರದೇಶದ ವಾರಂಗಲ್ ನಿವಾಸಿಯಾಗಿದ್ದು, ಬೆಂಗಳೂರಿನ ರಾಜಾಜಿನಗರದಲ್ಲಿ ವಾಸಿಸುತ್ತಿದ್ದಾರೆ. ಮೊದಲು ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ನಂತರ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು.
ಆಂಧ್ರಪ್ರದೇಶದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವಾಗ ಅಶ್ವಿನ್‌ರಾವ್ ಪರಿಚಯವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಶ್ವಿನ್ ರಾವ್ ಮತ್ತು ಅಶೋಕ್ ಕುಮಾರ್ ನಡುವಿನ ಸಂಬಂಧದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಶ್ವಿನ್ ರಾವ್‌ಗೆ ನೋಟಿಸ್ : ಲೋಕಾಯುಕ್ತ ನ್ಯಾ.ವೈ.ಭಾಸ್ಕರಾವ್ ಪುತ್ರ ಅಶ್ವಿನ್ ರಾವ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್ ಜಾರಿಗೊಳಿಸಿದೆ. ಶನಿವಾರದೊಳಗೆ ಎಸ್‌ಐಟಿ ಮುಂದೆ ಹಾಜರಾಗಿ ಎಂದು ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.












Click it and Unblock the Notifications