ಕರ್ನಾಟಕ : 2013 ವರ್ಷದ ವಿವಾದಿತ ವ್ಯಕ್ತಿಗಳು
ವಿವಾದ ಎನ್ನುವುದು ಕೆಲವರನ್ನು ಬೇಡವೆಂದರೂ ಸುತ್ತಿಕೊಂಡು ಬರುತ್ತದೆ. ಕೆಲವರು ಸದಾ ಸುದ್ದಿಯಲ್ಲಿರಲು ವಿವಾದಕ್ಕೆ ಈಡಾಗುವ ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಾರೆ. ಪ್ರಚಾರಪ್ರಿಯರು ನೀಡುವ ವಿವಾದಾತ್ಮಕ ಹೇಳಿಕೆಗಳು ಪ್ರಜಾಸತ್ತಾತ್ಮಕ ಬುನಾದಿಗೆ ಸವಾಲು ಎಸೆಯುವ ಉದಾಹರಣೆಗಳನ್ನೂ ನಾವು ಕಂಡಿದ್ದೇವೆ.
ಧಾರ್ಮಿಕ ಮುಖಂಡರು, ರಾಜಕೀಯ ಪುಢಾರಿಗಳು, ಬುದ್ದಿವಾದಿಗಳು, ಸೆಲೆಬ್ರಿಟಿಗಳು, ವಾಣಿಜ್ಯೋದ್ಯಮಿಗಳು ಗೊತ್ತಿದ್ದೋ, ಗೊತ್ತಿಲ್ಲದೆಯೋ ವಿವಾದಕ್ಕೆ ಈಡಾಗುತ್ತಾರೆ.
ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲಾ ಹಳದಿ ಎನ್ನುವ ಹಾಗೆ ಕೆಲವರಂತೂ ವಸ್ತುನಿಷ್ಟ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಯಿಸಿಕೊಂಡು ವಿವಾದ ಸೃಷ್ಟಿ ಮಾಡುವವರಿಗೂ ಜಗತ್ತಿನಲ್ಲಿ ಬರವಿಲ್ಲ. (ಕರ್ನಾಟಕ ವರ್ಷದ ವ್ಯಕ್ತಿ 2013 : ನಿಮ್ಮ ಆಯ್ಕೆ)
ಸಾರ್ವಜನಿಕ ಜೀವನದಲ್ಲಿರುವುವರು ಸದಾ ಸುದ್ದಿಯಲ್ಲಿರುವುದು ಸಹಜ. ಆದರೆ ತಮ್ಮ ಗೊಂದಲಕಾರಿ ಹೇಳಿಕೆ ಮತ್ತು ನಡೆಗಳ ಮೂಲಕ ಸಮಾಜದಲ್ಲಿ ಗೊಂದಲ ಅಥವಾ ತೊಂದರೆ ಉಂಟು ಮಾಡುವವರನ್ನು ಒಪ್ಪಿಕೊಳ್ಳುವುದು ಕಷ್ಟ.
2013ರಲ್ಲಿ ಹಲವಾರು ಕಾರಣಗಳಿಂದ ವಿವಾದಲ್ಲಿದ್ದ ಆಯ್ದ ಕೆಲವರನ್ನು ಪಟ್ಟಿ ಮಾಡಿ, ಸ್ಲೈಡಿನಲ್ಲಿ ನೀಡಲಾಗಿದೆ. ಆದಾಗ್ಯೂ, ಯಾವುದಾದರೂ ವ್ಯಕ್ತಿಗಳ ಹೆಸರು ಸ್ಲೈಡಿನಲ್ಲಿ ಮಿಸ್ ಆಗಿದ್ದ ಪಕ್ಷದಲ್ಲಿ ನಮಗೆ ಕಾಮೆಂಟ್ ಕಾಲಮಿನ ಮೂಲಕ ತಿಳಿಸಲು ಕೋರುತ್ತಿದ್ದೇವೆ. 2013ರಲ್ಲಿ ಹೆಚ್ಚು ವಿವಾದ ಸೃಷ್ಟಿಸಿದ ವ್ಯಕ್ತಿ ಯಾರು? ವೋಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಸಂಭಾಜಿ ಪಾಟೀಲ್
ಕರವೇ ಅಧ್ಯಕ್ಷ ನಾರಾಯಣ ಗೌಡ್ರು ಹೇಳಿದಂತೆ ರಾಜ್ಯ ಅಸೆಂಬ್ಲಿಯ ಫಟಿಂಗ ಶಾಸಕ. ಕನ್ನಡಿಗರ ಮತ್ತು ಮರಾಠಿ ಭಾಷಿಗರ ನಡುವೆ ತಂದಿಕ್ಕುವುದನ್ನೇ ಕಾಯಕ ಮಾಡಿಕೊಂಡಿರುವ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್. ಇತ್ತೀಚೆಗೆ ಮುಕ್ತಾಯಗೊಂಡ ಅಸೆಂಬ್ಲಿಯ ಚಳಿಗಾಲದ ಅಧಿವೇಶನದಲ್ಲಿ ಮರಾಠಿ, ಹಿಂದಿ ಭಾಷೆಯಲ್ಲಿ ಮಾತನಾಡಿದ್ದಲ್ಲದೇ, ನಾವು ನಾಲ್ಕು ಜನರಿದ್ದರೆ ಕರ್ನಾಟಕದ ಶವಯಾತ್ರೆ ಮಾಡುತ್ತಿದ್ದೆವು ಎನ್ನುವ ಉದ್ದಟತನದ ಹೇಳಿಕೆ ನೀಡಿದ್ದರು.(ಕರ್ನಾಟಕದ ಶವಯಾತ್ರೆ ಮಾಡುತ್ತೇನೆಂದ ಭಂಡ ಸಂಭಾಜಿ)

ಯು ಆರ್ ಅನಂತಮೂರ್ತಿ
ಮೋದಿ ಪ್ರಧಾನಿಯಾದರೆ ನಾನು ಭಾರತದಲ್ಲಿರುವುದಿಲ್ಲ ಎನ್ನುವ ಹೇಳಿಕೆ ನೀಡಿ ಅನಂತಮೂರ್ತಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಅದಲ್ಲದೇ ವೇದಕಾಲದಲ್ಲಿ ಬ್ರಾಹ್ಮಣರು ಮಾಂಸ ಭಕ್ಷಕರಾಗಿದ್ದರು ಎಂದು ಹೇಳಿಕೆ ನೀಡಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದರು. ದೇಶ ಬಿಟ್ಟು ಹೋಗುವ ಮಾತನ್ನಾಡಿದ್ದ ಅನಂತಮೂರ್ತಿ ತದನಂತರ ಮೋದಿ ಪ್ರಧಾನಿಯಾದರೆ ನಾನು ಭಾರತವನ್ನಲ್ಲ ಕರ್ನಾಟಕವನ್ನೂ ಬಿಟ್ಟು ಹೋಗುವುದಿಲ್ಲ ಎಂದು ಉಲ್ಟಾ ಹೊಡೆದಿದ್ದರು. (ಮೋದಿಯ ಭಾರತದಲ್ಲಿ ನಾನಿರೋಲ್ಲ : ಅನಂತಮೂರ್ತಿ)

ಯೋಗೇಶ್ ಮಾಸ್ಟರ್
ಲೇಖಕ ಯೋಗೇಶ್ ಮಾಸ್ಟರ್ ಅವರು ತನ್ನ 'ಢುಂಢಿ - ಅರಣ್ಯಕನೊಬ್ಬ ಗಣಪತಿಯಾದ ಕಥೆ' ಎನ್ನುವ ಪುಸ್ತಕದಲ್ಲಿ ಗಣೇಶ ಒಬ್ಬ ಅನಾರ್ಯ, ರುದ್ರನ ಲೈಂಗಿಕ ಶಕ್ತಿಯ ಬಗ್ಗೆ ಪಾರ್ವತಿಗೆ ಅಸಮಾಧಾನವಿತ್ತು ಎಂದು ಪುಸ್ತಕದಲ್ಲಿ ಅವಹೇಳನ ಮಾಡಿದ್ದರು ಎಂದು ಹಿಂದೂ ಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಹಿಂದೂ ಸಭಾದವರು ನೀಡಿದ್ದ ದೂರಿನನ್ವಯ ಯೋಗೇಶ್ ಮಾಸ್ಟರ್ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. (ವಿಘ್ನ ನಿವಾರಕ ಗಣೇಶ ಒಬ್ಬ ಅನಾರ್ಯ: ಭಾರೀ ಆಕ್ರೋಶ)ಯಾರು ಈ ಯೋಗೇಶ್ ಮಾಸ್ಟರ್

ಮಂಡ್ಯ ಜೆಡಿಎಸ್ ಶ್ರೀನಿವಾಸ್
ಜೆಡಿಎಸ್ ಪಕ್ಷದ ಚೆಲುವರಾಯಸ್ವಾಮಿ ಶಾಸಕರಾಗಿ ಆಯ್ಕೆಯಾದ ನಂತರ ತೆರವಾದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ನಡುವೆ ಆರೋಪ/ಪ್ರತ್ಯಾರೋಪಗಳು ತಾರಕಕ್ಕೇರಿದ್ದವು. ಕಾಂಗ್ರೆಸ್ ಅಭ್ಯರ್ಥಿ ನಟಿ ರಮ್ಯಾ ಅವರನ್ನು ಜೆಡಿಎಸ್ ಮುಖಂಡ ಶ್ರೀನಿವಾಸ್ ' ರಮ್ಯಾಗೆ ತಂದೆ ಯಾರೆಂದು ಗೊತ್ತಿಲ್ಲ, ಆಕೆ ಪ್ರನಾಳ ಶಿಶು' ಎಂದು ಹೇಳಿಕೆ ನೀಡಿದ್ದರು. ಎಂ ಶ್ರೀನಿವಾಸ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಅವರು ಕ್ಷಮೆಯಾಚಿಸಿದ್ದರು. (ರಮ್ಯಾಗೆ ತನ್ನ ತಂದೆ ಯಾರೆಂದು ಗೊತ್ತಿಲ್ಲ : ಶ್ರೀನಿವಾಸ್)

ಶ್ರೀನಿವಾಸ ರಾಜು
ದಂಡುಪಾಳ್ಯ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ನಿರ್ದೇಶಿಸುತ್ತಿರುವ ಮತ್ತೊಂದು ಚಿತ್ರ ಬಸವಣ್ಣ. ಉಪೇಂದ್ರ ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ಟೈಟಲ್ ಭಾರೀ ವಿವಾದಕ್ಕೆ ಗುರಿಯಾಗಿತ್ತು. ಯಡಿಯೂರಪ್ಪನವರಿಂದ ಹಿಡಿದು ಎಲ್ಲಾ ಬಸವ ಭಕ್ತರು ಚಿತ್ರದ ಶೀರ್ಷಿಕೆಗೆ ವಿರೋಧ ವ್ಯಕ್ತ ಪಡಿಸಿದ್ದರು. ತದನಂತರ ಚಿತ್ರದ ಶೀರ್ಷಿಕೆಯನ್ನು ಬ್ರಾಹ್ಮಣ ಎಂದು ಬದಲಾಯಿಸಲಾಗಿದೆ ಎಂದು ಹೇಳಿಕೆ ನೀಡಿ ನಿರ್ದೇಶಕರ ಮತ್ತೊಂದು ಸಮುದಾಯದ ಕೋಪಕ್ಕೆ ಗುರಿಯಾಗಿದ್ದರು. ತದನಂತರ ಟೈಟಲ್ ಇಲ್ಲದೆಯೇ ಚಿತ್ರ ಬಿಡುಗಡೆ ಮಾಡುವ ನಿರ್ಧಾರಕ್ಕೆ ನಿರ್ದೇಶಕರು ಬಂದಿದ್ದರು. (ಬಸವಣ್ಣ ಶೀರ್ಷಿಕೆ ವಿರುದ್ಧ ಸಿಡಿದೆದ್ದ ಬಸವ ಭಕ್ತರು)

