ವಿಧಾನಸಭಾ ಚುನಾವಣೆಗೆ ದಿನಗಣನೆ; ಕಾಂಗ್ರೆಸ್ ಗೆಲುವ ಕ್ಷೇತ್ರಗಳ ಕುರಿತು ಭವಿಷ್ಯ ನುಡಿದ ಎಚ್.ಡಿ.ಕುಮಾರಸ್ವಾಮಿ
ಮೈಸೂರು,ಮಾರ್ಚ್27: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಗೆಲುವಿನ ವಿಶ್ವಾಸದಲ್ಲಿರುವ ರಾಜಕೀಯ ಪಕ್ಷಗಳು ರಾಜ್ಯಾದ್ಯಂತ ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಗೆಲ್ಲುವ ಲೆಕ್ಕಾಚಾರವನ್ನ ಆರಂಭಿಸಿವೆ.
ಈಗಾಗಲೇ ಪ್ರಾದೇಶಿಕ ಪಕ್ಷ ಜೆಡಿಎಸ್ 93 ಕ್ಷೇತ್ರದ ಅಭ್ಯರ್ಥಿಗಳನ್ನ ಘೋಷಿಸಿದ್ದು, ಎರಡನೇ ಪಟ್ಟಿಯ ತಯಾರಿಯಲ್ಲಿದೆ. ಇನ್ನೂ ಭಾನುವಾರ ಪಂಚರತ್ನ ರಥಯಾತ್ರೆಯ ಸಮಾರೋಪ ಕಾರ್ಯಕ್ರಮವನ್ನ ನಡೆಸಿರುವ ದಳಪತಿಗಳು, ಮತ್ತೆ ಮಂಕಗಳವಾರದಿಂದ ಚುನಾವಣಾ ಪ್ರಚಾರವನ್ನ ನಡೆಸಲಿದ್ದಾರೆ.

ಇನ್ನೂ ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯಂತಹ ಕೆಟ್ಟ ಸರ್ಕಾರ ಬರಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ನಾನು ಏನು ಮಹಾಪರಾಧ ಮಾಡಿದ್ದೇ ಅಂತ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು..? ಜನರಿಗೆ ಒಳ್ಳೆ ಆಡಳಿತ ಕೊಡುತ್ತಿದ್ದೆ. ರಾಜಕೀಯ ಷಡ್ಯಂತ್ರಕ್ಕೆ ನನ್ನನ್ನು ಬಲಿಪಡೆದ್ರು. ಈ ಬಾರಿ ರಾಜ್ಯದೆಲ್ಲೆಡೆ ಉತ್ತಮ ವಾತಾವರಣ ಇದೆ. ಕಾಂಗ್ರೆಸ್ ಪಕ್ಷ 70 ರಿಂದ 75 ಕ್ಷೇತ್ರಗಳನ್ನು ದಾಟಲು ಸಾಧ್ಯವಿಲ್ಲ. ಪಂಚರತ್ನ ಅಭೂತಪೂರ್ವ ಯಶಸ್ಸು ಪಡೆದಿದೆ. ಜೆಡಿಎಸ್ 123 ಸ್ಥಾನ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನೂ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ನಡೆಸುವ ಕುರಿತು ಮಾತನಾಡಿ, ಸಿದ್ದರಾಮಯ್ಯ ಅವರಿಗೆ ಎರಡು ಕ್ಷೇತ್ರ ಸುರಕ್ಷಿತವಲ್ಲ, ಮೂರು ಕ್ಷೇತ್ರದಿಂದಲೂ ಸ್ಪರ್ಧಿಸಬಹುದು. ನಾನೇನು ಸಿದ್ದರಾಮಯ್ಯ ಅವರ ಬಗ್ಗೆ ಸಹಾನುಭೂತಿ ತೋರಿಲ್ಲ. ಯಾಕಪ್ಪ ಇವರಿಗೆ ಇಂತಹ ದಯನೀಯ ಪರಿಸ್ಥಿತಿ ಬಂತು ಎಂದು ಹೇಳಿದ್ದೇನೆ. ಕಾಂಗ್ರೆಸ್ ಒಳಜಗಳದ ಜೊತೆಗೆ ಸಿದ್ದರಾಮಯ್ಯ ಅವರಿಗೆ ಅವರ ಮೇಲೆ ನಂಬಿಕೆಯಿಲ್ಲ. ಹಾಗಾಗಿ ಬೇರೆ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ನಾವು 123 ಕ್ಷೇತ್ರ ಗೆದ್ದೇ ಗೆಲ್ಲುತ್ತೇವೆ. ಯಾವುದೇ ಶ್ರಮ ಹಾಕದಿದ್ರೂ ಕನಿಷ್ಠ 50 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಆದರೆ, 123 ಕ್ಷೇತ್ರ ಗೆಲ್ಲಲೇ ಬೇಕೆಂದು ಹೆಚ್ಚಿನ ಶ್ರಮ ಹಾಕುತ್ತಿದ್ದೇವೆ ಎಂದು ತಿಳಿಸಿದರು.
