ಈ ಸಲ ಸಿದ್ದರಾಮಯ್ಯನವರಿಗೆ ನಿರಾಸೆ ಮಾಡಲ್ಲ: ಹೆಚ್.ಕೆ.ಪಾಟೀಲ್ ಹೇಳಿದ್ದೇನು.?
ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಮಹದಾಯಿ ವಿಚಾರವನ್ನ ಯಾಕೆ ಮಾತನಾಡಲಿಲ್ಲ ಎಂದು ಹೆಚ್ ಕೆ ಪಾಟೀಲ್ ಪ್ರಶ್ನಿಸಿದ್ದಾರೆ
ಗದಗ,ಫೆಬ್ರವರಿ28: ರಾಜ್ಯ ಕಾಂಗ್ರೆಸ್ ನಾಯಕರು ಈಗಾಗಲೇ ಪ್ರಜಾಧ್ವನಿ ಯಾತ್ರೆಯ ಮೂಲಕ ರಾಜ್ಯಾದ್ಯಂತ ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಗದಗ ಜಿಲ್ಲೆಯಲ್ಲಿ ಈ ಬಾರಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಗ್ಯಾರಂಟಿ. ಈ ಸಲ ಸಿದ್ದರಾಮಯ್ಯನವರಿಗೆ ನಿರಾಸೆ ಮಾಡಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೆಚ್. ಕೆ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಗದಗ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರವನ್ನು ಗೆದ್ದು ಕೊಡ್ತೇವೆ. ನಮ್ಮ ಕಾರ್ಯಕ್ರಮಗಳ ಮೂಲಕ ನಾವು ಮತ ಕೇಳ್ತೇವೆ ಎಂದು ಹೇಳಿದರು.

ಮೋದಿ ನಿನ್ನೆ ಶಿವಮೊಗ್ಗದಲ್ಲಿ ಜನರ ಬಗ್ಗೆ ಒಂದು ಮಾತನ್ನೂ ಮಾತಾಡಲಿಲ್ಲ. ಸೋನಿಯಾ ಗಾಂಧಿಯವರಿಗೆ ಛತ್ರಿ ಹಿಡಿದಿದ್ರು, ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಛತ್ರಿ ಹಿಡಿದಿಲ್ಲ ಎಂದಿದ್ದಾರೆ.
ಧ್ವಜಾರೋಹಣ ಮಾಡೋವಾಗ ಯಾರಾದ್ರೂ ಛತ್ರಿ ಹಿಡಿಯುತ್ತಾರೇನು? ಎಂದು ಪ್ರಶ್ನಿಸಿದ ಅವರು, ಮಲ್ಲಿಕಾರ್ಜುನ್ ಖರ್ಗೆಯವರು ಬರೋ ಐದು ನಿಮಿಷ ಮುಂಚೆ ಇರ್ತಾರೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಹದಾಯಿ ಬಗ್ಗೆ ಒಂದೂ ಮಾತಾಡಲಿಲ್ಲ, ಮಹದಾಯಿ ವಿಚಾರದಲ್ಲಿ ಅನ್ಯಾಯ ಆದ್ರೂ ಸುಮ್ಮನೇ ಕೂತಿದ್ದಿರಲ್ಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಾಚಿಕೆ ಆಗಲ್ವಾ ಎಂದು ಕಿಡಿಕಾರಿದರು. ಮಹದಾಯಿ ವಿಚಾರದಲ್ಲಿ ಅರಣ್ಯಕ್ಕೆ ಅರ್ಜಿ ಕೊಡಬೇಕಾಗಿಲ್ಲ ಅಂತಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಂದ್ರು, ಮರುದಿನ ಅರ್ಜಿ ಕೊಟ್ಟಿರಲ್ಲ ನಿಮಗೆ ಅರಣ್ಯ ಭೂಮಿ ಸಿಕ್ಕಿತಾ ಎಂದು ಪ್ರಶ್ನಿಸಿದರು.
ಮೋದಿ ಸ್ವಿಸ್ ಬ್ಯಾಂಕಿನಿಂದ ಹಣ ತಂದು 15 ಲಕ್ಷ ನಿಮ್ಮ ಅಕೌಂಟಿಗೆ ಹಾಕ್ತೀನಿ ಅಂದ್ರು. ಎಲೆಕ್ಷನ್ ಬಂತು, ಜನಧನ್ ಅಕೌಂಟ್ ಮಾಡಿಸಿದ್ರು.ಅತ್ತೆ ಸೊಸೆ, ಮಾವ, ಮಗ, ಮಗಳು ಎಲ್ಲರೂ ಬ್ಯಾಂಕಿಗೆ ಹೋಗಿ ನಮ್ಮ ಅಕೌಂಟಿಗೆ ಹಣ ಜಮಾ ಆಗಿವೆಯಾ ಅಂತಾ ಜನ ಮ್ಯಾನೇಜರ್ ಗೆ ಕೇಳಿದ್ರು ಎಂದು ಮೋದಿ ವಿರುದ್ದ ಆಕ್ರೋಶ ಹೊರಹಾಕಿದರು.
ಮತ್ತೆ ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಈ ಹಿಂದೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರು, ಮನಮೋಹನ್ ಸಿಂಗ್ ಇದ್ದಾಗ ಎಷ್ಟು ಉದ್ಯೋಗ ಇದ್ದವೋ ಈಗ 70% ಕಡಿಮೆ ಆಗಿವೆ. ಕೋವಿಡ್ ಬಂದಾಗ ಒಂದು ಬಾರಿಯಾದ್ರೂ ರಾಜ್ಯಕ್ಕೆ ಬಂದ್ರಾ, ಈಗ ಓಡೋಡಿ ಬರ್ತಿದ್ದಾರೆ ನರೇಂದ್ರ ಮೋದಿ, ಅಮಿತ್ ಶಾ ಎಂದು ವ್ಯಂಗ್ಯವಾಡಿದರು.












Click it and Unblock the Notifications