ಕರ್ನಾಟಕದಿಂದ ಸ್ಪರ್ಧೆ : ರಾಹುಲ್ ಗಾಂಧಿ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 19 : ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮನವಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಪಿಸಿಸಿ ವತಿಯಿಂದ ರಾಹುಲ್ ಗಾಂಧಿ ಅವರಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದರು. ಕಲಬುರಗಿಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು, ಬೆಂಗಳೂರಿನಲ್ಲಿ ಟೆಕ್ಕಿಗಳ ಜೊತೆ ಸಂವಾದ ನಡೆಸಿದ್ದರು. ಆದರೆ, ಕರ್ನಾಟಕದಿಂದ ಸ್ಪರ್ಧಿಸುವ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
#RaGaFromKarnataka ಎಂಬ ಟ್ವಿಟರ್ ಹ್ಯಾಷ್ ಟ್ಯಾಗ್ ಬಳಸಿ ಕರ್ನಾಟಕದ ಕಾಂಗ್ರೆಸ್ ನಾಯಕರು ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಬೇಕು ಎಂದು ಮನವಿ ಮಾಡಿದ್ದರು.
ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದ ಸಂಸದರು. ಈ ಬಾರಿಯೂ ಅವರು ಅಲ್ಲಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಕರ್ನಾಟಕದಿಂದಲೂ ಸ್ಪರ್ಧಿಸಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ.

ಕರ್ನಾಟಕದ ನಾಯಕರ ಒತ್ತಾಯ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. #RaGaFromKarnataka ಎಂಬ ಹ್ಯಾಷ್ ಟ್ಯಾಗ್ ಬಳಸಿ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಟ್ವೀಟ್ ಮಾಡಿದ್ದರು.

ದಿನೇಶ್ ಗುಂಡೂರಾವ್ ಪತ್ರ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಹುಲ್ ಗಾಂಧಿ ಅವರಿಗೆ ಪಕ್ಷದ ಪರವಾಗಿ ಪತ್ರ ಬರೆದು ರಾಜ್ಯಕ್ಕೆ ಆಹ್ವಾನ ನೀಡಿದ್ದರು. ಯಾವ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಗೆಲ್ಲಿಸುವುದಾಗಿ ಭರವಸೆ ನೀಡಿದ್ದರು.

ರಾಹುಲ್ ಮೌನ
ಸೋಮವಾರ ಕರ್ನಾಟಕಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿ ರಾಜ್ಯದಿಂದ ಸ್ಪರ್ಧೆ ಮಾಡುವ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಕಲಬುರಗಿ ಸಮಾವೇಶದಲ್ಲಿ ಬಹಿರಂಗವಾಗಿ ಅವರಿಗೆ ಆಹ್ವಾನ ನೀಡಿದರೂ ಅವರು ಏನೂ ಹೇಳಿಲ್ಲ. ದೆಹಲಿಗೆ ಮರಳುವಾಗ ಸಿದ್ದರಾಮಯ್ಯ ಜೊತೆ ರಹಸ್ಯವಾಗಿ ಮಾತುಕತೆ ನಡೆಸಿದರು. ಆದರೆ, ಈ ವಿಚಾರವನ್ನು ಪ್ರಸ್ತಾಪಿಸಿಲ್ಲ.

ಮೂರು ಕ್ಷೇತ್ರಗಳ ಆಯ್ಕೆ
ಕರ್ನಾಟಕದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರಿಗಾಗಿ ಮೂರು ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದರು. ಮೈಸೂರು-ಕೊಡಗು, ಬೀದರ್ ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿತ್ತು. ಆದರೆ, ರಾಹುಲ್ ರಾಜ್ಯದಿಂದ ಸ್ಪರ್ಧಿಸುವ ಕುರಿತು ಇನ್ನೂ ಏನೂ ಹೇಳಿಲ್ಲ.












Click it and Unblock the Notifications