Ticket Politics: ವಿಜಯೇಂದ್ರಗೆ ಟಿಕೆಟ್ ವಿಚಾರದಲ್ಲಿ ಎಳಸುಗಳ ಮಾತು ಕೇಳಬೇಕಾಯ್ತು, BSY ಸ್ಥಿತಿ ಹೀನಾಯ: ಕಾಂಗ್ರೆಸ್ ಟೀಕೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಟಿಕೆಟ್ ಕೊಡುವ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆ ಕುರಿತು ಕಾಂಗ್ರೆಸ್ ಲೇವಡಿ ಮಾಡಿದೆ.
ಬೆಂಗಳೂರು, ಮಾರ್ಚ್ 13: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಟಿಕೆಟ್ ಕೊಡುವ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆ ಕುರಿತು ಕಾಂಗ್ರೆಸ್ ಲೇವಡಿ ಮಾಡಿದೆ.
ಕರ್ನಾಟಕವು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಬಿ.ಎಸ್.ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಸಿಟಿ ರವಿ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆ ಆಧಾರದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಟ್ವೀಟ್ ಮೂಲಕ ಕರ್ನಾಟಕ ಕಾಂಗ್ರೆಸ್ ವಾಗ್ಬಾಣ ಬಿಟ್ಟಿದೆ.

ಟ್ವೀಟ್‌ನಲ್ಲಿ ಕಾಂಗ್ರೆಸ್ ಪಕ್ಷ, ''ವಯಸ್ಸಿನ ಕಾರಣ ನೀಡಿ 'ಸಿಎಂ' ಹುದ್ದೆಯಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದಾಯ್ತು. ನಿವೃತ್ತಿಯ ನಂತರವೂ ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಯಡಿಯೂರಪ್ಪನವರಿಗೆ 'ಟಾರ್ಗೆಟ್' ಕೊಟ್ಟಿದ್ದಾಯ್ತು. ಇದೀಗ ಅವರ ಮಗನಿಗೆ (ಬಿ.ವೈ.ವಿಜಯೇಂದ್ರ) ಚುನಾವಣಾ ಟಿಕೆಟ್ ವಿಚಾರದಲ್ಲಿ 'ಸಿಟಿ ರವಿ'ಯಂತ ಎಳಸುಗಳ ಮಾತು ಕೇಳಬೇಕಾಯ್ತು. ಯಡಿಯೂರಪ್ಪನವರೇ, ಬಿಜೆಪಿಯಲ್ಲಿ ನಿಮ್ಮ ಸ್ಥಿತಿ ಇಷ್ಟು ಹೀನಾಯವಾಯ್ತಲ್ಲ'' ಎಂದು ಬಿಜೆಪಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಕಾಲೆಳೆದಿದೆ.
ಬಿಜೆಪಿಯಲ್ಲಿರುವ ನಿಯಮದಂತೆ ವಯಸ್ಸಿನ ಆಧಾರದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಸದ್ಯ ಚುನಾವಣೆ ಎದುರು ನೋಡುತ್ತಿರುವ ಬಿಜೆಪಿಯಲ್ಲಿ ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವ ವಿಚಾರ ಆಗಾಗ ಮುನ್ನೆಲೆಗೆ, ಚರ್ಚೆಗೆ ಬರುತ್ತಲೇ ಇದೆ. ಸ್ವಪಕ್ಷ ನಾಯಕರೇ ಅವರಿಗೆ ಟಿಕೆಟ್ ನೀಡುವುದಕ್ಕೆ ಅಡ್ಡಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಮಧ್ಯೆ ಸಿ.ಟಿ. ರವಿ ಅವರು ಮಾಧ್ಯಮಗಳ ಮುಂದೆ ನೀಡಿದ ಪ್ರತಿಕ್ರಿಯೆಯನ್ನೇ ಕಾಂಗ್ರೆಸ್ ಬಿಜೆಪಿ ವಿರುದ್ಧ ಅಸ್ತ್ರವಾಗಿ ಪರಿವರ್ತಿಸಿಕೊಂಡಿದೆ.

ಟಿಕೆಟ್ ವಿಚಾರ ಅಡುಗೆ ಮನೆಯಲ್ಲಿ ನೀರ್ಧಾರವಾಗಲ್ಲ :ಸಿ.ಟಿ ರವಿ
ಬಿ.ವೈ ವಿಜಯೇಂದ್ರ ಅವರಿಗೆ ಟಿಕೆಟ್ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಕೇವಲ ಯಡಿಯೂರಪ್ಪನವರ ಮಕ್ಕಳು ಅನ್ನುವು ಕಾರಣಕ್ಕೆ ಟಿಕೆಟ್ ಸಿಗುವುದಿಲ್ಲ. ಆ ಟಿಕೆಟ್ ಕೊಡುವ ನೀರ್ಣಯ ಅವರ ಕಿಚನ್ (ಅಡುಗೆ ಮನೆ) ಮನೆಯಲ್ಲಿ ತೀರ್ಮಾನ ಆಗುವುದಿಲ್ಲ. ಯಾರಿಗೆ ಟಿಕೆಟ್ ಕೊಡಬೇಕು, ಕೊಡಬಾರದು ಎಂಬುದನ್ನು ಪಾರ್ಲಿಮೆಂಟ್ರಿ ಬೋರ್ಡ್ ತೀರ್ಮಾನಿತ್ತದೆ. ಹಲವು ಮಾನದಂಡಗಳ ಮೇಲೆ ಪಕ್ಷ ನಿರ್ಧರಿಸುತ್ತದೆ. ಸಮೀಕ್ಷೆ ಒಳಗೊಂಡು ಪಕ್ಷ ಆ ಬಗ್ಗೆ ನಿರ್ಧಾರ ಮಾಡಬಹುದು. ಇದರ ಹೊರತಾಗಿ ಇಡೀ ಪಕ್ಷವನ್ನೇ ಇಲ್ಲ ಸರ್ಕಾರವನ್ನೇ ಟಿಕೆಟ್ ಕೊಡುವ ವಿಚಾರದಲ್ಲಿ ಒಪ್ಪಿಸುವ ಪದ್ಧತಿ ಬಿಜೆಪಿಯಲ್ಲಿ ಇಲ್ಲ ಸಿಟಿ ರವಿ ಹೇಳಿದ್ದಾರೆ. ಇದನ್ನು ಇದೀಗ ಕಾಂಗ್ರೆಸ್ ಅಸ್ತ್ರವಾಗಿ ಮಾಡಿಕೊಂಡು ಬಿಜೆಪಿಗೆ ತಿವಿಯಲು ಶುರುಮಾಡಿಕೊಂಡಿದೆ.












Click it and Unblock the Notifications