Lok Sabha Election 2024 Result: ವೋಟ್ ಶೇರ್ ಹೆಚ್ಚಾದರೂ 'ಕೈ' ತಪ್ಪಿದ ಡಬಲ್ ಡಿಜಿಟ್!
ಬೆಂಗಳೂರು, ಜೂನ್ 06; ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಸಹ ಪಕ್ಷ ಗೆದ್ದಿರುವ ಸೀಟುಗಳ ಸಂಖ್ಯೆ ಕೇವಲ 9. ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಕಾಂಗ್ರೆಸ್ ಕಟ್ಟಿ ಹಾಕುವಲ್ಲಿ ಸಫಲವಾಗಿದೆ. ಬಿಜೆಪಿ 17, ಜೆಡಿಎಸ್ 2 ಸೀಟುಗಳಲ್ಲಿ ಜಯಗಳಿಸಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 1 ಸೀಟು (ಬೆಂಗಳೂರು ಗ್ರಾಮಾಂತರ). ಆದರೆ ಈ ಬಾರಿ ಆ ಕ್ಷೇತ್ರವೂ ಬಿಜೆಪಿ ಪಾಲಾಗಿದ್ದು, ಪಕ್ಷದ ಅಭ್ಯರ್ಥಿ ಡಾ. ಸಿ. ಎನ್. ಮಂಜುನಾಥ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮತಗಳಿಕೆ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ ಹೆಚ್ಚಾಗಿದೆ. ಆದರೆ ಸೀಟುಗಳ ಸಂಖ್ಯೆ ಎರಡಂಕಿ ದಾಟಿಲ್ಲ.

2019ರಲ್ಲಿ ಬಿಜೆಪಿ 25, ಕಾಂಗ್ರೆಸ್ 1 ಮತ್ತು ಜೆಡಿಎಸ್ 1 ಕ್ಷೇತ್ರದಲ್ಲಿ ಜಯಗಳಿಸಿದ್ದವು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ 9 ಸೀಟು ಗೆಲ್ಲುವ ಮೂಲಕ 8 ಸೀಟು ಹೆಚ್ಚು ಗೆದ್ದಿದೆ. ಆದರೆ ಪಕ್ಷ ಅಧಿಕಾರದಲ್ಲಿರುವ ರಾಜ್ಯದಲ್ಲಿ ಗೆದ್ದಿರುವ ಸ್ಥಾನ ಕಡಿಮೆ.
ಅಂಕಿ ಸಂಖ್ಯೆಗಳ ಲೆಕ್ಕ: 2019ರಲ್ಲಿ ಕಾಂಗ್ರೆಸ್ ಪಕ್ಷ ಶೇ 32.11ರಷ್ಟು ಮತವನ್ನುಗಳಿಸಿತ್ತು. ಇದಕ್ಕೆ ಹೋಲಿಕೆ ಮಾಡಿದರೆ 2024ರಲ್ಲಿ ಪಕ್ಷ 45.43ರಷ್ಟು ಮತಗಳನ್ನು ಪಡೆದಿದೆ. ಬಿಜೆಪಿ 2019ರಲ್ಲಿ ಶೇ 51.75 ಮತಗಳಿಸಿತ್ತು. ಈ ಬಾರಿ 46.06ರಷ್ಟು ಮತಗಳನ್ನು ಪಡೆದಿದೆ. ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದ್ದ ಜೆಡಿಎಸ್ ಶೇ 5.6ರಷ್ಟು ಮತಗಳನ್ನು ಪಡೆದಿದೆ. 2019ರಲ್ಲಿ 7 ಕ್ಷೇತ್ರದಲ್ಲಿ ಕಣಕ್ಕಿಳಿದು ಶೇ 9.74ರಷ್ಟು ಮತ ಪಡೆದಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೇ 42.88ರಷ್ಟು ಮತಗಳನ್ನು ಗಳಿಸಿತ್ತು. ಬಿಜೆಪಿ ಶೇ 36ರಷ್ಟು ಮತಗಳಿಸಿತ್ತು.
ಬಿಜೆಪಿ-ಜೆಡಿಎಸ್ ಮೈತ್ರಿ ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಿದೆ. ಹಾಸನ ಮತ್ತು ಚಾಮರಾಜನಗರ ಬಿಟ್ಟು ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಒಟ್ಟಾರೆ ಮತಗಳಿಕೆ ನೋಡಿದರೆ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಎನ್‌ಡಿಎ ಪರವಾಗಿ ನಿಂತಿದೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ನಿಂತಿದ್ದರು. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮಂಡ್ಯದಲ್ಲಿ 2.84 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
2019ರಂತೆ ಬಿಜೆಪಿ ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿದೆ. ಬೆಂಗಳೂರು ಉತ್ತರದಲ್ಲಿ ಶೋಭಾ ಕರಂದ್ಲಾಜೆ, ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ಪಿ. ಸಿ. ಮೋಹನ್ 4ನೇ ಬಾರಿಗೆ ಗೆಲುವು ಕಂಡರೂ ಸಹ ಗೆಲುವಿನ ಅಂತರ ಕೇವಲ 32,707. ಮಧ್ಯ ಕರ್ನಾಟಕದ ಮೂರು ಸೀಟುಗಳಲ್ಲಿ ಎರಡು ಬಿಜೆಪಿ ಸಿಕ್ಕಿದೆ. ಇವುಗಳಲ್ಲಿ ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ರಾಘವೇಂದ್ರ ಸುಮಾರು 2.43 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
'ಕೈ' ಬಲಪಡಿಸಿದ ಕಲ್ಯಾಣ ಕರ್ನಾಟಕ: ಕರ್ನಾಟಕ ಕಾಂಗ್ರೆಸ್ ಈ ಬಾರಿ 9 ಸ್ಥಾನ ಗೆಲ್ಲುವುದರಲ್ಲಿ ಕಲ್ಯಾಣ ಕರ್ನಾಟಕದ ಕೊಡುಗೆ ಹೆಚ್ಚು. ಈ ಭಾಗದ 5 ಸೀಟುಗಳು ಸಹ ಕಾಂಗ್ರೆಸ್ ಪಾಲಾಗಿವೆ. 2019ರಲ್ಲಿ ಈ ಭಾಗದಲ್ಲಿ ಸೋತಿದ್ದರೂ ಈ ಬಾರಿ ಕಾಂಗ್ರೆಸ್ ಮತ್ತೆ ಗೆದ್ದಿದೆ. ದಲಿತರು, ಹಿಂದುಳಿದ ವರ್ಗದ ಮತಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಸಿಕ್ಕಿವೆ. 2023ರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳು ಲೋಕಸಭೆಯಲ್ಲಿ ಪರಿಣಾಮ ಬೀರಿವೆ.
ಮುಂಬೈ ಕರ್ನಾಟಕ ಮೊದಲಿನಿಂದಲೂ ಬಿಜೆಪಿ ಪ್ರಾಬಲ್ಯದ ಕ್ಷೇತ್ರ. ಲಿಂಗಾಯತ ಪ್ರಭಾವ ಇರುವ 6 ಸೀಟುಗಳನ್ನು ಪಕ್ಷ ಗೆದ್ದಿದೆ. ಶಿವಮೊಗ್ಗ, ಕೊಡಗು-ಮೈಸೂರು, ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಹೆಚ್ಚಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಬಿಜೆಪಿಗೆ ಚುನಾವಣೆಯಲ್ಲಿ ಸಹಾಯಕವಾಗಿದೆ ಎಂಬ ಮಾತಿದೆ, ಇದನ್ನು ಬಿಜೆಪಿಯ ನಾಯಕರು ಸಹ ಒಪ್ಪುತ್ತಾರೆ.












Click it and Unblock the Notifications