Belekeri port scam: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ ಶಿಕ್ಷೆ ಪ್ರಕಟ, ಎಷ್ಟು ವರ್ಷ ಜೈಲು?
ಬೇಲೆಕೇರಿ ಬಂದರಿನಿಂದ ಅಕ್ರಮ ಅದಿರು ಸಾಗಾಟ ಕೇಸ್‌ನಲ್ಲಿ ಬಂಧನವಾಗಿದ್ದ ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರಿಗೆ ಇಂದು ಶಿಕ್ಷೆ ಪ್ರಕಟವಾಗಿದೆ. ಸೈಲ್ ಅವರಿಗೆ ಬರೋಬ್ಬರಿ 7 ವರ್ಷ ಜೈಲು ಹಾಗೂ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೊನ್ನೆಯೇ (ಅಕ್ಟೋಬರ್ 24) ಶಾಸಕ ಸತೀಶ್ ಸೈಲ್ ಅವರು ಈ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿತ್ತು. ಅದರಂತೆ ಅವರ ಬಂಧನವೂ ಆಗಿತ್ತು. ಇಂದು ಈ ಕೇಸ್‌ನ ಅಂತಿಮ ತೀರ್ಪು ಪ್ರಕಟವಾಗಿದೆ. ಏಳು ವರ್ಷಗಳ ಕಾರಾಗೃಹ ಶಿಕ್ಷೆ ಜೊತೆಗೆ 9 ಕೋಟಿ 60 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

ಏನಿದು ಪ್ರಕರಣ?: ಕರ್ನಾಟಕದಲ್ಲಿ ಈ ಹಿಂದೆ ಭಾರಿ ಸದ್ದು ಮಾಡಿದ್ದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರದ ಶಾಸಕ ಸತೀಶ್ ಸೈಲ್ ಆರೋಪಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಕೂಡಲೇ ಶಾಸಕ ಸತೀಶ್ ಸೈಲ್ ಅವರನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆ ಇತ್ತೀಚೆಗೆ ರಾತ್ರೋರಾತ್ರಿ ಅವರನ್ನು ಬಂಧಿಸಿ, ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಇನ್ನು ಈ ಕೇಸ್ ಬರೋಬ್ಬರಿ 14 ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಇದು ಮೊದಲಿಗೆ ರಾಜ್ಯದೆಲ್ಲೆಡೆ ಭಾರೀ ಸದ್ದು ಮಾಡಿದ್ದ ಪ್ರಕರಣವಾಗಿತ್ತು.

ಉತ್ತರ ಕನ್ನಡದ ಬೇಲೆಕೇರಿ ಎನ್ನುವ ಬಂದರಿನಿಂದ ಕಬ್ಬಿಣದ ಅದಿರು ಕಳ್ಳತನ ಮತ್ತು ಅಕ್ರಮ ರಫ್ತು ವಿಚಾರಕ್ಕೆ ಸಂಬಂಧಿಸಿದ ಕೇಸ್ ಇದು. ಈ ಸಂಬಂಧ ಕಳೆದ ಗುರುವಾರವಷ್ಟೇ ಶಾಸಕ ಸತೀಶ್ ಸೈಲ್ ವಶಕ್ಕೆ ಪಡೆಯುವಂತೆ ಕೋರ್ಟ್ ಹೇಳಿತ್ತು. ಅದರಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರನ್ನು ಬಂಧಿಸಿದ್ದರು.
ಇನ್ನು ಈ ಕೇಸ್‌ನಲ್ಲಿ ಬರೋಬ್ಬರಿ 200 ಕೋಟಿ ರೂಪಾಯಿಗೂ ಹೆಚ್ಚಿನ ಅಕ್ರಮ ನಡೆದಿದೆ ಎನ್ನುವ ಆರೋಪವಿದೆ. 200 ಕೋಟಿ ಮೌಲ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಈ ಕೇಸ್‌ನಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಅವರು ಬಂಧನದಲ್ಲಿದ್ದರು. ಈ ಸಂಬಂಧ ಕೋರ್ಟ್ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.
ಬೇಲೆಕೇರಿಯಲ್ಲಿ ಅದಿರು ನಾಪತ್ತೆ ಸಂಬಂಧ ಕೇಸ್ ದಾಖಲಾಗಿತ್ತು. ಈಗಾಗಲೇ ಬೇಲೆಕೇರಿ ಅದಿರು ನಾಪತ್ತೆ ಕೇಸ್ ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಕೋರ್ಟ್ ಗುರುವಾರ ಅಂತಿಮ ಆದೇಶ ನೀಡಿತ್ತು. ಸಿಬಿಐನಿಂದ ಬೇಲೆಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದಂತೆ 6 ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿತ್ತು. ಅಲ್ಲದೇ ಈ ಕೇಸ್‌ಗಳಿಗೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಕೂಡ ಸಲ್ಲಿಕೆಯಾಗಿದೆ. ಇಂದು ತೀರ್ಪು ಪ್ರಕಟಗೊಂಡಿದೆ. ಇದೀಗ ಸೈಲ್ ಅವರ ಶಾಸಕ ಸ್ಥಾನಕ್ಕೂ ಕುತ್ತು ಬಂದಿದೆ.












Click it and Unblock the Notifications