By-Election: ಸಿಎಂ ಬದಲಾವಣೆ ಚರ್ಚೆಗೆ ಬ್ರೇಕ್! ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 24: ಕರ್ನಾಟಕ ರಾಜಕೀಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಬಳಿಕ ಆಗಾಗ ಸಿಎಂ ಬದಲಾವಣೆ ಕೂಗು ಕೇಳಿ ಬರುತ್ತಲೇ ಇತ್ತು. ನಾನು ಸಿಎಂ ಆಗುವೆ ಎಂದು ಕೆಲವು ನಾಯಕರು ಹೇಳುವ ಮೂಲಕ ನಾಯಕತ್ವ ಬದಲಾವಣೆ ಬೆಂಕಿಗೆ ತುಪ್ಪ ಸುರಿದಿದ್ದರೂ. ಆದರೆ ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವ ದಾಖಲಿಸಿದ ಬಳಿಕ ನಾಯಕತ್ವ ಬದಲಾವಣೆ ವಿಚಾರಕ್ಕೆ ಸದ್ಯಕ್ಕೆ ತೆರೆಮರೆಗೆ ಸರಿಯಲಿದೆ.
ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣದ ಉಪಚುನಾವಣೆ 2024 ಗೆಲುವು ಕಾಂಗ್ರೆಸ್‌ಗೆ ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಬಲ ತಂದು ಕೊಟ್ಟಿದೆ. ಸಿಎಂ ನಾಯಕತ್ವ, ಗ್ಯಾರೆಂಟಿ ಯೋಜನೆಗಳ ಮೇಲೆ ಜನ ನಂಬಿಕೆ ಇಟ್ಟಿದ್ದರ ಫಲದಿಂದಲೇ ಈ ಜಯ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಸಿಎಂ ನಾಯಕತ್ವ ಬದಲಾವಣೆ ಬಗ್ಗೆ ಗುಲ್ಲೆಬ್ಬಿಸಿದ್ದವರ ಬಾಯಿಗೆ ಬಿದ್ದಂತಾಗಿದೆ.

ಏಕೆಂದರೆ ಚನ್ನಪಟ್ಟಣ ಡಿಕೆ ಶಿವಕುಮಾರ್ ಅವರಿಗೆ ಪ್ರತಿಷ್ಠೆಯ ಕಣವಾದರೆ, ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸೂಚಿಸಿದವರಿಗೆ ಉಪ ಚುನಾವಣೆಯ ಟಿಕೆಟ್ ಕಾಂಗ್ರೆಸ್ ನೀಡಿತ್ತು. ಈ ಮೂರು ಕ್ಷೇತ್ರಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದ ಸಿದ್ದರಾಮಯ್ಯ ಅವರು ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ವಾಸ್ತವ್ಯ ಹೂಡಿ ಚುನಾವಣಾ ಪ್ರಚಾರ ನಡೆಸಿದ್ದರು.
ಸಿಎಂ ನೇತೃತ್ವದಲ್ಲಿ ಉಪ ಚುನಾವಣೆಯ ಗೆಲುವು
ಪ್ರಚಾರದ ವೇಳೆ ನಾನೇ ಮುಖ್ಯಮಂತ್ರಿಯಾಗಿರಬೇಕೆಂದರೆ, ಮುಖ್ಯಮಂತ್ರಿ ಆಗಿ ಮುಂದುವರಿಯಬೇಕೆಂಬ ಆಸೆ ನಿಮಗಿದ್ದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮತದಾರರ ಮನವೊಲಿಸಿದ್ದರು. ವಕ್ಫ ವಿಚಾರ, ಭ್ರಷ್ಟಾಚಾರ ಆರೋಪ ಮುಖ್ಯವಾಗಿ ಮುಡಾ ಪ್ರಕರಣ ಎದರಿಸಿದ್ದರ ನಡುವೆಯು ಪಕ್ಷ ಗೆಲ್ಲಿಸಿಕೊಂಡು ಬರುವಲ್ಲಿ ಸಿಎಂ ಸಿದ್ದರಾಮಯ್ಯ ಯಶಸ್ವಿಯಾದರು.