ಪೇಜಾವರ ಶ್ರೀಗಳು
ದೇಶದ ಪ್ರಮುಖ ಮಾಧ್ವ ಮಠಾಧೀಶರಾದ ಉಡುಪಿ ಪೇಜಾವರ ಶ್ರೀಗಳು, ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ದ ಎನ್ನುವ ಹೇಳಿಕೆ ನೀಡಿ, ನಾಡಿನ ಇತರ ಧಾರ್ಮಿಕ ಮುಖಂಡರ ಸಿಟ್ಟಿಗೆ ಗುರಿಯಾಗಿದ್ದರು. (ಕುರುಬರಿಗೂ ವೈಷ್ಣವ ದೀಕ್ಷೆ: ಪೇಜಾವರ ಶ್ರೀ)

ರಂಭಾಪುರಿ ಶ್ರೀಗಳು
ದಸರಾ ಸಮಯದಲ್ಲಿ ನಡೆಯುವ ರಂಭಾಪುರಿ ಶ್ರೀಗಳ ಅಡ್ದಪಲ್ಲಕ್ಕಿ ಉತ್ಸವ ಈ ಬಾರಿ ಭಾರೀ ವಿವಾದಕ್ಕೆ ಒಳಗಾಗಿತ್ತು. ನಿಡುಮಾಮಿಡಿ ಶ್ರೀಗಳು ಸೇರಿದಂತೆ, ಹಲವು ವೀರಶೈವ ಮಠಾಧೀಶರೂ ಅಡ್ಡಪಲ್ಲಕ್ಕಿ ಉತ್ಸವಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು. ವಿರೋಧದ ನಡುವೆಯೂ ಶ್ರೀಗಳ ಉತ್ಸವ ಸಾಂಗವಾಗಿ ನೆರವೇರಿತ್ತು. (ರಂಭಾಪುರಿ ಅಡ್ಡಪಲ್ಲಕ್ಕಿ ಉತ್ಸವ ವಿವಾದ ಅಂತ್ಯ)

ಜಿ ಪರಮೇಶ್ವರ್
ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರು ಬಹಿರಂಗ ಸಭೆಯಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಕ್ಯಾನ್ಸರ್ ಮತ್ತು ಏಡ್ಸ್ ತಗುಲಿದೆ. ಸದ್ಯದಲ್ಲೇ ಸರಕಾರ ನಶಿಸಿ ಹೋಗಲಿದೆ ಎಂದು ಹೇಳಿದ್ದರು. ಅವರ ಹೇಳಿಕೆ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ತದನಂತರ ಪರಮೇಶ್ವರ್ ತಾನು ನೀಡಿದ್ದ ಹೇಳಿಕೆಯನ್ನು ಹಿಂದಕ್ಕೆ ಪಡೆದರು. (ಜಗದೀಶ್ ಶೆಟ್ಟರ್ ಗೆ ಕ್ಯಾನ್ಸರ್, ಏಡ್ಸ್ ಬಂದಿದೆ)

