ಈಶ್ವರಪ್ಪ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ, ಬಂಧಿಸಿ: ಸಿಪಿಐ(ಎಂ) ಆಗ್ರಹ
ಬೆಂಗಳೂರು, ಏಪ್ರಿಲ್ 13: ಬೆಳಗಾವಿಯ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್, ತನ್ನ ಸಾವಿಗೆ ಸಚಿವ ಈಶ್ವರಪ್ಪರವರೇ ನೇರ ಹೊಣೆಗಾರರೆಂದು ಡೆತ್ ನೋಟ್ ಬರೆದು, ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧನ ಮಾಡಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ, ಮಾರ್ಕ್ಸ್ ವಾದಿ (ಸಿಪಿಐಎಂ) ಆಗ್ರಹ ಮಾಡಿದೆ.
"ಮುಖ್ಯವಾಗಿ ಡೆತ್ ನೋಟ್ ನಲ್ಲಿ ಗುತ್ತಿಗೆ ಕೆಲಸದ ಸಂಬಂದ ಶೇ 40 ಕಮಿಷನ್ ಗಾಗಿ ಒತ್ತಡ ಹೇರಿದ ವಿಚಾರವನ್ನು ಪ್ರಸ್ತಾಪಿಸಿದ್ದಾರೆನ್ನಲಾಗಿದೆ. ಇದೊಂದು ಅತ್ಯಂತ ಗಂಭೀರ ಪ್ರಕರಣವಾಗಿದೆ. ಆದ್ದರಿಂದ, ರಾಜ್ಯ ಸರಕಾರ ಈ ಕೂಡಲೇ ಸಚಿವ ಈಶ್ವರಪ್ಪರವರ ಮೇಲೆ ಕ್ರಿಮನಲ್ ಮೊಕದ್ದಮೆ ದಾಖಲಿಸಿ, ಬಂಧಿಸಬೇಕು," ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ಒತ್ತಾಯ ಮಾಡಿದೆ.
"ಪ್ರತಿಯೊಂದು ಗುತ್ತಿಗೆ ಕೆಲಸದಲ್ಲಿ ರಾಜ್ಯ ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳು, ಒಟ್ಟು ಕಾಮಗಾರಿಯ ಶೇ 40 ರಷ್ಟು ಕಮಿಷನ್ ಪಡೆಯುತ್ತಿರುವುದಾಗಿ ಮತ್ತು ಇದರಿಂದ ಕಾಮಗಾರಿ ನಿರ್ವಹಣೆಗೆ, ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗಿದೆಯೆಂದು, ಇದನ್ನು ತಡೆಯಲು ಅಗತ್ಯ ಕ್ರಮವಹಿಸುವಂತೆ ಸ್ವತಃ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ದೇಶದ ಪ್ರಧಾನ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ಕಳೆದ ಐದಾರು ತಿಂಗಳುಗಳ ಹಿಂದೆಯೇ ಒತ್ತಾಯಿಸಿದುದನ್ನು ಇಲ್ಲಿ ಸಕಾರಣವಾಗಿ ನೆನಪಿಸಿಕೊಳ್ಳಬಹುದು," ಎಂದು ಸಿಪಿಐಎಂ ಪ್ರಸ್ತಾಪ ಮಾಡಿದೆ.

"ಆ ಸಂದರ್ಭದಲ್ಲಿ ಸಿಪಿಐಎಂ ಪಕ್ಷವು ಈ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಮತ್ತು ಕಾಮಗಾರಿಗಳ ಕಳಪೆತನವನ್ನು ಹಾಗೂ ಕಾಮಗಾರಿಗಳು ನಡೆಯದೇ ಬಿಲ್ ಮಾಡುವುದನ್ನು ತಡೆಯುವಂತೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿತ್ತು," ಎಂದು ಹೇಳಿಕೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಉಲ್ಲೇಖ ಮಾಡಿದ್ದಾರೆ.
ಕ್ರಮಕೈಗೊಳ್ಳದೆ ಜವಾಬ್ದಾರಿ ಇಲ್ಲದಂತೆ ವರ್ತಿಸಿದ್ದ ಖಂಡನೀಯ: ಯು. ಬಸವರಾಜ
"ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಆ ಕುರಿತು ಸೂಕ್ತ ಕ್ರಮವಹಿಸಿದ್ದರೇ ಈ ದಿನ ದೇಶಕ್ಕೆ ಗುತ್ತಿಗೆ ಸೇವೆಯನ್ನು ಒದಗಿಸುತ್ತಿದ್ದ ಒಂದು ಅಮೂಲ್ಯ ಜೀವ ಸಂತೋಷ ಪಾಟೀಲ್ ನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ತಡೆಯ ಬಹುದಿತ್ತು. ಇದರಿಂದಾಗಿ ಅವರ ಕುಟುಂಬ ಬೀದಿಗೆ ಬೀಳುವಂತಾಯಿತು. ಈ ಕುರಿತು ಪರಿಣಾಮಕಾರಿ ಕ್ರಮ ತಗೆದುಕೊಳ್ಳದೇ ಜವಾಬ್ದಾರಿ ಹೀನ ರೀತಿಯ ವರ್ತನೆ ತೋರಿದುದು ತೀವ್ರ ಖಂಡನೀಯವಾಗಿದೆ," ಎಂದು ಹೇಳಿಕೆಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದ್ದಾರೆ.

"ಈಗಲಾದರೂ ಇನ್ನಷ್ಟು ಗುತ್ತಿಗೆದಾರರು ಅತ್ಮಹತ್ಯೆಗಿಳಿಯದಂತೆ ಮತ್ತು ಅವರ ಕುಟುಂಬಗಳು ಬೀದಿ ಪಾಲಾಗದಂತೆ ತಡೆಯಲು ಸಂತೋಷ ಪಾಟೀಲ ಪ್ರಕರಣವೂ ಸೇರಿದಂತೆ ಒಟ್ಟು ಈ ಕಮಿಷನ್ ಹಗರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆ ಮಾಡಬೇಕು," ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯು ರಾಜ್ಯ ಸರಕಾರಗಳನ್ನು ಬಲವಾಗಿ ಒತ್ತಾಯ ಮಾಡಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications