ಲಾಲ್ ಬಹದ್ದೂರ್ ಶಾಸ್ತ್ರಿ 57ನೇ ಪುಣ್ಯ ಸ್ಮರಣೆ, ಕಾಂಗ್ರೆಸ್ ಬಿಜೆಪಿ ಆರೋಪಗಳಿಗೆ ಉತ್ತರಿಸಲಿ: ಬೊಮ್ಮಾಯಿ
ಬೆಂಗಳೂರು, ಜನವರಿ 11: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪಗಳು ನಿರಾಧಾರವಾಗಿವೆ. ಮೊದಲು ನಾವು ಆರೋಪಗಳಿಗೆ ಕಾಂಗ್ರೆಸ್ ಉತ್ತರಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ನಡೆದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 57ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸರ್ಕಾರದ ವಿರುದ್ಧದ ಕಾಂಗ್ರೆಸ್ ಚಾರ್ಜ್ ಶೀಟ್ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಆರೋಪಪಟ್ಟಿಯ ವಿಷಯಗಳನ್ನು ನೋಡಿದರೆ ಅದರಲ್ಲಿ ಯಾವುದೇ ಆಧಾರವಿಲ್ಲದ್ದು. ಬಿಜೆಪಿ ಈ ಹಿಂದೆ ಆರೋಪಪಟ್ಟಿಯನ್ನು ಅವರ ಮೇಲೆ ಬಿಡುಗಡೆ ಮಾಡಿದ್ದೆವು. ಅದಕ್ಕೆ ಕಾಂಗ್ರೆಸ್‌ನವರು ಇನ್ನೂ ಉತ್ತರ ನೀಡಿಲ್ಲ. ಮೊದಲು ಅವರ ಕಾಲದ ಕರ್ಮಕಾಂಡಗಳ ಬಗ್ಗೆ ಉತ್ತರ ಹೇಳಲಿ. ಬರುವ ದಿನಗಳಲ್ಲಿ ಇನ್ನಷ್ಟು ಚಾರ್ಜ್ ಶೀಟ್ ಗಳು ಬರಲಿವೆ ಎಂದು ಅವರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಬುಧವಾರ ಸರಣಿ ಟ್ವಿಟ್ ಮಾಡಿದೆ. ಬಿಜೆಪಿ ಪಾಪದ ಪುರಾಣ ಎಂಬ ಅಭಿಯಾನ ಆರಂಭಿಸಿದೆ. ಬಿಜೆಪಿ 40ಪರ್ಸೆಮಟ್ ಕಮಿಷನ್ ಸರ್ಕಾರ ಎಂದು ದೂರಿದೆ. ಹೀಗೆ ಬಿಜೆಪಿ ವಿರುದ್ಧ ಹಲವು ಆರೋಪಗಳನ್ನು ಕಾಂಗ್ರೆಸ್ ಮಾಡಿದೆ.
ಮಾಜಿ ಪ್ರಧಾನಿಗಳ ವ್ಯಕ್ತಿತ್ವ ಪ್ರೇರಣೆಯಾಗಲಿ
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೇರು ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ. ದೇಶ ಕಂಡ ಅತ್ಯಂತ ಪ್ರಭಾವಶಾಲಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಯವರ 57 ನೇ ಪುಣ್ಯ ತಿಥಿ ಆಚರಿಸಲಾಗುತ್ತಿದೆ. ಅವರ ಸಾವು ಒಂದು ದುರಂತ. ಅವರು ಪಾಕಿಸ್ತಾನದ ಮೇಲೆ ಗೆದ್ದ ಯುದ್ಧದ ಶಾಂತಿಯ ಸಲುವಾಗಿ ರಷ್ಯಾದ ತಾಷ್ಕೆಂಟ್ ಗೆ ತೆರಳಿದಾಗ ಅವರ ಸಾವಿಗೀಡಾದರು. ಅವರ ಸಾವಿನ ಬಗ್ಗೆ ಸಾಕಷ್ಟು ಸಂಶಯಗಳು ವ್ಯಕ್ತವಾಗಿವೆ. ಆದರೆ ವಿದೇಶಕ್ಕೆ ದೇಶದ ಕೆಲಸಕ್ಕಾಗಿ, ಶಾಂತಿಗಾಗಿ ತೆರಳಿದ ಸಂದರ್ಭದಲ್ಲಿ ಮರಣ ಹೊಂದಿದ್ದು, ಭಾರತಕ್ಕೆ ದೊಡ್ಡ ಆಘಾತವುಂಟು ಮಾಡಿತ್ತು ಎಂದು ಶಾಸ್ತ್ರಿಯವರನ್ನು ಬೊಮ್ಮಾಯಿ ಸ್ಮರಿಸಿದರು.
ನ್ಯಾಯನಿಷ್ಠುರ ಆಡಳಿತ
ಅತ್ಯಂತ ಬಡ ಕುಟುಂಬದಿಂದ ಬಂದು ಸರಳವಾಗಿ ಬದುಕು ನಡೆಸಿದವರು ಲಾಲ್ ಬಹದ್ದೂರು ಶಾಸ್ತ್ರಿಗಳು. ಬಡತನದ ಬಗ್ಗೆ ಎಂದೂ ಕೀಳರಿಮೆ ಹೊಂದಿರಲಿಲ್ಲ. ಶ್ರೀಮಂತರಾಗಬೇಕೆಂಬ ಹಂಬಲವೂ ಇರಲಿಲ್ಲ. ನ್ಯಾಯನಿಷ್ಠುರರಾಗಿ, ಸತ್ಯದಿಂದ ಆಡಳಿತ ಮಾಡಿ , ನಮ್ಮೆಲ್ಲರಿಗೂ ಆದರ್ಶಪ್ರಾಯರು. ಅವರಿನ್ನೂ ಹೆಚ್ಚಿನ ಕಾಲ ಬದುಕಬೇಕಿತ್ತು. ಈ ದೇಶವನ್ನು ಆಳಿ, ಒಳ್ಳೆಯ ಸತ್ಸಂಪ್ರದಾಯವನ್ನು ಹಾಕಿಕೊಡುತ್ತಿದ್ದರು ಎಂದರು.

ಅವರ ಜೀವನವೇ ಇಂದಿಗೂ ಆದರ್ಶ ಪ್ರೇರಣೆ ನೀಡುವಂಥದ್ದು. ಅವರನ್ನು ಸ್ಮರಿಸುವ ಮೂಲಕ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕು. ಜೈ ಜವಾನ್, ಜೈ ಕಿಸಾನ್, ಅವರ ಅತ್ಯಂತ ಮಹತ್ವದ ಕೊಡುಗೆ. ಇಂದಿಗೂ ಈ ಘೋಷವಾಕ್ಯ ದೇಶದ ಅಭಿವೃದ್ಧಿಗೆ ಅಗತ್ಯ ಎಂದು ಹೇಳಿದರು.
ಇನ್ನೂ ಮೆಟ್ರೋ ಪಿಲ್ಲರ್ ದುರಂತ ಬಗ್ಗೆ ಉತ್ತರಿಸಿದ ಅವರು, ಮಂಗಳವಾರ ದುರಂತದಲ್ಲಿ ಅಸುನೀಗಿದವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಪ್ರಕರಣ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.












Click it and Unblock the Notifications