ಶಾ, ಮೋದಿ ನಿಮ್ಮ ಮುಂದೆ ಬಚ್ಚಾ ಅಲ್ಲವೇ: ಯಡಿಯೂರಪ್ಪಗೆ ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು, ಅಕ್ಟೋಬರ್ 12: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಚ್ಚಾ ಎಂದು ಕರೆದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಕೆಪಿಸಿಸಿ ವಾಗ್ದಾಳಿ ನಡೆಸಿದೆ.
ಈ ವಿಚಾರವಾಗಿ ಬುಧವಾರ ಟ್ವೀಟ್ ಮಾಡಿರುವ ಕೆಪಿಸಿಸಿ, 'ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರೇ, ಈ ಭಾಷೆ ನಿಮ್ಮ ಘನತೆಗೆ ತಕ್ಕುದಲ್ಲ. ಪ್ರಧಾನಿ ಮೋದಿ ಬಿಜೆಪಿಗೆ ಪ್ರಶ್ನಾತೀತರು, ಟೀಕಾತೀತರು ಇರಬಹುದು. ಆದರೆ, ಭಾರತ ಪ್ರಜಾಪ್ರಭುತ್ವದ ದೇಶ ಎಂಬುದನ್ನು ಮರೆಯದಿರಿ' ಎಂದು ಹೇಳಿದೆ.
'ಅಂದ ಹಾಗೆ, ನಿಮ್ಮ ಮುಂದಿನ ಬಚ್ಚಾ ಅಮಿತ್ ಶಾ ಎದುರು ನೀವು ಕೈಕಟ್ಟಿ ನಿಲ್ಲುವುದು ಸರಿಯೇ? ಮೋದಿಯೂ ನಿಮ್ಮ ಮುಂದೆ ಬಚ್ಚಾ ಅಲ್ಲವೇ' ಎಂದು ಪ್ರಶ್ನಿಸಿದೆ.
ಪ್ರಧಾನಿ ಮೋದಿ ವಿರುದ್ಧ ಬಚ್ಚಾ ರಾಹುಲ್ ಗಾಂಧಿ ಮಾತನಾಡುತ್ತಿದ್ದಾನೆ ಎಂದು ಯಡಿಯೂರಪ್ಪ ಟೀಕಿಸಿದ್ದರು.
ರಾಯಚೂರು ಜಿಲ್ಲೆಯ ಗಿಲ್ಲೆಸುಗೂರಿನಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ್ದ ಅವರು, 'ಪ್ರಧಾನಿ ಮೋದಿ ವಿರುದ್ಧ ಮಾತನಾಡುವ ಯೋಗ್ಯತೆ ರಾಹುಲ್‌ಗೆ ಇದೆಯೇ? ಅವರ ಪಾದದ ಅಡಿಯಲ್ಲಿ ಕುಳಿತುಕೊಳ್ಳುವ ಅರ್ಹತೆಯೂ ರಾಹುಲ್‌ಗಿಲ್ಲ. ಮೋದಿಯವರ ನಾಯಕತ್ವವನ್ನು ಜಗತ್ತೇ ಒಪ್ಪಿಕೊಂಡಿದೆ. ಅವರನ್ನು ಬಚ್ಚಾ ರಾಹುಲ್ ಟೀಕಿಸುತ್ತಾನೆ. ಯಾವ ಹಂತಕ್ಕೆ ಕಾಂಗ್ರೆಸ್ ತಲುಪಿದೆ ಎಂಬುದನ್ನು ನೀವೆ ಅರಿಯಿರಿ' ಎಂದು ಬಿಎಸ್‌ವೈ ವಾಗ್ದಾಳಿ ನಡೆಸಿದ್ದರು.
ಯಡಿಯೂರಪ್ಪ ಹೇಳಿಕೆಗೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 'ರಾಹುಲ್ ಗಾಂಧಿ ಪಾದದ ದೂಳಿಗೂ ಯಡಿಯೂರಪ್ಪ ಸಮವಿಲ್ಲವೆಂದು ಹೇಳಲಾರೆ. ಕಾರಣ, ಅವರಷ್ಟು ಕೆಳಮಟ್ಟಕ್ಕೆ ಇಳಿದು ನಾನು ಮಾತನಾಡಲಾರೆ' ಎಂದು ಹೇಳಿದ್ದಾರೆ.
'ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರ ಪಾದದ ದೂಳಿಗೂ ಮೋದಿ ಸಮನಲ್ಲವೆಂದು ಹೇಳಲಿಕ್ಕೆ ಆಗುವುದಿಲ್ಲ. ಕಾರಣ, ಮೋದಿ ಈಗ ದೇಶದ ಪ್ರಧಾನಿ. ಯಡಿಯೂರಪ್ಪನವರದ್ದು ಕೀಳು ಅಭಿರುಚಿಯ ಹೇಳಿಕೆ. ನಾನು ಹೀಗೆ ಮಾತನಾಡಲಾರೆ. ಬಿಎಸ್‌ವೈಗೆ ವಯಸ್ಸಾಗಿದೆ. ಅರುಳು ಮರುಳು ಜಾಸ್ತಿಯಾಗಿರಬಹುದು ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ್ ಜೋಡೊ ಯಾತ್ರೆ ಕೈಗೊಂಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಲೇ ಇದ್ದಾರೆ.
'ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ದೇಶದಲ್ಲಿ ಒಡಕು ಮೂಡಿಸಿದ್ದಾರೆ. ಕೋಮುಗಳ ನಡುವೆ ದ್ವೇಷವನ್ನು ಹರಡಿದ್ದಾರೆ' ಎಂದು ಆರೋಪಿಸಿದ್ದರು.
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಆರ್ಥಿಕ ಕುಸಿತ, ರೈತರ ಸಮಸ್ಯೆ ಹಾಗೂ ಬೆಲೆ ಏರಿಕೆಗಳಂತಹ ವಿಚಾರಗಳ ಕುರಿತು ರಾಹುಲ್ ಮಾತನಾಡಿದ್ದರು. ಈ ಸಂಕಷ್ಟಗಳಿಗೆ ಮೋದಿಯವರ ಸರ್ವಾಧಿಕಾರಿ ದೋರಣೆಗಳೇ ಕಾರಣವೆಂದು ಅವರು ಹೇಳಿದ್ದರು.
ಕರ್ನಾಟಕದಲ್ಲಿರುವುದು ಕಡುಭ್ರಷ್ಟ ಸರಕಾರ ಎಂದ ರಾಹುಲ್
ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆ ಸಾಗುತ್ತಿದೆ. ಯಾತ್ರೆಯುದ್ದಕ್ಕೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವನ್ನು ರಾಹುಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಡುಭ್ರಷ್ಟ ಸರಕಾರವೊಂದು ಕರ್ನಾಟಕವನ್ನು ಆಳುತ್ತಿದೆ. ಪ್ರತಿ ಕಾಮಗಾರಿಗೂ 40 ಪರ್ಸೆಂಟ್ ಕಮಿಷನ್ ಪಡೆಯಲಾಗುತ್ತಿದೆ. ಮಾನ್ಯತೆ ಪಡೆಯಲು ಖಾಸಗಿ ಶಾಲೆಗಳು ಲಂಚ ನೀಡಬೇಕಿದೆ. ಪಿಎಸ್‌ಐ ಹುದ್ದೆಗಳು ಲಕ್ಷಾಂತರ ರುಪಾಯಿಗಳಿಗೆ ಮಾರಾಟವಾಗಿವೆ ಎಂದು ಆರೋಪಿಸಿದ್ದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದ ರಾಹುಲ್, 'ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ ₹ 2,500 ಕೋಟಿ ನೀಡಬೇಕಿರುವ ದುಸ್ಥಿತಿ ಬಿಜೆಪಿಯಲ್ಲಿದೆ. ಇದನ್ನು ಬಿಜೆಪಿ ಶಾಸಕರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ' ಎಂದು ಟೀಕಿಸಿದ್ದರು.












Click it and Unblock the Notifications