ಮೀಸಲಾತಿ ಕುರಿತು ಮಾತನಾಡಿದ ಅವರು, ಮೀಸಲಾತಿ ಹೆಚ್ಚಳ ಘೋಷಣೆ ಮಾಡಿರುವ ವಿಚಾರದಲ್ಲಿ ಮಕ್ಕಳ ಆಟವಾಡಿದ್ದಾರೆ. ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಜನರ ಕಿವಿಗೆ ಹೂವು ಮುಡಿಸಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಈಗಾಗಲೇ ಲಿಂಗಾಯತರು, ಒಕ್ಕಲಿಗರ ಕಿವಿಗೆ ಹೂವು ಮೂಡಿಸಿದ್ದಾರೆ.ಇವರು ಮಾಡಿರುವ ಮೀಸಲಾತಿ ಹೆಚ್ಚಳ ಕಾರ್ಯರೂಪಕ್ಕೆ ಬರುವುದಿಲ್ಲ. ಸಮಾಜವನ್ನು ಒಡೆಯುವ ಸಲುವಾಗಿ ಮುಸ್ಲಿಮರ ಮೀಸಲಾತಿ ಕಡಿತ ಮಾಡಿ ಬೇರೆ ಸಮುದಾಯಕ್ಕೆ ಹಂಚಿದ್ದಾರೆ. ಈ ಮೂಲಕ ಹಿಂದೂ ಹಾಗೂ ಮುಸ್ಲಿಮರ ಮಧ್ಯೆ ಸಂಘರ್ಷ ಹುಟ್ಟುಹಾಕಲು, ಬೆಂಕಿ ಹಚ್ಚಲು ಈ ರೀತಿ ಮಾಡಿದ್ದಾರೆ ಎಂದು
ಕಿಡಿಕಾರಿದ್ರು.
ಇನ್ನೂ ದಾವಣಗೆರೆಯಲ್ಲಿ ನಡೆ ಮೋದಿ ರೋಡ್ ಶೋ ಕುರಿತು ಮಾತನಾಡಿ, ನರೇಂದ್ರ ಮೋದಿಯವರ ರೋಡ್ ಶೋ ನನ್ನ ಹಳ್ಳಿಗಳಲ್ಲಿ ಸಿಕ್ಕ ಸ್ವಾಗತಕ್ಕೆ ಸಮ. ಭಾನುವಾರ ನಡೆ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ನಮ್ಮ ನಿರೀಕ್ಷೆಗೂ ಮೀರಿ ಜನ ಸಮಾವೇಶಕ್ಕೆ ಆಗಮಿಸಿದ್ದರು. ನಮ್ಮ ತಂದೆ ಜನರನ್ನ ನೋಡಿ ಭಾವೋದ್ವೇಗವಾಗಿ ಕಣ್ಣೀರೀಟ್ಟರು. ನಾನೂ ಕೂಡ ಭಾವುಕನಾಗಿದ್ದೆ ಆದರೂ ನಾನು ತಡೆದುಕೊಂಡೆ ಎಂದು ಭಾವುಕರಾದರು.
ಇನ್ನೂ ಜನ ದೇವೇಗೌಡರ ನೋಡಿ ಕಣ್ಣೀರಿಟ್ಟ ಸನ್ನಿವೇಶ ನಡೆಯಿತು. ತಾಯಿ ಚಾಮುಂಡೇಶ್ವರಿ ನಮ್ಮ ತಂದೆಗೆ ಶಕ್ತಿ ಕೊಟ್ಟು ಇಲ್ಲಿಗೆ ಬರುವಾಗೆ ಮಾಡಿದ್ದು. ಚಾಮುಂಡೇಶ್ವರಿಯ ಆಶೀರ್ವಾದ ನಮಗೆ ಇದೆ. ಹಾಗಾಗಿ ನಮಗೆ ನಿರೀಕ್ಷೆಗೂ ಮೀರಿ ಯಶಸ್ಸು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.












Click it and Unblock the Notifications