ಇತ್ತ ಬಿಜೆಪಿ ನಾಯಕರು ಏನೆ ಆರೋಪಿಸಿದರೂ ಜನರು ಕಾಂಗ್ರೆಸ್ ಗೆ ಮತ ನೀಡಿರುವುದು. ಸ್ಪಷ್ಟವಾಗುತ್ತಿದೆ. ನಾನೇ ಸಿಎಂ ಆಗಿರಲು ಮತ ನೀಡಿ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಮತದಾರರು ಜೈಕಾರ ಹಾಕಿದ್ದಾರೆ. ಇದರಿಂದಾಗಿ ನಾಯಕತ್ವ ಬದಲಾವಣೆ ಚರ್ಚೆಗೆ ತಾತ್ಕಾಲಿಕವಾದರೂ ತೆರೆಮರೆಗೆ ಸರಿಯಲಿದೆ. ಈ ಮೂಲಕ ಸಿದ್ದರಾಮಯ್ಯನವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತಾಗಿದೆ.
ಸಂಡೂರಿನಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ ಸಂತೋಷ್ ಲಾಡ್ ಅವರು ಪಕ್ಷ ಗೆಲ್ಲಿಸುವ ಹೊಣೆ ಹೊತ್ತು ಓಡಾಡಿದ್ದರು. ಸಿದ್ದರಾಮಯ್ಯ ಅವರು ಮೂರು ದಿನ ಪ್ರಚಾರ ನಡೆಸಿದ್ದರು. ಇನ್ನೂ ಶಿಗ್ಗಾವಿಯಲ್ಲಿ 05 ಬಾರಿ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡಿ ಸೋಲಲಾಗಿತ್ತು. ಹೀಗಾಗಿ ಲಿಂಗಾಯತ ನಾಯಕರಿಗೆ ಟಿಕೆಟ್ ನೀಡಬೇಕೆಂಬ ಕೂಗಿನ ಮಧ್ಯೆ ಪಟ್ಟು ಹಿಡಿದು ಯಾಸೀರ್ ಖಾನ್ ಪಠಾಣ್ ಗೆ ಸಿಎಂ ಸಿದ್ದರಾಮಯ್ಯ ಟಿಕೆಟ್ ಕೊಡಿಸಿದ್ದರು.
ಸರ್ಕಾರದ ಮೇಲೆ ಭ್ರಷ್ಟಾಚಾರ, ಅಕ್ರಮ ಆರೋಪ, ಮುಡಾ ಸೈಟು ವಿಚಾರಣೆ, ಬಣ ರಾಜಕೀಯದ ನಡುವೆ ಸಿಎಂ ಸಿದ್ದರಾಮಯ್ಯ ಅವರು ಉಪ ಚುನಾವಣೆಯಲ್ಲಿ ತೋರಿದ ಚಾಣಾಕ್ಷತನದಿಂದ ಪಕ್ಷ ಗೆದ್ದಿದೆ. ನಾಯಕತ್ವ ಬದಲಾವಣೆ ಚರ್ಚೆಗೆ ಅರ್ಥವಿಲ್ಲದಂತೆ ಮಾಡಿದ್ದಾರೆ. ಈ ಗೆಲುವು ಸಿಎಂ ಸಿದ್ದರಾಮಯ್ಯ ಬಣದವರಿಗೆ, ನಾಯಕತ್ವ ಬದಲಾವಣೆ ಸೊಲ್ಲೆತ್ತುವವರ ವಿರುದ್ಧ ಗಟ್ಟಿಸಿ ಮಾತನಾಡುವ ಅವಕಾಶ ಮಾಡಿಕೊಟ್ಟಿದೆ ಎನ್ನಬಹುದು.












Click it and Unblock the Notifications