Congress Candidates List: ಬಿಜೆಪಿ, ಜೆಡಿಎಸ್ ಪಟ್ಟಿ ಬಳಿಕ 4 ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಾ ಕಾಂಗ್ರೆಸ್?
ಬೆಂಗಳೂರು ಮಾರ್ಚ್ 23: ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಕಾಂಗ್ರೆಸ್ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಕರ್ನಾಟಕ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು 28 ಕ್ಷೇತ್ರಗಳಿಗೆ ಬಹುತೇಕ ಅಭ್ಯರ್ಥಿಗಳನ್ನು ಬಹಿರಂಗಪಡಿಸಿದೆ. ಆದರೆ ಯಾವ ಪಕ್ಷವೂ ಸಂಪೂರ್ಣವಾಗಿ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಕಾಂಗ್ರೆಸ್ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಮೊದಲ ಹಂತದಲ್ಲಿಯೇ ಕರ್ನಾಟಕ 20 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಉಳಿದಂತೆ ಬಿಜೆಪಿ ಕೋಲಾರ, ಮಂಡ್ಯ ಮತ್ತು ಹಾಸನ ಮೂರು ಕ್ಷೇತ್ರಗಳನ್ನು ಮೈತ್ರಿ ಪಕ್ಷ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ. ಇನ್ನುಳಿದ ಐದು ಕ್ಷೇತ್ರಗಳ ಹೆಸರು ಪ್ರಕಟವಾಗಬೇಕಿದೆ.
ಇತ್ತ ಕಾಂಗ್ರೆಸ್ ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಬಾಕಿ ಉಳಿದುಕೊಂಡಿದೆ. ಆದರೆ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಜೆಡಿಎಸ್‌ನ ಅಂತಿಮ ಪಟ್ಟಿ ಪ್ರಕಟಗೊಂಡ ಬಳಿಕ ಕಾಂಗ್ರೆಸ್‌ನಿಂದ ಬಾಕಿ ಉಳಿದಿರುವ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲು ಶನಿವಾರ ನಡೆಯಲಿರುವ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ.

ಈ ಬಗ್ಗೆ ಶುಕ್ರವಾರ ಸಂಜೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಶಿವಕುಮಾರ್ ಅವರು ಅನೌಪಚಾರಿಕ ಸಭೆ ನಡೆಸಿದ್ದು, ಸಭೆಯಲ್ಲಿ ಈ ಚರ್ಚೆ ಬಂದಿರುವುದಾಗಿ ಹೇಳಲಾಗಿದೆ. ಕಾಂಗ್ರೆಸ್ ಚುನಾವಣಾ ಸಮಿತಿಯು ಶನಿವಾರ ನಾಲ್ಕೂ ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಆದರೆ ಮೂಲಗಳ ಪ್ರಕಾರ ಬಿಜೆಪಿ ಜೆಡಿಎಸ್ ಪಟ್ಟಿ ಅಂತಿಮಗೊಳ್ಳುವವರೆಗೆ ಕಾಂಗ್ರೆಸ್ ಅಂತಿಮ ಪಟ್ಟಿ ನಿಡುಗಡೆ ಮಾಡದಿರಲು ತೀರ್ಮಾನಿಸುವ ಸಂಭವವಿದೆ ಎಂದು ತಿಳಿದುಬಂದಿದೆ. ಟಿಕೆಟ್ ಹಂಚಿಕೆ ಬಾಕಿಯಿರುವ ಬಳ್ಳಾರಿಗೆ ಇ.ತುಕಾರಾಂ ಹೆಸರು ಬಹುತೇಕ ಅಂತಿಮಗೊಂಡಿದೆ. ಇನ್ನು ಚಿಕ್ಕಬಳ್ಳಾಪುರಕ್ಕೆ ರಕ್ಷಾರಾಮಯ್ಯ ಹೆಸರು ಮುಂಚೂಣಿಯಲ್ಲಿದ್ದರೂ ಮತ್ತೋರ್ವ ಆಕಾಂಕ್ಷಿ, ಮಾಜಿ ಸಚಿವ ಎನ್.ಎಚ್.ಶಿವಶಂ ಕರರೆಡ್ಡಿ ಅವರು ಪಟ್ಟು ಸಡಿಲಿಸುತ್ತಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಲಾಬಿ ಮುಂದುವರೆಸಿರುವುದರಿಂದ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎನ್ನಲಾಗಿದೆ.
ಇನ್ನು ಇದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ಅವರು ರಕ್ಷಾ ಹಾಗೂ ಶಿವ ಶಂಕರರೆಡ್ಡಿ ಇಬ್ಬರನ್ನೂ ಕರೆಸಿ ಮನವೊಲಿಸಲು ಯತ್ನಿಸಿದ್ದಾರೆ. ಈ ವೇಳೆ ಪಕ್ಷ ತೊರೆಯುವ ಹೇಳಿಕೆ ನೀಡಿದ್ದ ರೆಡ್ಡಿಯ ಮನವೊಲಿಸುವ ಪ್ರಯತ್ನ ಮಾಡಲಾಯಿತು ಎನ್ನಲಾಗಿದೆ. ಉಳಿದಂತೆ ಚಾಮರಾಜನಗರ ಕ್ಷೇತ್ರದಿಂದ ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್ ಹೆಸರು ಬಹುತೇಕ ಅಂತಿಮಗೊಂಡಿದೆ.
ಇನ್ನು ಕೋಲಾರಕ್ಕೆ ಸಂಬಂಧಿಸಿದಂತೆ ಗೊಂದಲ ಮುಂದುವರೆದಿದೆ. ಕೆ.ಎಚ್. ಮುನಿಯಪ್ಪ ಅವರು ಚಿಕ್ಕಪೆದ್ದಣ್ಣ ಪರ ಪ್ರಬಲ ಲಾಬಿ ನಡೆಸುತ್ತಿದ್ದು, ಕೆಎಚ್ ಮುನಿಯಪ್ಪ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡದಂತೆ ಮತ್ತೊಂದು ಬಣ ಪಟ್ಟು ಹಿಡಿದಿದೆ. ಹೀಗಾಗಿ ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅವರ ಪರ ಒಲವು ಹೆಚ್ಚಾಗಿದೆ. ಆದರೆ ಕೆಎಚ್ ಮುನಿಯಪ್ಪ ಅವರು ಪ್ರಯತ್ನವನ್ನು ತೀವ್ರಗೊಳಿಸಿರುವುದರಿಂದ ತಿಕ್ಕಾಟ ಮುಂದುವರೆದಿದೆ.
ಇದರಿಂದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಭೆಗಳ ಸರಣಿಯಲ್ಲಿ ಬ್ಯೂಸಿ ಆಗಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಕಾದು ನೋಡುವ ತಂತ್ರದ ಮೊರೆ ಹೋಗಿದ್ದು ನಾಲ್ಕು ಕ್ಷೇತ್ರಗಳಲ್ಲಿ ಯಾರಿಗೆ ಟಿಕೆಟ್ ನೀಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications