ಬಿಜೆಪಿಯ ಮೀಸಲಾತಿ ನಿರ್ಧಾರಗಳೇ ಕಾಂಗ್ರೆಸ್ ತಿರುಗುಬಾಣ ಆಗುತ್ತವೆ: ಬೊಮ್ಮಾಯಿ ತಿರುಗೇಟು
ಬೆಂಗಳೂರು, ಏಪ್ರಿಲ್ 06: ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳ ಕುರಿತು ಬಿಜೆಪಿ ತೆಗೆದುಕೊಂಡ ನಿರ್ಧಾರಗಳೇ ಕಾಂಗ್ರೆಸ್ಸಿಗೆ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಉತ್ತರ ಕರ್ನಾಟಕದ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮೀಸಲಾತಿ ಹೆಚ್ಚಿಸುವ ರಾಜಕೀಯ ಇಚ್ಛಾಶಕ್ತಿ ಕಾಂಗ್ರೆಸ್ಸಿಗೆ ಇರಲಿಲ್ಲ. ಕಾಂಗ್ರೆಸ್‌ನವರದ್ದು ಕೇವಲ ಡೋಂಗಿತನ. ಕಾಂಗ್ರೆಸ್ ಮಾಡದೇ ಇರುವುದನ್ನು ಬಿಜೆಪಿ ಮಾಡಿ ತೋರಿಸಿದೆ. ಈ ಮೂಲಕ ಮೀಸಲಾತಿ ವಿಚಾರ ಬಿಜೆಪಿಗೆ ತಿರುಗುಬಾಣ ಆಗಲಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಅವರು ಟಾಂಗ್ ನೀಡಿದರು.

ಕಾಂಗ್ರೆಸ್‌ನವರು ಇಷ್ಟು ದಿನದ ದೀನದಲಿತರನ್ನು ಚುನಾವಣಾ ಮತ ಬ್ಯಾಂಕ್‌ಗಳಾಗಿ ಮಾಡಿಕೊಂಡಿದ್ದರು. ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ನಾವು ಮಾಡಿದ್ದೇವೆ. ಹೀಗಾಗಿ ಹತಾಶೆಯಿಂದ ಕಾಂಗ್ರೆಸ್ ಆರೋಪಿಸುತ್ತಿದೆ. ಇಷ್ಟುದಿನ ಅವರು ಹೇಳಿಕೊಂಡು ಬಂದಿದ್ದು ಅವರಿಗೇ ತಿರುಗು ಬಾಣ ಆಗಲಿದೆ ಎಂದು ಪುನರುಚ್ಚರಿಸಿದರು.
ಏಪ್ರಿಲ್ 8ರಂದು ಬಿಜೆಪಿ ಪಟ್ಟಿ ರಿಲೀಸ್
ಚುನಾವಣೆ ಟಿಕೆಟ್ ಹಂಚಿಕೆ ಕುರಿತು ಕರ್ನಾಟಕ ರಾಜ್ಯ ಕೋರ್ ಕಮಿಟಿ ಸಭೆಯು ನಿನ್ನೆ ಬುಧವಾರಕ್ಕೆ ಮುಕ್ತಾಯವಾಗಿದೆ. ಈ ಕುರಿತು ಅಲ್ಲಿ ಇನ್ನಷ್ಟು ಅಂಶಗಳನ್ನು ಚರ್ಚಿಸಲು ಏಪ್ರಿಲ್ 8 ರಂದು ಪುನಃ ಸಭೆ ಸೇರಿ ಅಂದೇ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಬಿಜೆಪಿಯಿಂದ ಪವನ್ ಕಲ್ಯಾಣ್ ಭೇಟಿ
ಸೆಲೆಬ್ರಿಟಿಗಳು ಬಿಜೆಪಿ ಪರ ಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ತೆಲಗು ಚಿತ್ರನಟ ಪವನ್ ಕಲ್ಯಾಣ್ ಅವರನ್ನು ಕೇಂದ್ರ ನಾಯಕರು ಭೇಟಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕಾದು ನೋಡಿ ಎಂದು ಹೇಳಿ ಕುತೂಹಲ ಕೆರಳಿಸಿದರು. ಬುಧವಾರವಷ್ಟೇ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ಸಿಎಂ ಬೊಮ್ಮಾಯಿ ಜೊತೆಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಬಿಜೆಪಿ ಸೇರುವ ಬಗ್ಗೆ ಸ್ಪಷ್ಟನೆ ನಿಡಿದ್ದ ನಟ ಸುದೀಪ್ ಮುಖ್ಯಮಂತ್ರಿಗಳನ್ನು ಬೆಂಬಲಿಸುವುದಾಗಿಯು, ಅವರ ಪರ ಪ್ರಚಾರ ಮಾಡುವುದಾಗಿಯೂ ಹೇಳಿದ್ದರು.

ಯೋಗೆಶ್ ಗೌಡ ಕೊಲೆ ಪ್ರಕರಣದ ಆರೋಪಿ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಅವರಿಗೆ ಅವರು ಟಿಕೆಟ್ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪ್ರಕರಣ ನ್ಯಾಯಾಲಯದಲ್ಲಿದೆ. ಕಾನೂನು ಹಂತದಲ್ಲಿರುವಾಗ ಆ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ಪ್ರಕರಣಗಳ ಕುರಿತು, ಆರೋಪಿಗಳಿಗೆ ಟಿಕೆಟ್ ನೀಡುವ ಬಗ್ಗೆ ಜನರ ತಿರ್ಮಾನ ಮಾಡುತ್ತಾರೆ ಎಂದರು.
ಪ್ರಕರಣದ ಹಂತ ಪರಿಶೀಲಿಸಿ ಟಿಕೆಟ್
ಬಿಜೆಪಿ ಪಕ್ಷದಲ್ಲಿ ಅಪರಾಧ ಪ್ರಕರಣಗಳ ಹಿನ್ನೆಲೆ ಉಳ್ಳವರಿಗೆ ಟಿಕೆಟ್ ನೀಡುವ ವಿಚಾರ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕಾನೂನು ಬಹಳ ಸ್ಪಷ್ಟವಾಗಿದ್ದು, ಪ್ರಕರಣಗಳು ವಿವಿಧ ಹಂತದಲ್ಲಿ ಇರುತ್ತವೆ. ಅವುಗಳೆಲ್ಲವನ್ನು ಗಮನಿಸಬೇಕಾಗುತ್ತದೆ. ಅಳೆದ ತೂಗಿ ಎಲ್ಲವನ್ನು ಗಮನಿಸಿ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದರು.
ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ ಮೂರು ನಾಲ್ಕು ಹಂತದಲ್ಲಿ ಪರಿಶೀಲಿಸಿ ವರದಿ ಪಡೆದುಕೊಳ್ಳಲಾಗಿದೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಟಿಕೆಟ್ ನೀಡಲಾಗುವುದು. ಶಿಗ್ಗಾವಿ ಮತ್ತು ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದು ಕೇವಲ ವದಂತಿ, ಅದೆಲ್ಲವು ಸತ್ಯಕ್ಕೆ ದೂರವಾದವು. ಅಂತಹ ವಿಚಾರಗಳಿಗೆ ಯಾರು ಕಿವಿಕೊಡಬಾರದು ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications