ಭ್ರಷ್ಟಾಚಾರ ಪ್ರಕರಣ: ಇಂದು ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಿಚಾರಣೆ- ಬೇಲ್ ಸಿಗದಿದ್ದಲ್ಲಿ ಜೈಲೇ ಗತಿ
ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ಇಂದು ನಡೆಯಲಿದೆ.
ಬೆಂಗಳೂರು ಮಾರ್ಚ್ 7: ರಾಜ್ಯ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಿಂದ ಮುಕ್ತಿ ಕೋರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೋಮವಾರ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದು ಇಂದು(ಮಾರ್ಚ್ 7) ವಿಚಾರಣೆ ನಡೆಯಲಿದೆ.
ತುರ್ತು ಪರಿಸ್ಥಿತಿಯ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಸುವಂತೆ ಶಾಸಕರ ಪರ ವಕೀಲ ಸಂದೀಪ್ ಮನವಿ ಮಾಡಿದರು. ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೆ. ನಟರಾಜನ್ ನೇತೃತ್ವದ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ (ಮಾರ್ಚ್ 7) ಮುಂದೂಡಿತು.

ಒಂದು ವೇಳೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರೆ, ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಅವರ ಬಂಧನ ಖಚಿತವಾಗಲಿದೆ. ಈ ಬೆಳವಣಿಗೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಆಡಳಿತಾರೂಢ ಬಿಜೆಪಿ, ಅವರನ್ನು ಬಂಧಿಸಿದರೆ ಪಕ್ಷಕ್ಕೆ ಆಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತ ಟ್ರ್ಯಾಪ್ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಲಾಗಿದೆ. ಪ್ರಶಾಂತ್ ಮಾಡಾಳ್ ತನ್ನ ತಂದೆಯ ಪರವಾಗಿ ಪ್ರಸಿದ್ಧ 'ಮೈಸೂರು ಸ್ಯಾಂಡಲ್ ಸೋಪ್' ತಯಾರಿಸುವ ಸಾರ್ವಜನಿಕ ವಲಯದ ಕಂಪನಿಯಾದ ಕೆಎಸ್‌ಡಿಎಲ್‌ಗೆ ಕಚ್ಚಾ ಸಾಮಗ್ರಿಗಳನ್ನು ಖರೀದಿಸಲು ಟೆಂಡರ್ ಮಂಜೂರು ಮಾಡಲು 40 ಲಕ್ಷ ರೂಪಾಯಿ ನಗದು ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಪ್ರಕರಣದ A-1 ಆರೋಪಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಆಗಿದ್ದಾರೆ. ವಿರೂಪಾಕ್ಷಪ್ಪ ಪರ ಸುಪ್ರೀಂಕೋರ್ಟ್ ವಕೀಲ ಸಂದೀಪ್ ಪಾಟೀಲ್ ವಾದ ಮಾಡಸಲಿದ್ದಾರೆ. ಲೋಕಾಯುಕ್ತ ಪರ SPP ಬಿ.ಬಿ ಪಾಟೀಲ್ ಪ್ರತಿವಾದ ನಡೆಸಲಿದ್ದಾರೆ. ಈಗಾಗಲೇ ವಿರೂಪಾಕ್ಷಪ್ಪಗೆ CRPC -41(A)ರಡಿ ಲೋಕಾಯುಕ್ತ ನೋಟಿಸ್ ನೀಡಿದೆ. ವಿರೂಪಾಕ್ಷಪ್ಪಗೆ ಬೇಲ್ ನೀಡದಂತೆ ಪ್ರಬಲ ವಾದಕ್ಕೆ ಲೋಕಾಯುಕ್ತ ತಯಾರಿ ನಡೆಸಿದೆ. ಮಾಡಾಳ್ ಪರ ವಕೀಲರು ತುರ್ತು ವಿಚಾರಣೆ ನಡೆಸಲು ಅರ್ಜಿ ಸಲ್ಲಿಸಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪಗೆ 8.12 ಕೋಟಿ ಅಕ್ರಮ ಹಣ ಮುಳುವಾಗಲಿದೆ.
ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿದ್ದ ಶಾಸಕ ವಿರೂಪಾಕ್ಷಪ್ಪ ಅವರು ಘಟನೆಯ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರೋಪಿ ಬಿಜೆಪಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಮಾಡಾಳ್ ಅವರ ನಿವಾಸದಲ್ಲಿ ಅಧಿಕಾರಿಗಳು 8.12 ಕೋಟಿ ರೂಪಾಯಿ ಮತ್ತು 1.6 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಈ ವಿಚಾರವಾಗಿ ಕಾಂಗ್ರೆಸ್ ಪಕ್ಷ ಎರಡು ಗಂಟೆಗಳ ಬಂದ್ ಕರೆ ನೀಡಿದ್ದು, ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಟೆಂಡರ್‌ಗಳಲ್ಲಿ ಶೇ 40ರಷ್ಟು ಕಮಿಷನ್ ಮತ್ತು ಆಡಳಿತಾರೂಢ ಬಿಜೆಪಿ ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರದ ಆರೋಪಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಆಡಳಿತಾರೂಢ ಬಿಜೆಪಿ, ಲೋಕಾಯುಕ್ತ ಸಂಸ್ಥೆಯು ನಮ್ಮ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಹಗರಣಗಳನ್ನು ಮುಚ್ಚಿ ಹಾಕಲು ಅದನ್ನು ಮುಚ್ಚಿ ಹಾಕಿತ್ತು ಎಂದು ಸಮರ್ಥಿಸಿಕೊಂಡಿದೆ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಶಾಸಕರೊಬ್ಬರನ್ನು ಭ್ರಷ್ಟಾಚಾರದ ಆರೋಪ ಮತ್ತು ಟೆಂಡರ್ ಹಂಚಿಕೆಗೆ ಲಂಚ ಪಡೆದ ಪ್ರಕರಣದಲ್ಲಿ ಮೇಲೆ ಬಂಧಿಸಿದರೆ, ಅದು ವಿರೋಧ ಪಕ್ಷಗಳ ಕೈಗೆ ಪ್ರಬಲ ಅಸ್ತ್ರವಾಗಲಿದೆ ಎನ್ನಲಾಗಿದೆ.












Click it and Unblock the Notifications