ಜನಾರ್ಧನ ಪೂಜಾರಿ
ಕಾಂಗ್ರೆಸ್ಸಿನ ಹಿರಿಯ ಮುಖಂಡ ಪೂಜಾರಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತನ್ನ ವೈವಾಹಿಕ ಬದುಕನ್ನು ಮರೆಮಾಚುತ್ತಿದ್ದಾರೆ. ಸುಳ್ಳಿನ ಕಂತೆಯ ಮೇಲೆ ರಾಜ್ಯಭಾರ ನಡೆಸುತ್ತಿದ್ದಾರೆ. ಮೊದಲು ಮೋದಿ ತನ್ನ ಪತ್ನಿಯ ಬಗ್ಗಿನ ವಿವರವನ್ನು ದೇಶದ ಮುಂದಿಡಲಿ, ಇಲ್ಲದಿದ್ದರೆ ನಾವೇ ಬಹಿರಂಗ ಪಡಿಸುತ್ತೇವೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಈಡಾಗಿದ್ದರು. (ನರೇಂದ್ರ ಮೋದಿ ಸುಮ್ಮನಿದ್ದರೆ ಸರಿ, ಇಲ್ಲಾಂದ್ರೆ ಕಥೆನೇ ಬೇರೆ)

ಮದನ್ ಪಟೇಲ್
ಇವರ ನಿರ್ಮಾಣದ ಸತ್ಯಾನಂದ ಟೈಟಲ್ ವಿವಾದ ಭಾರೀ ವಿವಾದಕ್ಕೆ ಈಡಾಗಿತ್ತು. ಸೆನ್ಸಾರ್ ಮಂಡಳಿಯವರು ಲಂಚ ತೆಗೆದು ಕೊಳ್ಳುತ್ತಾರೆಂದೂ ಮದನ್ ಆರೋಪಿಸಿದ್ದರು. ತದನಂತರ ಚಿತ್ರದ ಹೆಸರನ್ನು ಯಾರಿವನು ಎಂದು ಬದಲಾಯಿಸಿದ್ದರು. ಇದಲ್ಲದೇ, ಕೆಜೆಪಿ ಪಕ್ಷದಲ್ಲಿ ತೊಡಗಿಸಿ ಕೊಂಡಿದ್ದ ಮದನ್, ಪಕ್ಷದ ಟಿಕೆಟಿಗಾಗಿ ಅಭ್ಯರ್ಥಿಯೊಬ್ಬರ ಜೊತೆ ಹಣ ಪಡೆದಿದ್ದರು ಎನ್ನುವ ಆರೋಪವೂ ದೊಡ್ಡ ಸುದ್ದಿಯಾಗಿತ್ತು. (ಸೆನ್ಸಾರ್ ಆಫೀಸರ್ ವಿರುದ್ಧ ಹರಿಹಾಯ್ದ ಮದನ್ ಪಟೇಲ್)

ಐಂದಿತ್ರಾ ರೇ
ಕನ್ನಡದ ಬರ್ಫಿ ಚಿತ್ರದ ನಿರ್ದೇಶಕ ಶೇಖರ್ ನಟಿ ಐಂದ್ರಿತಾ ರೇ ನನ್ನನ್ನು ಬಾಸ್ಟರ್ಡ್ ಎಂದು ನಿಂದಿಸಿದ್ದಾಗಿ ಶೇಖರ್ ನಿರ್ದೇಶಕರ ಸಂಘಕ್ಕೆ ದೂರು ನೀಡಿದ್ದರು. ಆದರೆ ನಿರ್ದೇಶಕರ ನಂಬರ್ ನನ್ನ ಬಳಿ ಇಲ್ಲ. ಇದೊಂದು ಪಬ್ಲಿಸಿಟಿ ಗಿಮಿಕ್ ಎಂದು ಐಂದ್ರಿತಾ ತಿರುಗೇಟು ನೀಡಿದ್ದರು. ಇದಲ್ಲದೇ ಕಡ್ಡಿಪುಡಿ ಚಿತ್ರದಲ್ಲಿ ಬೆತ್ತಲೆ ಬೆನ್ನು ತೋರಿ ಐಂದ್ರಿತಾ ಸುದ್ದಿಯಾಗಿದ್ದರು. (ಡೈರೆಕ್ಟರ್ ಗೆ ಬಾಸ್ಟರ್ಡ್ ಎಂದರೇ ಐಂದ್ರಿತಾ ರೇ)












Click it and Unblock the Notifications