Karnataka Assembly Elections 2023: ಸಕ್ಕರೆ ನಾಡಿನಲ್ಲಿ ಕೈ ಆಪರೇಷನ್! ಕಾಂಗ್ರೆಸ್ ನತ್ತ ಸಚಿವ ನಾರಾಯಣಗೌಡ?
ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ನಾರಾಯಣ ಗೌಡ ಅವರು ಕಾಂಗ್ರೆಸ್ ಸೇರ್ಪಡೆ ಕುರಿತು ಸುಳಿವು ನೀಡಿದ್ದಾರೆ.
ಮಂಡ್ಯ,ಮಾರ್ಚ್ 3: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಚುನಾವಣೆ ಗೆಲ್ಲಲು ಭರ್ಜರಿ ಸಿದ್ಧತೆ ನಡೆಸಿದ್ದು, ರಾಷ್ಟ್ರೀಯ ನಾಯಕರು ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಇತ್ತ ರಾಜ್ಯ ನಾಯಕರೂ ತಮ್ಮ ತಮ್ಮ ಪಕ್ಷವನ್ನ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅನ್ಯ ಪಕ್ಷದ ಪ್ರಭಾವಿ ನಾಯಕರಿಗೆ ದಾಳ ಹಾಕುತ್ತಿದ್ದಾರೆ.
ಆಡಳಿತಾರೂಢ ಬಿಜೆಪಿ ಈ ಬಾರಿ ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದ್ದು ಹೈಕಮಾಂಡ್ ನಾಯಕರ ಮೂಲಕ ಮಂಡ್ಯ ಜೆಡಿಎಸ್ ಭದ್ರಕೋಟೆಯನ್ನ ಛಿದ್ರಗೊಳಿಸಲು ಪ್ಲಾನ್ ಹಾಕಿಕೊಂಡಿವೆ. ಈಗಾಗಲೇ ಬಿಜೆಪಿಯ ಚಾಣಕ್ಷ ಅಮಿತ್ ಶಾ ಅವರು ಮಂಡ್ಯ ಮೆಗಾ ಡೈರಿ ಉದ್ಘಾಟನೆ ಮೂಲಕ ಚುನಾವಣಾ ಪ್ರಚಾರವನ್ನ ಆರಂಭಿಸಿದ್ರು. ಇದೀಗ ಮಾರ್ಚ್ 12 ರಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ.

ಜೆಡಿಎಸ್‌ನ ಭದ್ರಕೋಟೆಯನ್ನು ಛಿದ್ರ ಮಾಡಿ ಮೊದಲ ಬಾರಿಗೆ ಕಮಲ ಅರಳುವಂತೆ ಮಾಡಿದ ನಾರಾಯಣ ಗೌಡರು ಬಿಜೆಪಿ ನಾಯಕರಿಗೆ ಚುನಾವಣೆ ಹೊತ್ತಲಿ ಶಾಕ್ ಕೊಡ್ತಾರಾ ಎನ್ನುವ ಮಾತುಗಳು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಹೌದು ಈಗಾಗಲೇ ಅಭ್ಯರ್ಥಿ ವಿಚಾರದಲ್ಲಿ ಮೂರು ಪಕ್ಷಗಳಲ್ಲೂ ಗೊಂದಲ ಮುಂದುವರೆದಿದ್ದು, ಚುನಾವಣೆ ವೇಳೆಗೆ ರಾಜಕೀಯವಾಗಿ ಹತ್ತು ಹಲವು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದುವರೆಗೂ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಇದುವರೆಗೆ ಅಧಿಕೃತ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡಿಲ್ಲ.ಇನ್ನೂ ನಾರಾಯಣ ಗೌಡರು ತಮ್ಮ ಮುಂದಿನ ರಾಜಕೀಯ ಭವಿಷ್ಯದ ದೃಷ್ಠಿಯಿಂದಾಗಿ ಚುನಾವಣೆ ಹೊತ್ತಿಗೆ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಸಚಿವ ನಾರಾಯಣ ಗೌಡರು ಪಕ್ಷಾಂತರದ ಸುಳಿವು ನೀಡಿದ್ದಾರೆ.
ಈ ಕುರಿತು ಸಚಿವ ನಾರಾಯಣ ಗೌಡ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಆಹ್ವಾನ ಬಂದಿರುವುದು ನಿಜ. ಆದರೆ, ಇದುವರೆಗೂ ಸೇರ್ಪಡೆ ಕುರಿತು ಯಾವುದೇ ತಿರ್ಮಾನವನ್ನ ತೆಗೆದುಕೊಂಡಿಲ್ಲ. ನನ್ನ ಆಪ್ತರು ಹಾಗೂ ಹಿತೈಷಿಗಳ ಜೊತೆಗೆ ಚರ್ಚಿಸಬೇಕು ಎಂದಿದ್ದು, ಬಳಿಕ ತಿರ್ಮಾನ ತೆಗೆದುಕೊಳ್ಳುವುದಾಗಿ ಹೇಳಿರುವ ಅವರು, ಕೆ ಆರ್ ಪೇಟೆಯಲ್ಲಿ ಕಾಂಗ್ರೆಸ್ ನಾಯಕತ್ವದ ಕೊರತೆ ಇದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಒತ್ತಾಯ ಇದೆ ಎಂದು ಹೇಳುವ ಮೂಲಕ ಪಕ್ಷಾಂತರ ಪರ್ವದ ಸುಳಿವು ನೀಡಿದ್ದಾರೆ.

ಇತ್ತ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳಲ್ಲಿ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಮುಂದಿನ ರಾಜಕೀಯ ಜೀವನಕ್ಕಾಗಿ ಕಾಂಗ್ರೆಸ್ ಪಕ್ಷವನ್ನ ಸಚಿವ ನಾರಾಯಣ ಗೌಡರು ಸೇರಿಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications